Advertisement

ಆದಾಯ ಸೋರಿಕೆ ತಡೆಗೆ ವಾಯವ್ಯ ಸಾರಿಗೆ ಯತ್ನ

02:24 PM Oct 20, 2022 | Team Udayavani |

ಹುಬ್ಬಳ್ಳಿ: ಟಿಕೆಟ್‌ ರಹಿತ ಪ್ರಯಾಣದಿಂದ ಆಗುತ್ತಿರುವ ಸಾರಿಗೆ ಆದಾಯ ಸೋರಿಕೆ ತಡೆಯಲು ವಾಯವ್ಯ ಸಾರಿಗೆ ಸಂಸ್ಥೆ ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದು, ತನಿಖಾ ಸಿಬ್ಬಂದಿ(ವಿಚಕ್ಷಣ ತಂಡ) ಕೊರತೆಯ ನಡುವೆಯೂ ತನಿಖಾ ತಂಡಗಳೊಂದಿಗೆ ಸಂಸ್ಥೆಯ ಇತರೆ ಅಧಿಕಾರಿಗಳಿಗೂ ಹೊಣೆ ನೀಡಲಾಗಿದ್ದು, ಕಳೆದ 6 ತಿಂಗಳಲ್ಲಿ ಬರೋಬ್ಬರಿ 6480 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

Advertisement

ಆದಾಯ ಸೋರಿಕೆ ತಡೆಯಲು ಸಾರಿಗೆ ಸಂಸ್ಥೆಗಳು ಕಾಲಕಾಲಕ್ಕೆ ಹತ್ತು ಹಲವು ಉಪಕ್ರಮಗಳನ್ನು ಅಳವಡಿಸಿಕೊಳ್ಳುತ್ತಿವೆ. ಇಟಿಎಂ ಯಂತ್ರಗಳ ಬಳಕೆ ಬಂದ ಮೇಲಂತೂ ಟಿಕೆಟ್‌ ರಹಿತ ಪ್ರಯಾಣಕ್ಕೆ ಬಹುತೇಕ ಕಡಿವಾಣ ಬಿದ್ದಿದೆ. ಇಷ್ಟಾದರೂ ಟಿಕೆಟ್‌ ರಹಿತ ಪ್ರಯಾಣ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ. ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್‌ ನೀಡದ ಪ್ರಕರಣಗಳೇ ಹೆಚ್ಚಿನ ಪ್ರಮಾಣಲ್ಲಿವೆ. ಹಣ ನೀಡದೆ ಟಿಕೆಟ್‌ ಪಡೆಯದೆ ಪ್ರಯಾಣಿಸುವ ಪ್ರಕರಣಗಳು ಕಡಿಮೆ. ಹೀಗಾಗಿ ಆದಾಯದ ಸೋರಿಕೆಯಲ್ಲಿ ಸಂಸ್ಥೆ ಸಿಬ್ಬಂದಿಯೇ ಕಾರಣ ಎಂಬುವುದಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಸ್‌ ತಪಾಸಣೆಗೆ ಹೆಚ್ಚು ಒತ್ತು ನೀಡಿ ಪ್ರತಿಯೊಂದು ತಂಡಕ್ಕೆ ಗುರಿ ನೀಡಲಾಗುತ್ತಿದೆ. ಸೋರಿಕೆ ಕಾರಣವಾಗಿರುವ ನಿರ್ವಾಹಕರನ್ನು ಪತ್ತೆ ಹಚ್ಚಿ ಕಾಲಕಾಲಕ್ಕೆ ಅಂತಹ ಬಸ್‌ಗಳ ಮೇಲೆ ತಪಾಸಣಾ ಕಾರ್ಯ ಮಾಡಲಾಗುತ್ತಿದೆ.

ಆದಾಯದಲ್ಲಿ ಚೇತರಿಕೆ: 2022 ಏಪ್ರಿಲ್‌ ತಿಂಗಳಿಂದ ಸೆಪ್ಟಂಬರ್‌ ಕೊನೆಯವರೆಗೆ 70 ತನಿಖಾ ಸಿಬ್ಬಂದಿ ಸೇರಿ 7700 ದಿನಗಳು ಕಾರ್ಯ ನಿರ್ವಹಿಸಿದ್ದು, 82,473 ಬಸ್‌ಗಳನ್ನು ತಪಾಸಣೆ ಮಾಡಿದ್ದಾರೆ. 6480 ಪ್ರಕರಣಗಳನ್ನು ಪತ್ತೆ ಹಚ್ಚಿ 19,044 ಪ್ರಯಾಣಿಕರಿಂದ 18,27,183 ರೂ. ದಂಡ ವಸೂಲಿ ಮಾಡಿದ್ದಾರೆ. ಒಂದು ವೇಳೆ ಇಷ್ಟೊಂದು ಪ್ರಕರಣಗಳನ್ನು ಪತ್ತೆ ಹಚ್ಚದಿದ್ದರೆ ಸಂಸ್ಥೆಗೆ 1,74,371 ರೂ. ಆದಾಯ ಸೋರಿಕೆಯಾಗುತ್ತಿತ್ತು. ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಬಸ್‌ಗಳ ತಪಾಸಣೆ ಪ್ರಮಾಣ ಹೆಚ್ಚಾಗಿದೆ. ವಿವಿಧ ಹಂತಗಳಲ್ಲಿ ತನಿಖಾ ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಆದಾಯದಲ್ಲೂ ಕೂಡ ಕೊಂಚ ಚೇತರಿಕೆ ಕಂಡಿದೆ. 2021ಸೆಪ್ಟಂಬರ್‌ ತಿಂಗಳಲ್ಲಿ 111.32 ಕೋಟಿ ರೂ. ಸಾರಿಗೆ ಆದಾಯ ಬಂದಿತ್ತು. 2022 ಸೆಪ್ಟಂಬರ್‌ ತಿಂಗಳಲ್ಲಿ 128.13 ಕೋಟಿ ರೂ. ಆದಾಯ ಬಂದಿದ್ದು, ಶೇ.11ಆದಾಯದಲ್ಲಿ ಸುಧಾರಣೆ ಕಂಡಿದೆ.

