Advertisement

ಬಸ್‌ ಸಂಚಾರಕ್ಕೆ ವಾಯವ್ಯ ಸಾರಿಗೆ ಸಜ್ಜು

12:48 PM May 18, 2020 | Suhan S |

ಹುಬ್ಬಳ್ಳಿ: ಕೇಂದ್ರದ ಗೃಹ ಸಚಿವಾಲಯ ಬಸ್‌ ಸಂಚಾರಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಗತ್ಯ ಸಿದ್ಧತೆ ಮಾಡಿಕೊಂಡು ರಾಜ್ಯ ಸರಕಾರದ ನಿರ್ಧಾರಕ್ಕಾಗಿ ಎದುರು ನೋಡುತ್ತಿದೆ. ಲಾಕ್‌ಡೌನ್‌ 4.0ದಲ್ಲಿ ಬಸ್‌ ಸಂಚಾರಕ್ಕೆ ಅವಕಾಶ ನೀಡಬಹುದು ಎನ್ನುವ ದಟ್ಟವಾದ ನಿರೀಕ್ಷೆ ಹಿನ್ನೆಲೆಯಲ್ಲಿ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ.

Advertisement

ಇದೀಗ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದ್ದು, ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರಕಾರಕ್ಕೆ ನೀಡಿದೆ. ರೆಡ್‌ಜೋನ್‌ಗಳನ್ನು ಹೊರತುಪಡಿಸಿ ಇತರೆಡೆ ಬಸ್‌ ಸಂಚಾರಕ್ಕೆ ರಾಜ್ಯ ಸರಕಾರದ ಅನುಮತಿ ದೊರೆಯುವ ಸಾಧ್ಯತೆಯಿದೆ ಎನ್ನುವ ವಿಶ್ವಾಸ ಅಧಿಕಾರಿಗಳಲ್ಲಿದೆ.

ನಾಲ್ಕು ಹಂತದ ತಯಾರಿ: ಯಾವ ಕ್ಷಣದಲ್ಲಿ ಮಾರ್ಗಸೂಚಿ ನೀಡಿದರೂ ತಕ್ಷಣವೇ ಬಸ್‌ ಕಾರ್ಯಾಚರಣೆಗೆ ಸಿದ್ಧವಿರಬೇಕು ಎಂದು ನಿಗಮ ವ್ಯಾಪ್ತಿಯ ಎಲ್ಲಾ ವಿಭಾಗಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾ ವ್ಯಾಪ್ತಿ, ಇತರೆ ಜಿಲ್ಲೆಗಳಿಗೆ, ತಾಲೂಕು ಕೇಂದ್ರಗಳಿಗೆ ಹಾಗೂ ಕನಿಷ್ಠ ಬಸ್‌ ಸಂಚಾರದ ಆಧಾರದ ಮೇಲೆ ತಯಾರಿ ಮಾಡಿಕೊಳ್ಳಲಾಗಿದೆ. ಪ್ರಯಾಣಿಕರ ಬೇಡಿಕೆ ಆಧಾರದ ಮೇಲೆ ಬಸ್‌ ಪ್ರಮಾಣ ಹೆಚ್ಚಳ, ನಷ್ಟದ ಪ್ರಮಾಣ ಗಣನೀಯವಾಗಿ ತಗ್ಗಿಸುವ ಪ್ರಮುಖ ಉದ್ದೇಶವಿದೆ.

