ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು, ನನ್ನದೇ ಕ್ಷೇತ್ರಕ್ಕೆ ಬಂದು, ನನ್ನ ಹೆಸರನ್ನು ಪ್ರಸ್ತಾಪಿಸದೇ ಇರುವುದು ಚುನಾವಣೆ ತಂತ್ರಗಾರಿಕೆ ಇರಬಹುದು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಯಾವುದೇ ಆಪಾದನೆ ಇಲ್ಲದೇ ಇರುವುದರಿಂದಲೂ ತಮ್ಮ ಹೆಸರು ಬಳಸಿಕೊಂಡಿಲ್ಲ ಎಂದು ಹೇಳಿದರು.
ಸಂಸತ್ತಿನಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ. ಅದಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಇಲ್ಲಿ ಏನಾದರೂ ಹೇಳಿದರೆ ತಾವೂ ಸೂಕ್ತ ಉತ್ತರ ಕೊಡುತ್ತೇನೆಂದು, ಜತೆಗೆ ಭಾರಿ ಪ್ರಚಾರ ನಡೆಸಿ ಕಲಬುರಗಿಗೆ ಬಂದರೂ ಏನೂ ಕೊಡುಗೆ ನೀಡದೇ ಇರುವ ನೋವಿನಿಂದ ಚಕಾರವೆತ್ತಿರಲಿಕ್ಕಿಲ್ಲ. ಬೆಂಗಳೂರಿನಲ್ಲಿನ ಮೂರು, ರಾಯಚೂರು ಹಾಗೂ ಹುಬ್ಬಳ್ಳಿಯಲ್ಲಿನ ಕಾಮಗಾರಿಗಳಿಗೆ ಚಾಲನೆ ನೀಡುವುದಕ್ಕಾಗಿ ಬಟನ್ ಒತ್ತುವ ಸಲುವಾಗಿ ಕಲಬುರಗಿಗೆ ಬರಬೇಕಿತ್ತೇ? ಅಲ್ಲೇ ಹೋಗಿ ಚಾಲನೆ ನೀಡಬಹುದಿತ್ತಲ್ಲ ಎಂದು ಪ್ರಶ್ನಿಸಿದರು.
ದೇಶದ ಪ್ರಧಾನಿ ಕಲಬುರಗಿಗೆ ಬಂದು ಏನಾದರೂ ಕೊಡುಗೆ ನೀಡಬಹುದೆಂದು ಜನ ನಿರೀಕ್ಷಿಸಿದ್ದರು. ಏನೂ ನೀಡದೇ ಬರಿಗೈಲಿ ಹೋಗಿದ್ದಾರೆ. ರೈಲ್ವೆ ವಿಭಾಗೀಯ ಕಚೇರಿ ಸಲುವಾಗಿ ಭೂಮಿ ಸಹ ನೀಡಲಾಗಿದ್ದು, ಐದು ಕೋಟಿ ರೂ. ತೆಗೆದಿರಿಸಲಾಗಿದೆ.
ನೆರೆಯ ಆಂಧ್ರ ಪ್ರದೇಶದಲ್ಲಿ ಏನೂ ಸಿದ್ಧತೆ ಹಾಗೂ ಸೌಕರ್ಯಗಳು ಇರದಿದ್ದರೂ ರೈಲ್ವೆ ವಲಯ ಸ್ಥಾಪಿಸಲಾಗಿದೆ. ಆದರೆ ಹೈಕ ಭಾಗದ ರೈಲ್ವೆ ವಿಭಾಗ ಕಾರ್ಯಾರಂಭಕ್ಕೆ ಮುಂದಾಗುತ್ತಿಲ್ಲ. 371 (ಜೆ)ವಿಧಿ ಅಡಿಯಾದರೂ ಏನಾದರೂ ಕೇಂದ್ರದಿಂದ ನೀಡಬಹುದಿತ್ತು. ಆದರೆ ಬರೀ ಭಾಷಣ ಮಾಡಿದರು.
ಭಾಷಣದಿಂದ ಹೊಟ್ಟೆ ತುಂಬಲ್ಲ ಎಂದು ಟೀಕಿಸಿದರು. ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಕಲಬುರಗಿ ಭಾಗದಲ್ಲಿ ಮಂಜೂರಾದ ರಾಷ್ಟ್ರೀಯ ಹೆದ್ದಾರಿ ಕಾರ್ಯ ಶೇ. 70ರಷ್ಟು ಮುಗಿದಿದೆ. ಈಗ ಅದನ್ನು ತಮ್ಮದೆಂದು ಹೇಳಿಕೊಂಡಿದ್ದಾರೆ. ಈ ಭಾಗದ ಹಲವಾರು ಕಾಮಗಾರಿಗಳ ಸಂಬಂಧಪಟ್ಟ ಫೈಲ್
ಮಂಜೂರಾತಿ ಸಿಗದೇ ಹಾಗೆ ಬಿದ್ದಿವೆ. ಒಟ್ಟಾರೆ ನಾಲ್ಕು ವರ್ಷಗಳ ಕಾಲ ಸುಮ್ಮನಿದ್ದು, ಈಗ ಉದ್ಘಾಟನೆ ಮಾಡಲಿಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ನಾನು ವಿದ್ಯಾರ್ಥಿದೆಸೆಯಿಂದ ಹೋರಾಟ ಮೈಗೂಡಿಸಿಕೊಂಡು ರಾಜಕೀಯಕ್ಕೆ ಬಂದಿದ್ದೇನೆ. ಕಳೆದ 50 ವರ್ಷಗಳ ಕಾಲ
ರಾಜಕೀಯದಲ್ಲಿ ಎಲ್ಲವನ್ನೂ ಸವೆಸಿ ಇಲ್ಲಿಯವರೆಗೆ ಬಂದಿದ್ದೇನೆ. ಮುಂಬರುವ ಲೋಕಸಭೆ ಚುನಾವಣೆ ತಮ್ಮದು ಕೊನೆ ಎಂಬುದಾಗಿ ಹೇಳಿಲ್ಲ. ಇದು ತಮ್ಮ ಕೊನೆ ಚುನಾವಣೆಯಲ್ಲ.
●ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ನಾಯಕ