ಅಧಿಕಾರಿ, ಸಿಬ್ಬಂದಿಯಲ್ಲಿ ಸಮಯಪ್ರಜ್ಞೆ

ಬಸ್‌ಗಳು, ಚಾಲನಾ ಸಿಬ್ಬಂದಿಯನ್ನು ಹೊಂದಿರುವ ಘಟಕಗಳೇ ಸಾರಿಗೆ ಸಂಸ್ಥೆಗಳು ಪ್ರಮುಖ ಕಾರ್ಯಸ್ಥಳವಾಗಿದ್ದರಿಂದ ಇಲ್ಲಿನ ಕಾರ್ಯ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಘಟಕ ವ್ಯವಸ್ಥಾಪಕರು ಬೆಳಿಗ್ಗೆ 6:00 ಗಂಟೆಗೆ ಘಟಕದಲ್ಲಿ ಹಾಜರಿದ್ದು, ಸಮಯಕ್ಕೆ ಬಸ್‌ ಕಾರ್ಯಾಚರಣೆಗೆ ಒತ್ತು ನೀಡಬೇಕು. ಹೀಗಾಗಿ ಘಟಕ ವ್ಯವಸ್ಥಾಪಕರು ಕರ್ತವ್ಯಕ್ಕೆ ಹಾಜರಾದ ಬಗ್ಗೆ ಜಿಯೋ ಫಿನಿಷಿಂಗ್‌ ಹೊಂದಿರುವ ತಮ್ಮ ಫೋಟೋವನ್ನು ವ್ಯವಸ್ಥಾಪಕ ಅಪ್‌ ಲೋಡ್‌ ಮಾಡಬೇಕು. ಇದನ್ನು ಭದ್ರತಾ ಮತ್ತು ಜಾಗೃತ ಇಲಾಖೆ ಮೇಲ್ವಿಚಾರಣೆ ನಡೆಸುತ್ತದೆ. ತಡವಾಗಿ ಬಂದಿರುವ ಕುರಿತು ಕೇಂದ್ರ ಕಚೇರಿಗೆ ವರದಿ ಸಲ್ಲಿಸುತ್ತಿದ್ದು, ಪ್ರತಿ ವಾರ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಪರಿಶೀಲನೆಯಾಗುತ್ತಿದೆ. ಹೀಗಾಗಿ ವಿವಿಧ ಕಾರಣಗಳಿಂದ ತಡವಾಗಿ ಹೊರಡುವ ಬಸ್‌ಗಳ ಪ್ರಮಾಣ ಸಾಕಷ್ಟು ಕಡಿಮೆಯಾಗಿದ್ದು, ಎಂಡಿಯಾಗಿ ಎಸ್‌. ಭರತ ಬಂದ ನಂತರ ಕೈಬಿಟ್ಟಿದ್ದ ಕರ್ತವ್ಯಗಳಿಗೆ ಮರುಜೀವ ಬಂದಿದೆ ಎನ್ನುತ್ತಾರೆ ಸಂಸ್ಥೆಯ ಹಿರಿಯ ಅಧಿಕಾರಿಗಳು.

