Advertisement

ನಳಪಾಕ-2: ನಾ ಅನ್ಕೊಂಡೆ ಇದು ಊದೋದು ಬಿಟ್ಟು ಬಾರ್ಸೋದು ತಗೊಂಡ್ ಹಂಗ್ ಆತು ….

05:03 PM Feb 13, 2021 | Team Udayavani |

ಭಾಳ ದಿನಾ ಆದಮ್ಯಾಲೆ ಬರೀಲಿ ಕತ್ತೀನಿ. ಬರದ್ರ ಏನೋ ಮನಸ್ ಹಗರ ಆಗ್ತದ. ಅಂಧಾಂಗ ಹೋದ್ಸಲಾ ಅಡಗಿ ಮನಿ ಸುದ್ದಿ, ಮತ್ತ ಅದು ಇದು ಕಥಿ ಎಲ್ಲಾ ಬರ್ದಿದ್ದೆ. ಅಡಗಿ ಮನಿಗು ನಮ್ ಜೀವನಕ್ಕೂ ಭಾಳ್ ಸಾಮ್ಯ ಅದ ಅಂತ ಅಸನಸ್ತ‍ದ. ಈಕೀ ಏನ್ಪಾ ಫಿಲಾಸೋಫೀ ಹೇಳಿಕ್ ಹತ್ತ್ಯಾಳ್ ಅನ್ಕೋಬ್ಯಾಡ್ರಿ ಮತ್ತ.

Advertisement

ಇದನ್ನೂ ಓದಿ:ಮರ್ಯಾದಾ ಪುರುಷೋತ್ತಮನ ಭವ್ಯ ಮಂದಿರಕ್ಕೆ ಭಕ್ತರಿಂದ ಹರಿದು ಬಂತು ಕೋಟಿ ಕೋಟಿ ಹಣ..!

ಮನ್ನೆ ಉಪ್ಪಿಟ್ಟ ಮಾಡ್ಲಿಕತ್ತಿದ್ದೆ. ಎಲ್ಲ ಕಾಯಿಪಲ್ಲೆ, ವಠಾಣಿ, ಹಸಿ ಕೊಬ್ರಿ ಹಾಕಿ ಮಸ್ತ್ ಆಗಿತ್ತು. ಇನ್ನೇನು ಪ್ಲೇಟ್ ನ್ಯಾಗ್ ಹಾಕಿ ಕೊಡ್ಬೇಕು ಅನ್ನೋವಷ್ಟರಲ್ಲಿ, ಅಪ್ಪ ಅಂದ್ರು ಸ್ವಲ್ಪ ಉಂಗೋಯ್ಲಿ ಉಪ್ಪಿಟ್ಟು. ಇಲ್ಲ ಅಂದ್ರ ಕಚ ಕಚ ಆಗ್ತದ.

ದರ ಸಲಾ ಉಪ್ಪಿಟ್ಟು ಮಾಡುಮುಂದ ದೋಡ್ಡೋರು ಈ ಮಾತು ಹೇಳ್ತಾರ. ಎಲ್ಲಾ ಪ್ರಮಾಣ ಸರಿ ಹಾಕಿ ಉಂಗೋಯ್ಲಿಕ್ಕೆ ಬಿಡ್ಲಿಲ್ಲ ಅಂದ್ರ ಅದು ಸಂಪೂರ್ಣ ಆಗುದಿಲ್ಲ. ಅವಾಗ ಅನ್ಕೊಂಡೆ ಸಂಬಂಧಗಳ ಹಿಂಗ ಅಂತ. ಎಲ್ಲ ಸರಿಯಾಗಿ ಇದ್ರುನು ಉಂಗೋಯ್ಲಿಕ್ಕೆ ಟೈಮ್ ಕೊಡ್ಲಿಲ್ಲ ಅಂದ್ರ ಅದು ಪೂರ್ತಿಯಾಗಿ ಅರ್ಥ ಆಗುದಿಲ್ಲ ಅನಸ್ತದ. ನಾನು ನೋಡಿ ಹೆಂಗ ವಿಚಾರ ಮಾಡೇನಿ ಅಂತ. ಸೂಕ್ಷ್ಮವಾಗಿ ನೋಡಿದ್ರ ಇದು ಖರೆ ಅನಸ್ತದ. ‘ಬೆಂದರೆ ಬೇಂದ್ರೆ ಆದಾನು’ ಅಂತ ವರಕವಿ ಬೇಂದ್ರೆ ಅಜ್ಜಾರ್ ಹೇಳ್ಯಾರ. ಅವರೂ ಒಂದ್ ರೀತಿ ನಮ್ಮ ಜೀವನ ಅಡಗಿ ಮಾಡೋ ವಿಧಾನಕ್ಕ ಹೋಲ್ಸ್ಯಾರ ಅನಸ್ತದ. ಇದು ನನಗ ಅನ್ಸಿದ್ದು ವಿಚಾರಾ ಮತ್ತ.

