ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಒಂದು ಸದಸ್ಯ ಸ್ಥಾನದ ಆಯ್ಕೆಗಾಗಿ ಅಕ್ಟೋಬರ್ 28ರಂದು ಚುನಾವಣೆ ನಡೆಯಲಿದ್ದು, ಕೇಂದ್ರ ಚುನಾವಣಾ ಆಯೋಗದನಿರ್ದೇಶನದಂತೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ಬಳಿ ನಗದಾಗಿ 50 ಸಾವಿರ ರೂ.ಕ್ಕಿಂತ ಹೆಚ್ಚಿನ ಹಣ ಇಟ್ಟುಕೊಳ್ಳುವಂತಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿ ಕಾರಿಯಾಗಿರುವ ವಿ.ವಿ. ಜ್ಯೋತ್ಸ್ನಾ ಹೇಳಿದರು.
ಅವರು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸೋಮವಾರ ಸಭೆ ನಡೆಸಿದರು. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಚುನಾವಣೆ ಖರ್ಚಿಗೆ ಯಾವುದೇ ಮಿತಿ ಇಲ್ಲ ಎಂದುಸ್ಪಷ್ಟಪಡಿಸಿದ ಜಿಲ್ಲಾ ಧಿಕಾರಿಗಳು, ಆದರೆ ಇತರೆ ಚುನಾವಣೆಗಳಂತೆ ಮಾದರಿ ನೀತಿ ಸಂಹಿತೆ ಇಲ್ಲಿಯೂ ಅನ್ವಯವಾಗಲಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಶಾಂತಿ ರೀತಿಯ ಚುನಾವಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರಸ್ತುತ ಕೋವಿಡ್-19 ಇರುವ ಹಿನ್ನೆಲೆಯಲ್ಲಿ ಪ್ರಚಾರದ ಸಂದರ್ಭದಲ್ಲಿ ಕೋವಿಡ್ ಸೋಂಕು ತಡೆಗಟ್ಟುವನಿಟ್ಟಿನಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ರಾಜಕೀಯ ಪಕ್ಷಗಳ ಮುಖಂಡರಿಗೆ ನಿರ್ದೇಶನ ನೀಡಿದ ಅವರು, ಪ್ರತಿ ಮತದಾನ ಕೇಂದ್ರಕ್ಕೆ ರಾಜಕೀಯ ಪಕ್ಷಗಳು ಮೂವರು ಮತದಾನ ಏಜೆಂಟ್‌ಗಳ ಹೆಸರನ್ನು ಆದಷ್ಟು ಬೇಗ ಜಿಲ್ಲಾಡಳಿತಕ್ಕೆ ನೀಡಬೇಕು. ಕಲಬುರಗಿ ಜಿಲ್ಲೆಯಲ್ಲಿಮತದಾನಕ್ಕೆ 41 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಮತದಾನ ಕಾರ್ಯಕ್ಕಾಗಿ 41 ಜನ ಪಿಆರ್‌ಒ, 41 ಎಪಿಆರ್‌ಒ ಹಾಗೂ 82 ಜನ ಪೊಲಿಂಗ್ ಸಿಬ್ಬಂದಿ ಸೇರಿದಂತೆ ಒಟ್ಟಾರೆ 164 ಜನರನ್ನು ನಿಯೋಜಿಸಲಾಗಿದೆ ಎಂದರು.
ಚುನಾವಣಾ ಅಕ್ರಮ ತಡೆಯಲು ಮತ್ತು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು 13 ಎಫ್.ಎಸ್.ಟಿ. ತಂಡ, 13 ವಿ.ಎಸ್.ಟಿ. ತಂಡ, 13 ವಿ.ವಿ.ಟಿ ತಂಡ ಹಾಗೂ 17 ಜನ ಸೆಕ್ಷನ್ ಅ ಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಡಿ.ಸಿ. ವಿ.ವಿ. ಜ್ಯೋತ್ಸ್ನಾ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ| ಶಂಕರ ವಣಿಕ್ಯಾಳ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಭೆಯಲ್ಲಿದ್ದರು.