Advertisement
ಭಾವನಾತ್ಮಕ ವಿಚಾರ ಮುಂದಿಟ್ಟು ನಮ್ಮೊಂದಿಗೆ ಕೈ ಜೋಡಿಸಿದರೆ ಪಕ್ಷ ವಿರೋಧಿ ಚಟುವಟಿಕೆ ಅಥವಾ ದ್ರೋಹ ಮಾಡಿದರು ಎಂಬ ಹಣೆಪಟ್ಟಿ ಬರುವುದಿಲ್ಲ, ಕ್ಷೇತ್ರದ ಜನರ ಆಕ್ರೋಶಕ್ಕೂ ತುತ್ತಾಗುವುದಿಲ್ಲ. ಹೀಗಾಗಿ, ಮನಸ್ಸು ಮಾಡಿ ಎಂದು ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಗಾಳ ಹಾಕಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
Related Articles
Advertisement
ಉತ್ತರ ಕರ್ನಾಟಕ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆ ವಿವಾದದ ಸ್ವರೂಪ ಪಡೆದಿರುವುದರಿಂದ ಇದೇ ಸಮಯ ಎಂದು ಬಿಜೆಪಿ ರಂಗಪ್ರವೇಶ ಮಾಡಿದ್ದು, ಇತ್ತೀಚೆಗೆ ನಡೆದ ಕೋರ್ ಕಮಿಟಿ ಸಭೆಯಲ್ಲೂ ಈ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಬಜೆಜ್‌ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ ಎಂಬ ಆರೋಪದ ಜತೆಗೆ ಇದೀಗ ಮುಖ್ಯಮಂತ್ರಿಯವರ ಹೇಳಿಕೆ ವಿರುದ್ಧ ಉತ್ತರ ಕರ್ನಾಟಕ ಭಾಗದಲ್ಲಿ ಹೋರಾಟ ತೀವ್ರ ಪ್ರಾರಂಭವಾಗಿರುವುದರಿಂದ ಕಾಂಗ್ರೆಸ್‌ಗೆ ರಾಜಕೀಯವಾಗಿ ನಷ್ಟವಾಗಲಿದೆ.
ಈ ಬಗ್ಗೆ ಖುದ್ದು ಆ ಭಾಗದ ಕಾಂಗ್ರೆಸ್ ನಾಯಕರೇ ಆತಂಕಗೊಂಡಿದ್ದಾರೆ. ಹೈಕಮಾಂಡ್ ಮಧ್ಯಪ್ರವೇಶಕ್ಕೂ ಒತ್ತಡ ಹಾಕಿದ್ದಾರೆ. ಹೀಗಾಗಿ, ಈ ವಿಚಾರದಲ್ಲಿ ನಾವು ಹೋರಾಟ ನಡೆಸಿದರೆ ಆ ಭಾಗದ ಜನರ ವಿಶ್ವಾಸಗಳಿಸಬಹುದು. ರಾಜಕೀಯವಾಗಿಯೂ ಲಾಭ ಪಡೆಯಬಹುದು. ಕಾಂಗ್ರೆಸ್ ಹಾಗೂ ಜೆಡಿಎಸ್‌ಅನ್ನು ಆ ಭಾಗದಲ್ಲಿ ಕಟ್ಟಿ ಹಾಕಬಹುದು.
ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ಕಾಂಗ್ರೆಸ್ ಶಾಸಕರನ್ನು ಸೆಳೆದು ಭಾವನಾತ್ಮಕ ವಿಚಾರ ಮುಂದಿಟ್ಟು ಪಕ್ಷದ ವಿರುದ್ಧವೇ ಬಂಡೇಳುವಂತೆ ಮಾಡಬೇಕು. ಉತ್ತರ ಕರ್ನಾಟಕಕ್ಕೆ ಅನ್ಯಾಯ ವಿಚಾರದಲ್ಲಿ ಒಂದೊಮ್ಮೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಕ್ಷೇತ್ರದ ಜನ ಗೆಲ್ಲಿಸುತ್ತಾರೆ. ಹೀಗಾಗಿ, ಯೋಚಿಸಿ ಎಂದು ಕಾಂಗ್ರೆಸ್ ಶಾಸಕರ ಮನವೊಲಿಸುವುದು. ಇದು ಯಶಸ್ವಿಯಾದರೆ ಆಪರೇಷನ್ ಕಮಲ ಕಾರ್ಯಾಚರಣೆಗೆ ಇಳಿಯುವುದು ಬಿಜೆಪಿಯ ಕಾರ್ಯತಂತ್ರವಾಗಿದೆ ಎಂದು ಹೇಳಲಾಗಿದೆ.
