ಉತ್ತರಕೊರಿಯಾ(ಪ್ಯೊಂಗ್ಯಾಂಗ್): ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿರುವ ಸಾಧ್ಯತೆ ದಟ್ಟವಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಅದಾದ ಕೆಲ ದಿನದ ನಂತರ ಕಿಮ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಊಹಾಪೋಹಕ್ಕೆ ತೆರೆ ಎಳೆದಿದ್ದರು. ಆದರೆ ಇದೀಗ ತನ್ನ ಅಂಗರಕ್ಷಕ ಪಡೆಯ ಮುಖ್ಯಸ್ಥ ಹಾಗೂ ಗುಪ್ತಚರ ಏಜೆನ್ಸಿಯ ಮುಖ್ಯಸ್ಥನನ್ನು ದಿಢೀರ್ ಆಗಿ ಬದಲಾಯಿಸಿರುವುದಾಗಿ ವರದಿ
ತಿಳಿಸಿದೆ.
ದಕ್ಷಿಣ ಕೊರಿಯಾ ಮೂಲದ ಇಂಗ್ಲಿಷ್ ದೈನಿಕ “ಕೊರಿಯಾ ಹೆರಾಲ್ಡ್” ವರದಿ ಪ್ರಕಾರ, ದೇಶದ ಪ್ರಮುಖ ಗುಪ್ತಚರ ಇಲಾಖೆಯಾದ ಆರ್ ಜಿಬಿ(Reconnaissance General Bureau)ಯ ನಿರ್ದೇಶಕ ಜಂಗ್ ಕಿಲ್ ಸಾಂಗ್ ಅವರನ್ನು ಬದಲಾಯಿಸಿ ರಿಮ್ ಕ್ವಾಂಗ್ ಅವರನ್ನು ನೂತನ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.
ಆರ್ ಜಿಬಿ ನಟೋರಿಯಸ್ ಸ್ಪೈ ಏಜೆನ್ಸಿಯಾಗಿದ್ದು, ಹಲವು ಪ್ರಮುಖ ದಾಳಿಯ ಹಿಂದೆ ಆರ್ ಜಿಬಿ ಕೈವಾಡ ಇದ್ದಿರುವುದಾಗಿ ವರದಿ ತಿಳಿಸಿದೆ. ಆರ್ ಜಿಬಿ ಸೈಬರ್ ಕನ್ನ, ದಕ್ಷಿಣ ಕೊರಿಯಾ, ಜಪಾನ್, ಅಮೆರಿಕ ವಿರುದ್ಧ ಗೂಢಚರ್ಯೆ ನಡೆಸುತ್ತಿರುವ ಆರೋಪ ಇದೆ. ಕಳೆದ ವರ್ಷ ಆಡಳಿತಾರೂಢ ವರ್ಕರ್ಸ್ ಪಕ್ಷದ ಸೆಂಟ್ರಲ್ ಮಿಲಿಟರಿ ಕಮಿಷನ್ ನ ಸದಸ್ಯರನ್ನಾಗಿ ರಿಮ್ ಅವರನ್ನು ನೇಮಕ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ.
2010ರಿಂದ ಉತ್ತರ ಕೊರಿಯಾದ ಕಿಮ್ಸ್ ಮುಖ್ಯಸ್ಥರ ಬಾಡಿಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರ್ಮಿ ಜನರಲ್ ಯುನ್ ಜಾಂಗ್ ರಿನ್ ಅವರನ್ನು ಹುದ್ದೆಯಿಂದ ಬದಲಾಯಿಸಿ ಕ್ವಾಕ್ ಚಾಂಗ್-ಸಿಕ್ ಅವರನ್ನು ಸುಪ್ರೀಂ ಗಾರ್ಡ್ ಕಮಾಂಡರ್ ಆಗಿ ನೇಮಕ ಮಾಡಲಾಗಿದೆ.