Advertisement
ಐದಾರು ವರ್ಷಗಳ ಹಿಂದಿರಬಹುದು. ಅದೇಕೋ ಒಂದು ಸಂಜೆ, ನನ್ನ ಕೇಶವಿನ್ಯಾಸವನ್ನು ಕೊಂಚ ಬದಲಾಯಿಸಿಕೊಳ್ಳೋಣ ಅಂತ ಕನ್ನಡಿಯ ಮುಂದೆ ನಿಂತು ವಿವಿಧ ಬಗೆಯ ಪ್ರಯೋಗಗಳನ್ನು ಮಾಡುತ್ತಿದ್ದೆ. ವಿವಿಧ ಕೋನಗಳಿಂದ ನಿರುಕಿಸುತ್ತಿದ್ದೆ. ಅರೆ ಅದೇನು?! ಬೆಳ್ಳಿಯ ಎಳೆಯೊಂದು ಫಳ್ಳನೆ ಮಿಂಚಿದಂತಾಯಿತು! ಎದೆ ಧಸಕ್ಕೆಂದಿತು. ಕೂದಲು ನೆರೆಯುವಷ್ಟು ವಯಸ್ಸಾಯಿತೇ ನನಗೆ? ಎಂದು ಕನ್ನಡಿಯಲ್ಲಿ ಮತ್ತೆ ಮತ್ತೆ ಮುಖ ನೋಡಿಕೊಂಡೆ.
Related Articles
Advertisement
ದೋಸೆಯ ಹಿಟ್ಟನ್ನು ಹುದುಗಲಿಡುವಷ್ಟೇ ಶ್ರದ್ಧೆಯಿಂದ ಈ ಮಿಶ್ರಣವನ್ನು ಕಲಸಿಟ್ಟೆ. ಮರುದಿನ ತಲೆಗೆಲ್ಲ ಲೇಪಿಸಿ ತಾಸುಗಟ್ಟಲೆ ಇಡುವ ಕಷ್ಟವನ್ನು ಸಹಿಸಿಕೊಂಡು ಅಭ್ಯಂಜನ ಮಾಡಿದೆ. ನನ್ನ ಕೂದಲಿನ ಮೂಲ ಬಣ್ಣ ಮರಳಿ ಬಂದಿರಬಹುದೆಂಬ ಖುಷಿಯಿಂದ ಕನ್ನಡಿಯಲ್ಲಿ ನನ್ನನ್ನೇ ನಾನು ನೋಡಿಕೊಂಡೆ. ಬಿಳಿಕೂದಲೆಲ್ಲ ವಿಚಿತ್ರ ಹಳದಿಯಾಗಿ ಬದಲಾಗಿತ್ತು! ತಲೆಗೆ ಅಲ್ಲಲ್ಲಿ ಕಿಚ್ಚಿಟ್ಟಂತೆ ಕಂಡಿತು. ನಿರಾಸೆಯಾಯಿತು.
ನನ್ನ ಬಣ್ಣದ ಕೂದಲು ನಮ್ಮ ಬಳಗದ ಬಾಯಿಗೊಂದು ಆಹಾರವಾಯಿತು. ಪುಕ್ಕಟೆ ಸಲಹೆಗಳು ಹರಿದುಬರತೊಡಗಿದವು. ಚಹಾ ಬೇಡ, ಕಾಯಿ ನೀರಲ್ಲಿ ಕಲಸು; ಲೋಳೆಸರ ಹಾಕು; ಮೆಂತ್ಯ ಹಾಕು… ಕೂದಲು ಸೊಂಪಾಗಿ ಬೆಳೆಯುತ್ತದೆ… ಹೀಗೇ ಸಲಹೆಗಳು. ಕೂದಲೇನೋ ಸೊಂಪಾಗಿಯೇ ಬೆಳೆಯಿತು, ಆದರೆ ಅದೇ ಕಪ್ಪು-ಕೆಂಪು. ಕರಿಬೇವಿನ ಸೊಪ್ಪನ್ನು ಹಾಕಬೇಕೆನ್ನುವ ಸಲಹೆಯೂ ಬಂತು. ಆದರೆ, ಇದನ್ನು ಜಾರಿಗೊಳಿಸಿದಾಗ ಮಾತ್ರ ನಮ್ಮ ಮನೆಯ ಅಡುಗೆ ಪರಿಮಳವಿಲ್ಲದೇ ಮಂಕಾಗತೊಡಗಿತು.
ಅಡುಗೆಗಾಗಿ ತಂದ ಕರಿಬೇವಿನ ಸೊಪ್ಪು, ನನ್ನ ಮೆಹಂದಿ ಮಸಾಲೆಯಲ್ಲಿ ಸೇರತೊಡಗಿತು. ಅವುಗಳ ಪರಿಣಾಮ ಮಾತ್ರ ನಾ ಕಾಣೆ. ನನ್ನ ತಲೆಗೆ ಕೆಂಪನೆಯ ಶಾಲು ಸುತ್ತಿದಂತಿತ್ತು. ಕರಿಬೇವಿನ ಸೊಪ್ಪನ್ನು ಕಪ್ಪಗೆ ಹುರಿದು ಹಾಕೆಂದರು. ಹಾಗೆ ಮಾಡಿದ ಮೇಲೂ ನನ್ನ ಕೂದಲು ಮೊದಲಿನ ಬಣ್ಣ ಪಡೆಯಲೇ ಇಲ್ಲ. ಫೇಸ್ ಬುಕ್ ಜಾಲಾಡಿಸುತ್ತಿರುವಾಗ ಈ ಬಗ್ಗೆ ಯಾರ್ಯಾರೋ ಹಂಚಿಕೊಂಡ ವಿವರಣೆಗಳು ಅಲ್ಲಲ್ಲಿ ಕಾಣಸಿಗುತ್ತಿರುತ್ತವೆ.
