Advertisement

ಉತ್ತರ ಕರ್ನಾಟಕ ಮಧ್ಯಮ ಭೂಕಂಪ ಹಾನಿ ವಲಯ

02:08 AM Oct 16, 2021 | Team Udayavani |

ಬೆಂಗಳೂರು: ಕೆಲವು ದಿನಗಳಿಂದ ಉತ್ತರ ಕರ್ನಾಟಕದ ಕಲಬುರಗಿ, ವಿಜಯಪುರ ಮತ್ತಿತರ ಭಾಗಗಳಲ್ಲಿ ಲಘು ಭೂಕಂಪನ ಜನರ ಧೃತಿಗೆಡಿಸಿವೆ. ಸಾಮಾನ್ಯವಾಗಿ ವಿಪರೀತ ಮಳೆ ಮತ್ತು ಪ್ರವಾಹ, ಭೌಗೋಳಿಕ ರಚನೆ, ಜಲಜ ಶಿಲೆ, ಸುಣ್ಣಕಲ್ಲು ಮತ್ತು ಮರಳು ಕಲ್ಲಿನ ಪ್ರಮಾಣ ಹೆಚ್ಚಿರುವ ಕಡೆ ಒಂದಷ್ಟು ಭೂಕಂಪನಗಳು ಸಂಭವಿಸುತ್ತವೆ ಎಂದು ತಜ್ಞರು ಹೇಳುತ್ತಾರೆ. ಕಲಬುರಗಿಯಲ್ಲಿ ಸುಣ್ಣದ ಕಲ್ಲಿನ ಪ್ರಮಾಣ ಹೆಚ್ಚಾಗಿದ್ದು, ಹೀಗಾಗಿ ಭೂಮಿ ನಡುಗುತ್ತಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

Advertisement

ಇದರ ಮಧ್ಯೆಯೇ ಕರ್ನಾಟಕದ ಯಾವ ಭಾಗಗಲ್ಲಿ ಎಷ್ಟು ಪ್ರಮಾಣದ ಭೂಕಂಪನ ಉಂಟಾಗಬಲ್ಲದು ಎಂಬ ಬಗ್ಗೆ ಮಾಹಿತಿ ಹೊರಬಿದ್ದಿದೆ. 2020-21ನೇ ಸಾಲಿನ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಯೋಜನೆ ವರದಿಯಲ್ಲಿ ಹೇಳಿರುವಂತೆ ಭೂಕಂಪ ಅಪಾಯದ ಪರಿಷ್ಕೃತ ಮ್ಯಾಪಿಂಗ್‌ ಪ್ರಕಾರ ರಾಜ್ಯದ ಒಟ್ಟು ಭೌಗೋಳಿಕ ಪ್ರದೇಶದ ಶೇ. 22.13ರಷ್ಟು ಪ್ರದೇಶ ಭೂಕಂಪದ ಮಧ್ಯಮ ಹಾನಿಯ ವಲಯ (ವಲಯ-3) ದಲ್ಲಿದೆ. ಉಳಿದ ಭಾಗ ಕಡಿಮೆ ಅಪಾಯ ವಲಯ (ವಲಯ-2)ದಲ್ಲಿದೆ. ವಲಯ-3ರಲ್ಲಿ ಬರುವ ಮಹಾರಾಷ್ಟ್ರದ ಗಡಿಗೆ ಹೊಂದಿ ಕೊಂಡಿರುವ ಉ.ಕ.ದಲ್ಲಿ ಅಲ್ಪಸ್ವಲ್ಪ ಭೂಕಂಪ ಸಂಭವಿಸಬಹುದು.

ಆದರೆ ತಜ್ಞರು ಹೇಳಿರುವಂತೆ ಕರ್ನಾಟಕದ ಭೌಗೋಳಿಕ ರಚನೆ ಹಿನ್ನೆಲೆಯಲ್ಲಿ ಇಲ್ಲಿ ಸಂಭವಿಸುವ ಭೂಕಂಪನಗಳು ತೀರಾ ಕಡಿಮೆ ಪ್ರಮಾಣದ್ದಾಗಿರುವುದರಿಂದ ಹೆಚ್ಚು ಹಾನಿ ಉಂಟಾಗದು.

500 ಕಂಪನ

ರಾಜ್ಯದಲ್ಲಿ 3 ದಶಕಗಳಲ್ಲಿ 500ಕ್ಕೂ ಹೆಚ್ಚು ಭೂಕಂಪನಗಳು ವರದಿಯಾಗಿವೆ. ಇವೆಲ್ಲವೂ ಕಡಿಮೆ ಪ್ರಮಾಣದವು. ಬೀದರ್‌, ಕಲಬುರಗಿ, ವಿಜಯ ಪುರ, ಬಾಗಲ ಕೋಟೆ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳು ಮಧ್ಯಮ ಹಾನಿ ಭೂಕಂಪದ ವಲಯ (ವಲಯ-3)ದಲ್ಲಿ ಬರುತ್ತವೆ. ಉಳಿದವು ಕಡಿಮೆ ಹಾನಿಯ ಭೂಕಂಪ ವಲಯ (ವಲಯ-2)ದಲ್ಲಿ ಬರುತ್ತವೆ.

Advertisement

ಎನ್‌ಜಿಐಆರ್‌ನಿಂದ ಸಮೀಕ್ಷೆ
ಲಘು ಪ್ರಮಾಣದ ಭೂಕಂಪನ ಮತ್ತು ಭೂನಡುಕ ಸಂಭವಿಸಿರುವ ಪ್ರದೇಶಗಳಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಭೌಗೋಳಿಕ ಸಂಶೋಧನ ಸಂಸ್ಥೆ (ಎನ್‌ಜಿಆರ್‌ಐ) ವತಿಯಿಂದ ಸಮೀಕ್ಷೆ ನಡೆಸಲು ತೀರ್ಮಾನಿಸ ಲಾಗಿದೆ. ಈಗಾಗಲೇ ಸಂಸ್ಥೆಗೆ ಮನವಿ ಮಾಡಿ ಕೊಳ್ಳಲಾಗಿದ್ದು, ಮುಂದಿನ ವಾರ ತಜ್ಞರು ಸಮೀಕ್ಷೆ ನಡೆಸಲು ಆಗಮಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ..

Advertisement

Udayavani is now on Telegram. Click here to join our channel and stay updated with the latest news.

Next