ಬೆಂಗಳೂರು: ವರಮಹಾಲಕ್ಷ್ಮೀಯನ್ನು ಮನೆ ತುಂಬಿಸಿಕೊಳ್ಳಲು ಸಿದ್ಧವಾಗಿರುವ ಹೆಂಗೆಳೆಯರು ಫಲಪುಷ್ಪಗಳ ಬೆಲೆ ಕೇಳಿ ಬೆಚ್ಚಿಬೀಳುತ್ತಿದ್ದಾರೆ! ವರಮಹಾಲಕ್ಷ್ಮೀ ಹಬ್ಬದ ತಯಾರಿಗೆ ಮುಂದಾಗಿರುವ ನಗರದ ಮಹಿಳೆಯರಿಗೆ ಕನಕಾಂಬರ, ಮಲ್ಲಿಗೆ, ಕಾಕಡ ಹೂವಿನ ಬೆಲೆ ಶಾಕ್ ನೀಡಿದೆ.
ಕನಕಾಂಬರ ಒಂದು ಕೆ.ಜಿಗೆ 2 ಸಾವಿರ ರೂ. ಕಾಕಡ ಹಾಗೂ ಮಲ್ಲಿಗೆ ಬೆಲೆ 300 ರೂ.ಗೆ ಏರಿಕೆಯಾಗಿದೆ. ಇನ್ನು ಸುಗಂಧರಾಜದ ಹಾರಗಳು 150ರಿಂದ 200 ರೂ.ಗೆ ಮಾರಾಟವಾಗುತ್ತಿವೆ. ಕಳೆದ ವಾರ ಒಂದು ಕೆ.ಜಿಗೆ 50ರಿಂದ 60 ರೂ. ಇದ್ದ ಹಳದಿ ಸೇವಂತಿಗೆ, ಬಿಳಿ ಸೇವಂತಿಗೆ ಹಾಗೂ ಮರಿಗೋಲ್ಡ್ ಸೇವಂತಿಗೆ ಬೆಲೆ, ಬುಧವಾರ 120ರಿಂದ 200 ರೂ.ಗಳಿಗೆ ಏರಿಕೆಯಾಗಿತ್ತು. ಅಲ್ಲದೆ ಹಣ್ಣುಗಳ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ. ಸೇಬು ಹಣ್ಣು 170ರಿಂದ 200 ರೂ., ಪೇರಳೆ 80ರಿಂದ 100 ಹಾಗೂ ದಾಳಿಂಬೆ ಬೆಲೆ 150ರಿಂದ 200 ರೂ. ಇದೆ.
ಆಷಾಢದಲ್ಲಿ ಕಡಿಮೆ ಇದ್ದ ಬೆಲೆ ಶ್ರಾವಣ ಮಾಸ ಪ್ರಾರಂಭವಾಗುತ್ತಿದ್ದಂತೆ ಹೆಚ್ಚಾಗಿದೆ. ಅದರಲ್ಲೂ ವಾರದಿಂದ ಈಚೆಗೆ ತೀರಾ ಏರಿಕೆಯಾಗಿದೆ. ವರಮಹಾಲಕ್ಷ್ಮೀ ಮೂರ್ತಿಗಳ ಅಲಂಕಾರಕ್ಕೆ ಬಳಸುವ ತಾವರೆ ಮೊಗ್ಗು, ಕೇದಿಗೆ, ಸುಳಿಗರಿ, ತಾಳೆ ಎಲೆ ವಿನ್ಯಾಸಗಳು, ಸರಗಳು, ಬಳೆಗಳ ಬೆಲೆ ಕೂಡ ದುಪ್ಪಟ್ಟಾಗಿದೆ. ತೆಂಗಿನ ಕಾಯಿಯಲ್ಲಿ ಮಾಡಿದ ಲಕ್ಷ್ಮಿ ಮುಖವಾಡಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅವುಗಳ ಬೆಲೆ ಕೂಡ ಏರಿದೆ.
ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಸರ್ಜಾಪುರ, ಶಿಡ್ಲಘಟ್ಟ, ಕನಕಪುರ, ಚನ್ನಪಟ್ಟಣ್ಣದಿಂದ ಕೆ.ಆರ್.ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಹೂವು, ಹಣ್ಣುಗಳು ಬಂದಿವೆ. ಸೀತಾಫಲ, ಏಲಕ್ಕಿ ಬಾಳೆಹಣ್ಣು, ಸೀಬೆ, ಅನಾನಸ್, ದ್ರಾಕ್ಷಿ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಲ್ಲಿಗೆ, ಬಟನ್ ರೋಸ್, ಸುಗಂಧರಾಜ, ಮಾರಿಗೋಲ್ಡ್ ಸೇವಂತಿಗೆ, ತಾವರೆ, ಕಾಕಡ, ಮಲ್ಲೆ ಈ ಹೂವು ಬಾಳೆಕಂಬಗಳಿಗೂ ಡಿಮ್ಯಾಂಡ್ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿ ಮುಬಾರಕ್. ಗುರುವಾರ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅದರಲ್ಲೂ ಬೆಳಗ್ಗೆ 6 ರಿಂದ 8ರವರೆಗೆ ಮಾರುಕಟ್ಟೆಗಳಲ್ಲಿ ಚಿಲ್ಲರೆ ವ್ಯಾಪಾರಿಗಳು ಖರೀದಿ ಮಾಡುವ ಕಾರಣ ಬೆಲೆ
ಹೆಚ್ಚಿರುತ್ತದೆ. ಮಧ್ಯಾಹ್ನದ ವೇಳೆಗೆ ಬೆಲೆ ಕೊಂಚ ಇಳಿಕೆಯಾಗಲಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ಶಿವಣ್ಣ.
ಮಾರುಕಟ್ಟೆಗೆ ಮುಗಿಬಿದ್ದ ಜನ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಹೂವು-ಹಣ್ಣು ಖರೀದಿಗೆ ಕೆ.ಆರ್.ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು. ಹೀಗಾಗಿ ಕೆ.ಆರ್.ಮಾರುಕಟ್ಟೆ ಸುತ್ತಮುತ್ತ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಹಣ್ಣಿನ ಮಾರುಕಟ್ಟೆಗಿಂತ ಹೂವಿನ ಮಾರುಕಟ್ಟೆಯಲ್ಲಿ ಬಿರುಸಿನ ವ್ಯಾಪಾರವಿತ್ತು. ಜನ ತುಂಬಿ ತುಳುಕುತ್ತಿದ್ದರು. ಪೊಲೀಸರಿಗೂ ವಾಹನ ಸಂಚಾರ ನಿಭಾಯಿಸುವುದು ಕಷ್ಟವಾಗಿತ್ತು.