Advertisement

ತನಿಖಾ ಸಿಬ್ಬಂದಿ ಕೊರತೆ

ಆದಾಯ ಸೋರಿಕೆ ತಡೆಯಲು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಂದು ವಿಭಾಗದ ಮಟ್ಟದಲ್ಲಿ ಇಬ್ಬರು ಅಧಿಕಾರಿಗಳನ್ನು ಹೊಂದಿದ್ದ ಕನಿಷ್ಠ ಐದು ತಂಡಗಳು ಅಗತ್ಯವಿದೆ. ಆದರೆ ಸಿಬ್ಬಂದಿ ಕೊರತೆಯಿಂದಾಗಿ ವಿಭಾಗದಲ್ಲಿ ಸರಾಸರಿ 2-3 ತಂಡಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇದರೊಂದಿಗೆ ಚಾಲನಾ ಸಿಬ್ಬಂದಿ ಕೊರತೆ, ಇರುವ ಬಸ್‌ಗಳಲ್ಲೇ ಪ್ರಯಾಣಿಕರ ಸೇವೆ ನೀಡುವ ಮೂಲಕ ಸಾರಿಗೆ ಉತ್ತಮ ಆದಾಯದತ್ತ ಸಂಸ್ಥೆ ಮುಖ ಮಾಡಿದೆ. ಇರುವ ಸಿಬ್ಬಂದಿ ಜತೆಗೆ ವಿವಿಧ ಶಾಖೆಯ ಅಧಿಕಾರಿಗಳನ್ನು ತೊಡಗಿಸಿಕೊಂಡು ತನಿಖಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಆದರೆ ಕೆಲ ಅಧಿಕಾರಿಗಳು ಕಾರಿನಲ್ಲಿಯೇ ಕುಳಿತು ತನಿಖಾ ತಂಡದ ಮೇಲೆಯೇ ಕೆಲಸ ಮಾಡಿಸುತ್ತಾರೆ. ಕಾಟಾಚಾರಕ್ಕೆ ತನಿಖೆಗೆ ಹೋಗುತ್ತಿದ್ದಾರೆ ಎನ್ನುವ ದೂರುಗಳು ಕೂಡ ಇವೆ.

ವಾರದಲ್ಲಿ ಒಂದು ದಿನ ತನಿಖೆ

ಭದ್ರತಾ ಮತ್ತು ಜಾಗೃತ ಇಲಾಖೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಬಸ್‌ ತಪಾಸಣೆ ಮಾಡಬಹುದು ಎಂಬುದು ನಿಯಮ. ಆದರೆ ಈ ನಿಯಮ ಕೆಲವೆಡೆ ಸೋರಿಕೆ ಪರವಾಗಿ ಕೆಲಸ ಮಾಡುತ್ತಿದೆ ಎನ್ನುವ ಕಾರಣಕ್ಕೆ ವಿಭಾಗ ಮಟ್ಟದಲ್ಲಿರುವ ಆಡಳಿತಾಧಿಕಾರಿ, ಲೆಕ್ಕಾಧಿಕಾರಿ, ಕಾರ್ಮಿಕ ಕಲ್ಯಾಣಾಧಿಕಾರಿ, ಅಂಕಿ ಸಂಖ್ಯೆ ಅಧಿಕಾರಿ, ಘಟಕ ವ್ಯವಸ್ಥಾಪಕರಿಗೂ ತಪಾಸಣೆ ಹೊಣೆ ಹೊರಿಸಲಾಗಿದೆ. ವಾರದಲ್ಲಿ ಒಂದು ದಿನ ಓರ್ವ ಅಧಿಕಾರಿ ಒಂದು ತನಿಖಾ ತಂಡದೊಂದಿಗೆ ತಪಾಸಣೆಗೆ ಕಡ್ಡಾಯವಾಗಿ ತೆರಳಬೇಕು. ವಿಭಾಗೀಯ ಉಸ್ತುವಾರಿಗಳಾಗಿರುವ ಕೇಂದ್ರ ಕಚೇರಿ ಮಟ್ಟದ ಅಧಿಕಾರಿಗಳು ನಿತ್ಯವೂ ಮೇಲ್ವಿಚಾರಣೆ ಮಾಡಬೇಕು. ಪ್ರತಿ ವಾರ ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಪರಿಶೀಲನಾ ಕಾರ್ಯ ನಡೆಯುತ್ತಿದೆ.

ಸಾರಿಗೆ ಆದಾಯವೇ ಸಂಸ್ಥೆಗೆ ಪ್ರಮುಖವಾಗಿರುವ ಕಾರಣಕ್ಕೆ ಸೋರಿಕೆ ತಡೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಕಡಿಮೆ ಆದಾಯ ತರುವ ನಿರ್ವಾಹಕರ ಮೇಲೆ ಅಧಿಕಾರಿಗಳು ನಿಗಾ ವಹಿಸಿ ತನಿಖೆ ನಡೆಸುತ್ತಾರೆ. ತಪ್ಪಿತಸ್ಥರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ತನಿಖೆ ಕಾರ್ಯಕ್ಕೆ ಇತರೆ ಅಧಿಕಾರಿಗಳಿಗೆ ಹೊಣೆ ನೀಡಲಾಗಿದೆ. ಸಿಬ್ಬಂದಿ ಕೊರತೆಯಿದ್ದರೂ ಇರುವವರೇ ಹೆಚ್ಚಿನ ಬಸ್‌ಗಳ ತನಿಖೆ ನಡೆಸಿ ಪ್ರಕರಣ ಪತ್ತೆ ಹಚ್ಚುತ್ತಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕರು ಟಿಕೆಟ್‌ ಕೇಳಿ ಪಡೆದು ಪ್ರಯಾಣಿಸಬೇಕು. -ಎಸ್‌.ಭರತ, ವ್ಯವಸ್ಥಾಪಕ ನಿರ್ದೇಶಕರು, ವಾಕರಸಾ ಸಂಸ್ಥೆ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next