ಶ್ರೀನಗರ : ನಾರ್ವೆಯ ಮಾಜಿ ಪ್ರಧಾನಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದು ಅವರು ರಾಜ್ಯದಲ್ಲಿನ ಪ್ರತ್ಯೇಕತಾವಾದಿ ನಾಯಕರನ್ನು ಭೇಟಿಯಾಗಿರುವ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕೆಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಆಗ್ರಹಿಸಿದ್ದಾರೆ.
ಈ ಬಗ್ಗೆ ಅಬ್ದುಲ್ಲ ಅವರು ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಟ್ವೀಟ್ ಮಾಡಿದ್ದಾರೆ. “ನಾರ್ವೆಯವರಿಗೆ ಜಮ್ಮು ಕಾಶ್ಮೀರದಲ್ಲೇನು ಕೆಲಸ ? ಅವರೇಕೆ ಇಲ್ಲಿದ್ದಾರೆ ? ನಿಮ್ಮಲ್ಲಿ ಯಾರಾದರೊಬ್ಬರು ಉತ್ತರಿಸುವಿರಾ?’ ಎಂದು ಅಬ್ದುಲ್ಲ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
ನಾರ್ವೆ ಮಾಜಿ ಪ್ರಧಾನಿ ಜೆಲ್ ಮ್ಯಾನ್ ಬಾಂಡ್‌ವಿಕ್ ಅವರು ಕಳೆದ ಶುಕ್ರವಾರ ಶ್ರೀನಗರದಲ್ಲಿನ ಹಿರಿಯ ಪ್ರತ್ಯೇಕತಾವಾದಿ ನಾಯಕರನ್ನು ಸಯ್ಯದ್ ಅಲಿ ಗೀಲಾನಿ ಅವರ ಹೈದರಪುರದಲ್ಲಿನ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ವರದಿಗಳು ತಿಳಿಸಿವೆ.
ಜಂಟಿ ಪ್ರತಿರೋಧ ನಾಯಕತ್ವದಡಿಯ ಹಿರಿಯ ಪ್ರತ್ಯೇಕತಾವಾದಿಗಲೊಂದಿಗೆ (ಜೆಆರ್‌ಎಲ್) ಬಾಂಡ್‌ವಿಕ್ ನಡೆಸಿರುವ ಮಾತುಕತೆ ಫಲಪ್ರದವಾಗಿದೆ ಎಂದು ಹಿರಿಯ ಪ್ರತ್ಯೇಕತಾವಾದಿ ನಾಯಕ ಮೀರ್ ವೇಜ್ ಉಮರ್ ಫಾರೂಕ್ ಟ್ವೀಟ್ ಮಾಡಿರುವುದು ಕೂಡ ಗಮನಾರ್ಹವಾಗಿದೆ.
ಕಾಶ್ಮೀರ ಪ್ರಶ್ನೆಯನ್ನು ಶಾಶ್ವತ ನೆಲೆಯಲ್ಲಿ ಶಾಂತಿಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ತಾನು ರಚನಾತ್ಮಕ ಸಂಧಾನಕಾರನ ಪಾತ್ರ ವಹಿಸಲು ಸಿದ್ಧನಿದ್ದೇನೆ ಎಂದು ಈ ಹಿಂದೆಯೇ ನಾರ್ವೆ ಹೇಳಿರುವುದು ಇಲ್ಲಿ ಉಲ್ಲೇಖನೀಯ.