ಇದನ್ನೂ ಓದಿ:ವೀರಶೈವ-ಲಿಂಗಾಯಿತರ ಒಬಿಸಿ ಸೇರ್ಪಡೆಗೆ ಅಡ್ಡಿಯಾಗಿದ್ದು ಕೇಂದ್ರ ಸರ್ಕಾರ: ದಿಂಗಾಲೇಶ್ವರ ಶ್ರೀ

Advertisement

ಹಬ್ಬಕ್ಕ ಧಾರವಾಡಕ್ಕೆ ಹೋಗಿದ್ವಿ. ಹಬ್ಬ ಒಂದ್ ಕಡೆ ಇದ್ರ ರಂಜಕ ತೊಕ್ಕು ಇನ್ನೊಂದ್ ಕಡೆ. ಧಾರವಾಡ ಮಂದಿಗೆ ನವೆಂಬರ್ ಡಿಸೆಂಬರ್ ಬಂದ್ರ ರಂಜಕ ತೊಕ್ಕು ಮಾಡ್ಲಿಲ್ಲ ಅಂದ್ರ ಸಮಾಧಾನ ಆಗುದಿಲ್ಲ. ನಂಗ್ ಗೊತ್ತು ಕೇಳಿದ್ರ ಕೂಡ್ಳೇ ನಿಮ್ ಬಾಯಾಗ್ ನೀರ್ ಬಂತು ಅಂತ.

ನಾನು ಎರ್ಡು ಕೆಜಿ ತೊಗೊಂಡ್ ಬಂದೆ. ಮೊದ್ಲ ಮನ್ಯಾಗ ಮಾಡುಮುಂದ ಅದರ್ದು ಕಿಮ್ಮತ್ ಇರಾಂಗಿಲ್ಲ. ಉದ್ದಿನ ಹಪ್ಪಳ, ಕಾಯಿ ಸಂಡಗಿ ಎಲ್ಲ ಮಾಡುವಾಗ ಅರ್ಧಮರ್ಧ ವಣಗಿದ್ದು ಹಂಗ ತಿಂದು ಬೈಸ್ಕೋತಿದ್ವಿ. ಉದ್ದಿನ ಹಿಟ್ಟು ಕಲಸಿ ಇಟ್ಟಿದ್ದು ಹಂಗ ಹಸಿದ ತಿನ್ನೋದು. ನೀವು ಎಲ್ಲರೂ ಇದನ ಮಾಡಿರ್ತೀರಿ ಅಂತ ಗೊತ್ತು.

ರೀಸೆಂಟ್ಲೀ ನಮ್ ಆಫೀಸ್ ನ್ಯಾಗ್ ಲಂಚ್ ಮಾಡುಮುಂದ ನಮ್ ಕೊಲೀಗ್ ಗೆ ಕೇಳೆ ಬಿಟ್ಟೆ. ನೀವು ದಿನಾ ಇಷ್ಟ್ ವೆರೈಟೀ ಮಾಡ್ತೀರಿ ಅಲ್ವಾ. ಬ್ರೇಕ ಫಾಸ್ಟ್ ಲಂಚ್ ಎಲ್ಲ ಸೆಪರೇಟ್ಲೀ ಮಾಡ್ಕೋಂಡ್ ಬರ್ತೀರಾ, ಹೆಂಗ್ ಟೈಮ್ ಸಿಗತ್ತೆ ಅಂತ. ಕೊಲೀಗ್ ಹೇಳಿಕತಿದ್ರು, “ ರಶ್ಮಿ ನಾನು ಕುಕ್ ಇಟ್ಕೊಂಡಿನಿ. ಬೆಳಿಗ್ಗೆ ಬಂದ್ಬಿಟ್ಟು ಬ್ರೇಕ್ ಫಾಸ್ಟ್ ಅಡಿಗೆ ಎಲ್ಲ ಮಾಡ್ತಾರೆ. ನಗೆ ತುಂಬಾ ಅನಕೂಲ ಆಗಿದೆ. ನೀವು ಟ್ರೈ ಮಾಡಿ ನೋಡಿ. ಈಜೀ ಆಗತ್ತೆ ಅಂತ ಅಂದ್ರು. ನನಗೂ ಹಂಗ್ ಕೇಳಿದ್ಕೊಡ್ಲೆ ತಲ್ಯಾಗ ಹುಳ ಬಿಟ್ಟ್ಹಂಗ ಆತು.