ನಿಲ್ದಾಣಗಳಲ್ಲಿ ಕಟ್ಟೆಚ್ಚರ: ಕೋವಿಡ್ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ತಾಲೂಕು ಮತ್ತು ಜಿಲ್ಲಾ ಬಸ್‌ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ನಿಲ್ದಾಣಗಳಿಗೆ ಪ್ರಯಾಣಿಕರು ಬೇಕಾಬಿಟ್ಟಿ ನುಗ್ಗುವುದಕ್ಕೆ ಕಡಿವಾಣ ಹಾಕಲಾಗಿದ್ದು, ಪ್ರವೇಶ ದ್ವಾರ ನಿರ್ಮಿಸಲಾಗುತ್ತಿದೆ. ಈ ದ್ವಾರದಿಂದಲೇ ಪ್ರಯಾಣಿಕರು ಒಳ ಪ್ರವೇಶಿಸಬೇಕು. ಪ್ರತಿಯೊಬ್ಬರು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಬೇಕು. ನಿಲ್ದಾಣದೊಳಗೆ ಆಟೋ ರಿಕ್ಷಾ, ಖಾಸಗಿ ವಾಹನಗಳ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದ್ದು, ಪ್ರವೇಶ ದ್ವಾರದಲ್ಲೇ ಪ್ರಯಾಣಿಕರನ್ನು ಇಳಿಸಬೇಕು. ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸೇರದಂತೆ ನೋಡಿಕೊಳ್ಳಲು ಅಗತ್ಯ ಬಸ್‌ ಗಳ ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗಿದೆ.

ಸಿಬ್ಬಂದಿ ಬಳಕೆ: ಪ್ರಮುಖವಾಗಿ ಚಾಲನಾ ಸಿಬ್ಬಂದಿಯ ಸಿದ್ಧತೆಗೆ ಗಮನ ಹರಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ವೈದ್ಯಕೀಯ ತಪಾಸಣೆಗೊಳಪಟ್ಟು ಸಾಮರ್ಥಯ ಪ್ರಮಾಣಪತ್ರ ತರಬೇಕು. 50 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಸದ್ಯ ವಿನಾಯಿತಿ ನೀಡಲಾಗಿದೆ. ಅಗತ್ಯ ಮೇರೆಗೆ ಚಾಲನಾ ಸಿಬ್ಬಂದಿ ಕರ್ತವ್ಯ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಳಿದ ಸಿಬ್ಬಂದಿಯನ್ನು ಬಸ್‌ ನಿಲ್ದಾಣ, ಪ್ರವೇಶ ದ್ವಾರ ಹಾಗೂ ಇನ್ನಿತರೆ ಕರ್ತವ್ಯಗಳಿಗೆ ನಿಯೋಜಿಸಲಾಗುವುದು.

Advertisement

ಬಸ್‌ ಸ್ವಚ್ಛತೆಗೆ ಒತ್ತು: ಕಾರ್ಯಾಚರಣೆಗೊಳ್ಳುವ ಬಸ್‌ ಗಳ ಸ್ವಚ್ಛತೆಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಡಿಪೋದಿಂದ ಹೊರಹೋಗುವ ಹಾಗೂ ಒಳಬರುವ ಬಸ್‌ಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್‌ ಮಾಡುವುದು, ಚಾಲಕ ಮತ್ತು ನಿರ್ವಾಹಕ ಕಡ್ಡಾಯವಾಗಿ ಕೈಗವಸು, ಮಾಸ್ಕ್, ಫೇಸ್‌ ಶೀಲ್ಡ್‌ ಧರಿಸುವುದು, ನಿರ್ವಾಹಕರು ಆದಷ್ಟು ಪ್ರಯಾಣಿಕರಿಂದ ಅಂತರ ಕಾಪಾಡಿಕೊಳ್ಳಬೇಕು. ಇನ್ನು ಪ್ರಯಾಣಿಕರ ಆರೋಗ್ಯದ ಬಗ್ಗೆಯೂ ಒಂದಿಷ್ಟು ಗಮನ ಹರಿಸಬೇಕಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಪ್ರತಿ ಸಿಬ್ಬಂದಿಯನ್ನು ನಿತ್ಯವು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತದೆ.