ಈ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳಿಗೆ ರಾಜಕೀಯ ತಿರುಗೇಟು ನೀಡಲು ತಂತ್ರ ರೂಪಿಸಲಾಗಿದೆ. ಚುನಾವಣೆ ಮುಗಿದ ತಕ್ಷಣ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾಗಿ ಬಿಜೆಪಿ ಕೈ ಸುಟ್ಟುಕೊಂಡ ಉದಾಹರಣೆ ಇದೆಯಾದರೂ ಈ ಬಾರಿಯ ಪ್ರಯತ್ನ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರತಿಕ್ರಿಯಿಸದ ಪಾಟೀಲ್, ಜಾರಕಿಹೊಳಿಉತ್ತರ ಕರ್ನಾಟಕ ಕುರಿತು ಸಿಎಂ ಕುಮಾರಸ್ವಾಮಿ ಹೇಳಿಕೆ ವಿವಾದದ ಸ್ವರೂಪ ಪಡೆದಿರುವ ಬಗ್ಗೆ ಎಂ.ಬಿ.ಪಾಟೀಲ್ ಆಗಲಿ, ಸತೀಶ್ ಜಾರಕಿಹೊಳಿ ಆಗಲಿ ಬಹಿರಂಗವಾಗಿ ಹೇಳಿಕೆ ಕೊಟ್ಟಿಲ್ಲ. ಒಂದೆಡೆ ಎಂ.ಬಿ.ಪಾಟೀಲ್ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಆಕ್ರೋಶಗೊಂಡಿದ್ದಾರೆ. ಮತ್ತೂಂದೆಡೆ ಸತೀಶ್ ಜಾರಕಿಹೊಳಿ ಸಹ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಲ್ಲದೇ, ಕಾಂಗ್ರೆಸ್ ನಡೆಸಿಕೊಳ್ಳುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆಷಾಢದ ನಂತರ ವಿಸ್ತರಣೆ ಎಂದು ಹೇಳಲಾಗಿದೆಯಾದರೂ ರಾಜ್ಯ ನಾಯಕರು ಲೋಕಸಭೆ ಚುನಾವಣೆಯಲ್ಲಿ ವಂಚಿತರಿಂದ ತೊಂದರೆಯಾಗಬಹುದು ಎಂದು ಮೀನಾಮೇಷ ಎಣಿಸುತ್ತಿದ್ದಾರೆ. ಈ ಎಲ್ಲ ಮಾಹಿತಿ ಸಂಗ್ರಹಿಸಿರುವ ಬಿಜೆಪಿ ಉತ್ತರ ಕರ್ನಾಟಕದ ಭಾವನಾತ್ಮಕ ವಿಚಾರದಲ್ಲಿ ಆಪರೇಷನ್ ಕಮಲಕ್ಕೆ ಕೈ ಹಾಕುವ ಪ್ರಯತ್ನ ನಡೆಸಿದೆ ಎನ್ನಲಾಗಿದೆ. ಬಿಜೆಪಿ ಭ್ರಮೆಯಲ್ಲಿದೆ: ಖಂಡ್ರೆ
ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರ ಬೀಳಿಸುವ ಕನಸು ಕಾಣುತ್ತಿದ್ದಾರೆ. ಆದರೆ, ಅದು ನನಸಾಗುವುದಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ಏನಾದರೂ ಆಗಿದ್ದರೆ ಅದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾತ್ರ. ಹೈದಾರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ವಿಚಾರದಲ್ಲಿ ಎಲ್.ಕೆ. ಅಡ್ವಾಣಿ ಏನು ಹೇಳಿದ್ದರು ಎಂಬುದು ನೆನಪಿಸಿಕೊಳ್ಳಲಿ. ಆದರೆ, ರಾಹುಲ್‌ಗಾಂಧಿಯವರು ಕಲಬುರಗಿಯಲ್ಲಿ ಬಂದು ಹೇಳಿ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಂಡರು. ಅದರಿಂದಾಗಿ ಇದೀಗ ಹೈದಾರಾಬಾದ್ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿಯಾಗುತ್ತಿದೆ. ಉದ್ಯೋಗಗಳು ಸಿಗುತ್ತಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ. – ಎಸ್. ಲಕ್ಷ್ಮಿನಾರಾಯಣ