ಸಿಯೋಲ್/ಟೋಕ್ಯೊ: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸತತ 2ನೇ ದಿನವೂ ಕೂಡ ಕ್ಷಿಪಣಿ ಪರೀಕ್ಷೆ ನಡೆಸಿದ್ದಾನೆ.
ಗುರುವಾರ ಜಪಾನ್ ಕರಾವಳಿಯನ್ನು ಗುರಿಯಾಗಿ ಇರಿಸಿಕೊಂಡು ಖಂಡಾತರ ಕ್ಷಿಪಣಿ (ಐಸಿಬಿಎಂ) ಮತ್ತು ಕಡಿಮೆ ಶಕ್ತಿಯ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಸರ್ವಾಧಿಕಾರಿಯ ಹುಚ್ಚಾಟವನ್ನು ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್ ಸರ್ಕಾರಗಳು ಖಂಡಿಸಿವೆ.
ಇದರಿಂದಾಗಿ ಉತ್ತರ ಕೊರಿಯಾಕ್ಕೆ ಹೊಂದಿಕೊಂಡು ಇರುವ ಜಪಾನ್ ಕರಾವಳಿ ಪ್ರದೇಶದಲ್ಲಿ ಭಾರೀ ಆತಂಕ ಉಂಟಾಗಿದೆ. ವಿವಿಧ ರೀತಿಯ ಅಗತ್ಯ ಕೆಲಸಗಳು ಮತ್ತು ವಹಿವಾಟುಗಳಲ್ಲಿ ತೊಡಗಿದ್ದವರೆಲ್ಲ ಸುರಕ್ಷಿತ ಪ್ರದೇಶಗಳನ್ನು ಸೇರಿಕೊಂಡಿದ್ದಾರೆ. ಕ್ಷಿಪಣಿ ಉಡಾವಣೆಯಾದ ಕೂಡಲೇ ಜಪಾನ್ ನಿವಾಸಿಗಳಿಗೆ ಮೊಬೈಲ್, ರೇಡಿಯೋ ಮತ್ತು ಧ್ವನಿವರ್ಧಕಗಳ ಮೂಲಕ ಎಚ್ಚರಿಕೆಯ ಸಂದೇಶ ರವಾನೆ ಮಾಡಲಾಯಿತು. ದಕ್ಷಿಣ ಕೊರಿಯಾ ಸೇನೆ ನೀಡಿದ ಮಾಹಿತಿ ಪ್ರಕಾರ ಉತ್ತರ ಕೊರಿಯಾ ಪ್ರಯೋಗಿಸಿದ ಕ್ಷಿಪಣಿ 1,920 ಕಿಮೀ ದೂರ, 760 ಕಿಮೀ ದೂರದ ಸಾಮರ್ಥ್ಯದ ಪ್ರದೇಶವನ್ನು ತಲಪುವ ಸಾಮರ್ಥ್ಯ ಪಡೆದಿದೆ.
4 ಕ್ಷಿಪಣಿ:
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಪಾನ್ “ನಮ್ಮ ದೇಶವನ್ನು ಗುರಿಯಾಗಿಸಿ ಒಂದು ಖಂಡಾತರ ಕ್ಷಿಪಣಿ, 3 ಅಲ್ಪ ಶಕ್ತಿಯ ಕ್ಷಿಪಣಿಗಳನ್ನು ಉತ್ತರ ಕೊರಿಯಾ ಪ್ರಯೋಗ ಮಾಡಿದೆ’ ಎಂದು ಹೇಳಿದೆ. ಬುಧವಾರ ಒಟ್ಟು 23 ಕ್ಷಿಪಣಿಗಳನ್ನು ಸರ್ವಾಧಿಕಾರಿ ಪ್ರಯೋಗಿಸಿದ್ದ.