ನಾನು ಚೆಕ್ ಮಾಡ್ತೀನಿ.ಹಂಗರ ಸಿಕ್ರ ಭಾಳ್ ಚೊಲೊ ಆತು ಅಂತ ಅನ್ಕೊಂಡು ಫೇಸ್ ಬುಕ್ ನ್ಯಾಗ್ ಪೋಸ್ಟ್ ಮಾಡಿದೆ. ಆಮೇಲೆ ನಮ್ ಅಪಾರ್ಟ್ಮೆಂಟ್ನಾಗು ಹೇಳಿಟ್ಟೆ. ಯಾರರ ಇದ್ರ ಹೇಳ್ರಿ ಅಂತ. 2 ದಿನ ವೇಟ್ ಮಾಡಿದ್ಮಾಲೆ ಒಂದು ಕಾಲ್ ಬಂತು. ಕುಕ್ ಗೋಸ್ಕರ್ ಎನ್ ಕ್ವೈರಿ ಮಾಡಿದ್ರಿ ಅಲ್ವಾ ? ಅದಿಕ್ಕೆ ಕಾಲ್ ಮಾಡಿದೆ ಅಂತ. ನಂಗೂ ಫುಲ್ ಎಗ್ಸೈಟ್ಮೆಂಟ್ . ಕುಕ್ ಸಿಕ್ಕ ಬಿಟ್ಲೂ. ಅಡಗಿ ಆಗೇ ಬಿಡ್ತು ಅಂತ. ಆ ಕಡೆ ಇಂದ ಅಂದ್ಲು ನಿಮ್ಮ ಮನೆಗೆ ಬರಕ್ಕೆ ದೂರ ಆಗ್ತದ. ಸೊ ಪೆಟ್ರೋಲ್ ಚಾರ್ಜಸ್ 1000, ಕುಕಿಂಗ್ ಚಾರ್ಜಸ್ 8000, ಎರಡ ಕ್ಯಾಷುಯಲ್ ಲೀವ್ಸ್ ನೋಡಿ. ನಾ ಅಂದೆ ಸರಿ. ಅಡಗಿ ಎಲ್ಲ ವೆರೈಟೀ ಮಾಡ್ತೀರಾ ಅಂತ. ಆಕೀ ಅಂದ್ಲು ನಾರ್ತ್ ಇಂಡಿಯನ್ ಚೈನೀಸ್ ಸೌತ್ ಇಂಡಿಯನ್ ಎಲ್ಲಾ ಬರುತ್ತೆ. ಆದರೆ ನಾರ್ತ್ ಕರ್ನಾಟಕ ಟೈಪ್ ಬರಲ್ಲ. ನೀವೇ ಟೀಚ್ ಮಾಡಿ. ನಾನು ಮಾಡಿ ಕೊಡ್ತೀನಿ ಅಂದ್ಲು. ನಾ ಅನ್ಕೊಂಡೆ ಊದೋದು ಬಿಟ್ಟು ಬಾರ್ಸೋದು ತೂಗೊಂಡ್ ಹಂಗ್ ಆತು ಇದು. ಯಾಕೋ ನೆಟ್ ವರ್ಕ್ ಸರಿ ಇಲ್ಲ. ವಾಯ್ಸ್ ಬ್ರೇಕ್ ಆಗ್ತಿದೆ, ಆಮೇಲ್ ಕಾಲ್ ಮಾಡ್ತೀನಿ ಅಂತ ಹೇಳಿ ಇಟ್ ಬಿಟ್ಟೆ. ಆಮೇಲೆ ಅನ್ಕೊಂಡೆ ನಾವ ಮಾಡ್ಕೊಳೋದ ಸುಖ. ಯಾವ ಕುಕ್ ಬ್ಯಾಡ ಏನೂ ಬ್ಯಾಡ ಅನ್ಕೊಂಡ್ ಮಸ್ತ್ ಚಾ ಮಾಡ್ಕೊಂಡ್ ಕುಡದೆ.

ಇಡ್ಲಿ ಇಟ್ಟಿದ್ದೆ ಕುಕ್ಕರ್ ನ್ಯಾಗ್ ಆಫೀಸ್ ಗೆ ಟೈಮ್ ಆಗಿತ್ತು. ಸ್ವಲ್ಪ ಉಂಗೋಯ್ಲಿಕ್ಕೆ ಇಟ್ಟು ರೆಡಿ ಆಗ್ಲೆಕ್ಕೆ ಹೋದೆ. ನೀವು ಉಂಗೋಯ್ಲಿಕ್ಕೆ ಇಡ್ಲಿಕ್ಕೆ ಮರಿಬ್ಯಾಡ್ರಿ ಮತ್ತ. ಮುಂದಿನ ಸಲ ಬಂದಾಗ ಕೇಳ್ತೀನಿ.(ಮುಂದುವರೆಯುವುದು…)

ರಶ್ಮಿ.ಕೆ. ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next