ಸಿಯೋಲ್ (ಉ.ಕೊರಿಯ): 1950ರ ಬಳಿಕ ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯ ನಡುವೆ ನಡೆಯುತ್ತಿರುವ “ಬಲೂನ್ ವಾರ್’ ಈಗ ವಿಪರೀತಕ್ಕೆ ಹೋಗಿದೆ. ಉತ್ತರ ಕೊರಿಯ ಬಲೂನ್‌ಗಳ ಮೂಲಕ ಮಲ, ಕಸ, ಗೊಬ್ಬರ ತುಂಬಿದ ಪ್ಲಾಸ್ಟಿಕ್‌ಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯ ಸಾಕ್ಷಿಸಮೇತ ಆರೋಪಿಸಿದೆ.
1950ರಿಂದ 1953ರ ವರೆಗೆ ಎರಡೂ ದೇಶಗಳ ನಡುವೆ ಯುದ್ಧ ನಡೆದಿತ್ತು. ಅನಂತರ ಹೀಗೆ ಬಲೂನ್‌ಗಳ ಮೂಲಕ ಕರಪತ್ರ, ಇತರ ವಸ್ತುಗಳನ್ನು ಹಾರಿಬಿಡುವುದು ನಡೆಯುತ್ತಿತ್ತು. ಈಗ ಪರಿಸ್ಥಿತಿ ಕೆಳಮಟ್ಟಕ್ಕೆ ಹೋಗಿದೆ.
“ಕಸ, ಗೊಬ್ಬರ, ಗಲೀಜು ಪದಾರ್ಥಗಳನ್ನು ಉತ್ತರ ಕೊರಿಯವು ದಕ್ಷಿಣ ಕೊರಿಯಕ್ಕೆ ಹಾರಿ ಬಿಡುತ್ತಿದೆ. ಈ ಅಮಾನವೀಯ ಹಾಗೂ ಕೀಳು ಮಟ್ಟದ ಕೃತ್ಯವನ್ನು ಆ ದೇಶ ನಿಲ್ಲಿಸಬೇಕು’ ಎಂದು ದ.ಕೊರಿಯ ಆರೋಪಿಸಿದೆ.
ದೇಶದ ಗಡಿಭಾಗಗಳಲ್ಲಿ, ರಾಜಧಾನಿ ಸಿಯೋಲ್, ಗಿಯಾಂಗ್‌ಸ್ಯಾಂಗ್‌ನಲ್ಲಿ ಕಸವನ್ನು ಉತ್ತರ ಕೊರಿಯ ಇಳಿಸಿದೆ. ಇದು ದೇಶದ ಸುರಕ್ಷೆ ಮತ್ತು ಜನರ ಆರೋಗ್ಯಕ್ಕೆ ಬೆದರಿಕೆಯೊಡ್ಡಿದೆ ಎಂದು ದಕ್ಷಿಣ ಕೊರಿಯ ಬೇಸರ ವ್ಯಕ್ತಪಡಿಸಿದೆ.
ಮಂಗಳವಾರ ರಾತ್ರಿಯಿಂದಲೇ ಉತ್ತರ ಕೊರಿಯ ಇಂತಹ ಕೃತ್ಯವನ್ನು ಆರಂಭಿಸಿದೆ. ಬುಧವಾರ ಬೆಳಗ್ಗೆ ಕಸ, ಗಲೀಜು ತುಂಬಿದ 260 ಬಲೂನ್‌ಗಳು ಪತ್ತೆಯಾಗಿವೆ ಎಂದು ದಕ್ಷಿಣ ಕೊರಿಯದ ಜೆಸಿಎಸ್ (ಭದ್ರತಾಪಡೆಗಳ ಜಂಟಿ ಮುಖ್ಯಸ್ಥರು) ಹೇಳಿದ್ದಾರೆ. ಜೆಸಿಎಸ್ ಬಿಡುಗಡೆ ಮಾಡಿರುವ ಚಿತ್ರಗಳಲ್ಲಿ, ಪ್ಲಾಸ್ಟಿಕ್ ಚೀಲಗಳನ್ನು ಹೊತ್ತಿರುವ ಬಲೂನ್‌ಗಳಲ್ಲಿ ಹರಿದ ಕಾಗದಗಳು, ಪ್ಲಾಸ್ಟಿಕ್ ರಾಶಿ, ಗೊಬ್ಬರ, ಇತರ ಕಸಗಳು ಪತ್ತೆಯಾಗಿವೆ. ಗಿಯಾಂಗ್‌ಸಾಂಗ್ ಪ್ರಾಂತದ ಆಡಳಿತ, ತನ್ನ ಜನರಿಗೆ ಎಚ್ಚರಿಕೆಯಿಂದಿರಲು ಸೂಚಿಸಿದ್ದು, ಮನೆಯಿಂದ ಹೊರಬರಬೇಡಿ ಎಂದು ಸೂಚಿಸಿದೆ.
ಈ ಕೃತ್ಯದ ಮೂಲಕ ಉತ್ತರ ಕೊರಿಯ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂ ಸಿದೆ ಎಂದು ಜೆಸಿಎಸ್ ಆರೋಪಿಸಿದೆ. ದಕ್ಷಿಣ ಕೊರಿಯದ ಹೋರಾಟಗಾರರು ಆಗಾಗ ಉತ್ತರ ಕೊರಿಯಕ್ಕೆ ಕರಪತ್ರ, ಆಹಾರ, ಔಷಧ, ರೇಡಿಯೋ, ದಕ್ಷಿಣ ಕೊರಿಯದ ಸುದ್ದಿ, ಟೀವಿ ಕಾರ್ಯಕ್ರಮಗಳಿರುವ ಯುಎಸ್‌ಬಿಗಳನ್ನು ಕಳುಹಿಸುತ್ತಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಉತ್ತರ ಕೊರಿಯ ಹೀಗೆ ಮಾಡಿದೆ ಎಂದು ವಿಶ್ಲೇಷಿಸಲಾಗಿದೆ.
ಏನಿದು ಬಲೂನ್ ವಾರ್?
-1950ರಿಂದ 1953ರ ನಡುವೆ ಎರಡೂ ದೇಶಗಳ ಯುದ್ಧ.
-ಅನಂತರ ಬಲೂನ್‌ಗಳ ಮೂಲಕ ಪರಸ್ಪರ ವಸ್ತುಗಳನ್ನು ಕಳಿಸುವ ಪದ್ಧತಿ ಆರಂಭ.
-ಈ ಬಾರಿ ದ. ಕೊರಿಯದ ಕೆಲವು ಹೋರಾಟಗಾರರಿಂದ ಉ. ಕೊರಿಯಕ್ಕೆ ಕರಪತ್ರ, ಔಷಧ, ಆಹಾರ, ಯುಎಸ್‌ಬಿ ರವಾನೆ.
-ಇದಕ್ಕೆ ಪ್ರತಿಯಾಗಿ ಉತ್ತರ ಕೊರಿಯದಿಂದ ಮಲ, ಕಸ ತುಂಬಿದ ಬಲೂನ್‌ಗಳ ರವಾನೆ?