ನಷ್ಟ ಹೆಚ್ಚಾಗುವ ಆತಂಕ : ಹಾಲಿ ದರದಲ್ಲಿ ಬಸ್‌ನ ಎಲ್ಲ ಆಸನ ಭರ್ತಿ ಮಾಡಿ ಕಾರ್ಯಾಚರಣೆ ಮಾಡಿದರೆ ಪ್ರತಿ ಕಿಮೀ ಆದಾಯ 29-30 ರೂ. ಇದ್ದು, 36 ರೂ. ಖರ್ಚು ತಗಲುತ್ತಿತ್ತು. ಕೇಂದ್ರ ಸರಕಾರದ ಸದ್ಯದ ಮಾರ್ಗಸೂಚಿ ಪ್ರಕಾರ ಬಸ್‌ನ ಒಟ್ಟು ಆಸನಗಳ ಶೇ.50 ಮಾತ್ರ ಪ್ರಯಾಣಿಕರು ಇರಬೇಕು. ಇದರಿಂದ ಪ್ರತಿ ಕಿಮೀ 15-16 ರೂ. ಆದಾಯ ಬರಲಿದೆ. ಅಲ್ಲದೇ ಶೇ. 50 ಪ್ರಯಾಣಿಕರು ಭರ್ತಿಯಾಗದ ಹೊರತು ಬಸ್‌ ನಿಲ್ದಾಣದಿಂದ ನಿರ್ಗಮಿಸುವಂತಿಲ್ಲ. ಈ ಮಾರ್ಗಸೂಚಿ ಪ್ರಕಾರ ಬಸ್‌ ಕಾರ್ಯಾಚರಣೆಗೊಳಿಸಿದರೆ ಸಂಸ್ಥೆಯ ನಷ್ಟದ ಪ್ರಮಾಣ ಹೆಚ್ಚಲಿದೆ ಎನ್ನುವ ಲೆಕ್ಕಾಚಾರ ಅಧಿಕಾರಿಗಳದ್ದಾಗಿದೆ.

ಕೇಂದ್ರ ಸರಕಾರ ನೀಡುವ ಮಾರ್ಗಸೂಚಿಗಳ ಪ್ರಕಾರ ಬಸ್‌ ಕಾರ್ಯಾಚರಣೆಗೊಳಿಸಲು ವಿವಿಧ ಹಂತದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಾಲನಾ ಸಿಬ್ಬಂದಿ, ಪ್ರಯಾಣಿಕರ ಆರೋಗ್ಯದ ಬಗ್ಗೆ ಕಾಳಜಿಯಿದೆ. ತಾಲೂಕು ಮತ್ತು ಜಿಲ್ಲಾ ಕೇಂದ್ರದ ನಿಲ್ದಾಣಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. – ಸಂತೋಷಕುಮಾರ, ಮುಖ್ಯ ಸಂಚಾರ ವ್ಯವಸ್ಥಾಪಕ, ವಾಕರಸಾ ಸಂಸ್ಥೆ

ಹುಬ್ಬಳ್ಳಿ ವಿಭಾಗದಲ್ಲಿ 2166 ಸಿಬ್ಬಂದಿಯಿದ್ದು, ಎಲ್ಲರಿಗೂ ಕರ್ತವ್ಯಕ್ಕೆ ಸಿದ್ಧರಾಗಿರಲು ಸೂಚಿಸಲಾಗಿದೆ. 462 ವಿವಿಧ ಮಾದರಿ ಬಸ್‌ಗಳಿದ್ದು, ಸರ್ಕಾರದ ನಿರ್ದೇಶನಗಳು ಬಂದ ನಂತರ ಯಾವ ಮಾದರಿ ಬಸ್‌ ಕಾರ್ಯಾಚರಣೆ ಮಾಡಬೇಕು ಹಾಗೂ ಯಾವ ಮಾರ್ಗಗಳಲ್ಲಿ ಎಷ್ಟು ಬಸ್‌ ರಸ್ತೆಗಿಳಿಸಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು. -ಎಚ್‌. ರಾಮನಗೌಡರ, ವಿಭಾಗೀಯ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next