Advertisement

ಬಿಜೆಪಿ ರಾಜ್ಯಾಧ್ಯಕ್ಷ ಗಾದಿಗೆ ಉ.ಕ. ಒತ್ತಡ!

11:29 PM May 06, 2019 | Lakshmi GovindaRaj |

ಕಲಬುರಗಿ: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಸಾರಥ್ಯ ವಹಿಸುವರು ಯಾರು? ಇಂಥದೊಂದು ಬಿರುಸಿನ ಚರ್ಚೆ ಈಗ ಜೋರಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಉತ್ತರ ಕರ್ನಾಟಕಕ್ಕೆ ಸಿಗಬೇಕೆಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ.

Advertisement

ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮದಡಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಮುಂದಿನ ತಿಂಗಳು ಬಿಡುಗಡೆಗೊಳಿಸಿ ಆ ಸ್ಥಾನಕ್ಕೆ ಯಾರು ಸೂಕ್ತ ಎಂಬ ಚಿಂತನೆ ಪಕ್ಷದಲ್ಲಿ ನಡೆದಿದ್ದರಿಂದ ಆಕಾಂಕ್ಷಿಗಳು ತಮ್ಮದೇಯಾದ ಶಕ್ತಿ ಒರೆಗಲ್ಲಿಗೆ ಹಚ್ಚಲು ಮುಂದಾಗಿದ್ದಾರೆ.

ಬಿಜೆಪಿಯ ಭದ್ರಕೋಟೆಯಾಗಿರುವ ಹಾಗೂ ಸರ್ಕಾರ ರಚನೆಯಲ್ಲಿ ಉತ್ತರ ಕರ್ನಾಟಕದ ಕೊಡುಗೆಯೇ ಹೆಚ್ಚಿರುವಾಗ ಪಕ್ಷದ ಅಧ್ಯಕ್ಷ ಸ್ಥಾನವೂ ಉ.ಕ.ಕ್ಕೆ ದೊರೆಯಬೇಕೆಂಬ ಕೂಗು ಈಗ ತೀವ್ರ ಸಂಚಲನ ಮೂಡಿಸಿದೆ. ಈ ಮೂಲಕ ಅಧ್ಯಕ್ಷ ಸ್ಥಾನಕ್ಕೆ ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ನಡುವೆ ಪೈಪೋಟಿ ಏರ್ಪಡುವಂತಾಗಿದೆ.

ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಡಿಸಿಎಂ ಆರ್‌. ಅಶೋಕ, ಶಾಸಕ ಸಿ.ಟಿ.ರವಿ ಸೇರಿ ಇತರರ ಹೆಸರು ಮುಂಚೂಣಿಯಲ್ಲಿದೆ. ಇನ್ನು ಉತ್ತರ ಕರ್ನಾಟಕ ಹೆಸರು ಚಾಲ್ತಿಗೆ ಬಂದರೆ ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷರಾಗಿರುವ ಲಕ್ಷ್ಮಣ ಸವದಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ, ಉಮೇಶ ಕತ್ತಿ, ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ್‌ ಸೇರಿ ಮತ್ತಿತರರ ಹೆಸರು ಮುಂಚೂಣಿಯಲ್ಲಿವೆ.

ಉ.ಕ ಮುನ್ನೆಲೆಗೆ: ಲೋಕಸಭೆ ಚುನಾವಣೆ ಫಲಿತಾಂಶ ನಂತರ ರಾಜ್ಯದ ರಾಜಕೀಯದಲ್ಲಿ ಕ್ಷೀಪ್ರ ಬದಲಾವಣೆಯಾಗಿ ಒಂದು ವೇಳೆ ಯಡಿಯೂರಪ್ಪ ಸಿಎಂ ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಉ.ಕ. ಭಾಗಕ್ಕೆ ದೊರಕಬೇಕೆಂಬ ಬೇಡಿಕೆಗೆ ಮತ್ತಷ್ಟು ಶಕ್ತಿ ಬರಲಿದೆ.