ಅವೇ ಮದರಂಗಿ ಸೊಪ್ಪು, ಚಹಾದ ಕಷಾಯ, ಬೀಟ್ರೂಟ್, ನೆಲ್ಲಿಕಾಯಿ ಹುಡಿ ಇತ್ಯಾದಿಗಳನ್ನು ಬಳಸಿ ಎಂಬುದೆಲ್ಲ ನಾನು ಈ ಮೊದಲೇ ಪ್ರಯೋಗಿಸಿದ ಪರಿಹಾರಗಳು. ಅದರಲ್ಲಿ ನಾನು ಬಳಸದೇ ಬಿಟ್ಟಿದ್ದ ಯಾವುದಾದರೊಂದು ಸಾಮಗ್ರಿ ಕಂಡಿತೆಂದರೆ, ಕೂಡಲೆ ಮಿಶ್ರಣ ತಯಾರು ಮಾಡಿ ಪ್ರಯೋಗಿಸುತ್ತಿದ್ದೆ, ಕೂದಲು ಕಪ್ಪಾಗುವ ಯುರೇಕಾ ಕ್ಷಣ ಬಂದರೂ ಬರಬಹುದೆನ್ನುವ ಭರವಸೆಯಿಂದ. ನನ್ನ ತಲೆ ದಿನದಿಂದ ದಿನಕ್ಕೆ ಕೆಂಪೇರತೊಡಗಿದಾಗ, ನನ್ನ ಬಳಗದವರು, ಅವರವರು ಉಪಯೋಗಿಸುವ ಹತ್ತಾರು ಬ್ರ್ಯಾಂಡ್‌ಗಳ ಹೇರ್ ಡೈ ಹೆಸರನ್ನು ಹೇಳತೊಡಗಿದರು.
“ಎಷ್ಟು ವರ್ಷಗಳಿಂದ ಉಪಯೋಗಿಸ್ತಾ ಇದ್ದೇನೆ, ನೋಡು,’ ಎಂದು ತಮ್ಮ ಕಾಡಿಗೆ ಕಪ್ಪಿನ ಕೇಶರಾಶಿಯ ಸಾಕ್ಷಿಯಾಗಿ ಹೇಳುತ್ತಿದ್ದರು. ಆದರೆ, ನನಗೆ ಮಾರುಕಟ್ಟೆಯಲ್ಲಿ ಸಿಗುವ ಬಣ್ಣಗಳೆಂದರೆ ಕೊಂಚ ಭಯ. ಅವುಗಳೊಳಗಿರುವ ರಾಸಾಯನಿಕಗಳು ನನಗೆ ಒಗ್ಗಿಲ್ಲವೆಂದರೆ, ಏನಾದರೂ ವ್ಯತಿರಿಕ್ತ ಪರಿಣಾಮವಾದರೆ ಎಂಬ ಆತಂಕ. ಕೆಲವೊಮ್ಮೆ ಉಪಯೋಗಿಸಿದ್ದೂ ಇದೆ. ಆದರೆ, ಅವುಗಳನ್ನು ದೀರ್ಘಕಾಲ ಬಳಸಲು ಮನಸ್ಸಾಗುತ್ತಿಲ್ಲ.
ಹುಂ… ಕೊನೆಗೂ, ಈ ಕಪ್ಪು-ಬಿಳುಪಿನ ಜಿದ್ದಾಜಿದ್ದಿಯಲ್ಲಿ ಸೋಲೊಪ್ಪಿಕೊಂಡಿದ್ದೇನೆ. ಆದರೆ ಒಂದಂತೂ ನಿಜ. ಬಿಳಿಕೂದಲಿರಲಿ ಅಥವಾ ಬಿಳಿಕೂದಲಿಲ್ಲದಿರಲಿ, ನನ್ನೊಳಗಿನ ಉತ್ಸಾಹ, ಚೈತನ್ಯ ಮಾತ್ರ ಅದೇ. ಒಂದಿನಿತೂ ಕುಂದಿಲ್ಲ. ಯಾಕೋ ನನ್ನ ಕೂದಲಿನಂತೆ ನನ್ನ ಅಲೋಚನೆಗಳೂ ಮಾಗತೊಡಗಿವೆ ಎಂದು ಈಗೀಗ ಅನಿಸತೊಡಗಿದೆ. Graceful ageing. ಏನಂತೀರ?
* ಸಾಣೂರು ಇಂದಿರಾ ಆಚಾರ್ಯ