Advertisement

ತಮ್ಮ ಆಪ್ತರನ್ನು ಅಧ್ಯಕ್ಷ ಗಾದಿಗೆ ತರುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರು ಉತ್ತರ ಕೂಗು ಚಾಲ್ತಿಗೆ ತರುವಂತೆ ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ ಬಿಜೆಪಿ ಪಡೆದಿರುವ 104 ಶಾಸಕ ಸ್ಥಾನಗಳಲ್ಲಿ ಉತ್ತರ ಕರ್ನಾಟಕದ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಯನ್ನೊಳಗೊಂಡ ಉತ್ತರ ಕರ್ನಾಟದಲ್ಲಿ 44 ಸ್ಥಾನಗಳನ್ನು ಬಿಜೆಪಿ ಪಡೆದಿದೆ.

ಇದಲ್ಲದೇ 2008ರಲ್ಲಿ ಬಿಜೆಪಿ 110 ಸ್ಥಾನಗಳನ್ನು ಪಡೆದು ಸರ್ಕಾರ ರಚನೆಯಾದಾಗ ಉ.ಕ.ದಲ್ಲಿ 55 ಸ್ಥಾನಗಳು ಬಿಜೆಪಿ ಪಡೆದಿತ್ತು. ಆ ವೇಳೆಯಲ್ಲೂ ಉ.ಕ.ಕ್ಕೆ ಬಿಜೆಪಿ ಅಧ್ಯಕ್ಷ ಸ್ಥಾನ ಬಲವಾಗಿ ಕೇಳಿ ಬಂದಿತ್ತು.

ಉ.ಕ.ದಿಂದ ಮೂವರು: ಕಲಬುರಗಿಯವರಾಗಿರುವ ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ್‌ ಸೇಡಂ ಈ ಹಿಂದೆ 2000ದಿಂದ 2003ರವರೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅದೇ ರೀತಿ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹಾಗೂ ಸಂಸದ ಪ್ರಹ್ಲಾದ ಜೋಶಿ ಉತ್ತರ ಕರ್ನಾಟಕ ಭಾಗದಿಂದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ರಾಜ್ಯ ಘಟಕದ ಮುಂದಿನ ಅಧ್ಯಕ್ಷರು ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಎಂಬುದು ಇಲ್ಲ. ಆದರೆ ಉತ್ತರ ಕರ್ನಾಟಕದವರಾದರೆ ಖುಷಿ. ಒಟ್ಟಾರೆ ಬಿಜೆಪಿ ಮುಂದಿನ ಅಧ್ಯಕ್ಷರು ಉತ್ತರ ಕರ್ನಾಟಕ ಭಾಗದವರಾಗಲಿ.
-ವಿ. ಸೋಮಣ್ಣ, ಮಾಜಿ ಸಚಿವ

ಉತ್ತರ ಕರ್ನಾಟಕ ಬಿಜೆಪಿ ಭದ್ರಕೋಟೆ. ಸರ್ಕಾರ ರಚನೆಯಲ್ಲಿ ಹಾಗೂ ಶಾಸಕರ ಸಂಖ್ಯೆ ಹೆಚ್ಚಳದಲ್ಲಿ ಉ.ಕ. ಕೊಡುಗೆ ಅಪಾರ. ಸಂಖ್ಯೆಗೆ ನಾವು ಬೇಕು. ಆದರೆ ಅಧಿಕಾರಕ್ಕೆ ಬೇಡವೇ? ಅಧ್ಯಕ್ಷ ಸ್ಥಾನ ಯಾವುದೇ ಒಂದು ಪ್ರದೇಶವನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ. ಈ ಸಲ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಮ್ಮ ಭಾಗಕ್ಕೆ ಬೇಕು.
-ಬಸನಗೌಡ ಪಾಟೀಲ್‌ ಯತ್ನಾಳ, ವಿಜಯಪುರ ನಗರ ಶಾಸಕ

* ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next