Advertisement

ಮಹಾಜ್ವಾಲೆಗೆ ಉತ್ತರ ಕರ್ನಾಟಕ ಸ್ತಬ್ಧ

09:12 AM Dec 28, 2017 | Team Udayavani |

ಹುಬ್ಬಳ್ಳಿ: ಮಹದಾಯಿಗಾಗಿ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. “ಜಲ ರಾಜಕೀಯ’ಕ್ಕೆ ಬೇಸತ್ತು ಡಿ.27ರಂದು ನೀಡಲಾಗಿದ್ದ “ಉತ್ತರ ಕರ್ನಾಟಕ ಬಂದ್‌’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಬ್ಬಳ್ಳಿ-ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟೆಯಲ್ಲಿ ಜನಜೀವನ ಸಂಪೂರ್ಣ ಸ್ತಬ್ದವಾಗಿದ್ದರೆ, ಉತ್ತರ ಕನ್ನಡ, ವಿಜಯಪುರ, ಹಾವೇರಿ, ಕೊಪ್ಪಳ, ಬಳ್ಳಾರಿ, ಕಲಬುರಗಿ ಭಾಗದಲ್ಲಿ ಪ್ರತಿಭಟನೆಯ ಮೂಲಕ ಬೆಂಬಲ ದೊರೆತಿದೆ.

Advertisement

ಹುಬ್ಬಳ್ಳಿಯಲ್ಲಿ ಬಂದ್‌ ವೇಳೆ ಸಂಸದ ಪ್ರಹ್ಲಾದ ಜೋಶಿ ಕಚೇರಿ, ನಿವಾಸಕ್ಕೆ ಮುತ್ತಿಗೆ ಹಾಕಲಾಯಿತಲ್ಲದೆ, ಕಚೇರಿಯ ಕಿಟಕಿ ಗಾಜು ಒಡೆಯಲಾಗಿದೆ. ಸರ್ಕ್ನೂಟ್‌ ಹೌಸ್‌ ರಸ್ತೆಯಲ್ಲಿನ ಕಾμ ಡೇ ತೆರೆದುಕೊಂಡಿದ್ದನ್ನು ಕಂಡು ಒಳ ನುಗ್ಗಿದ ಪ್ರತಿಭಟನಾಕಾರರು ಕುರ್ಚಿಗಳನ್ನು ಜಖಂಗೊಳಿಸಿದ್ದಾರೆ. ಶಾಲಾ-ಕಾಲೇಜುಗಳು ಬಂದ್‌ ಆಗಿದ್ದವು. ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಕರವೇಯ ನಾಲ್ವರು ಕಾರ್ಯಕರ್ತರು ಬ್ಲೇಡ್‌ಗಳಿಂದ ತಮ್ಮ ಕೈ ಕೊಯ್ದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಬಂಡಾಯ ನೆಲದಲ್ಲಿ ಕಿಚ್ಚು: ಬಂಡಾಯದ ನೆಲ ನರ ಗುಂದ, ನವಲಗುಂದದಲ್ಲಿ ಪ್ರತಿಭಟನೆ ಜೋರಾಗಿತ್ತು. ನವಲಗುಂದದ ರೈತ ಭವನದಲ್ಲಿ ಪಕ್ಷಾತೀತ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಬುಧವಾರ 888ನೇ ದಿನಕ್ಕೆ ಕಾಲಿಟ್ಟಿತು. ಪ್ರತಿಭಟನೆ ವೇಳೆ ಟೈರ್‌ಗೆ ಸುರಿದ ಪೆಟ್ರೋಲ್‌ ಸಿಪಿಐ ದಿವಾಕರ ಕಾಲಿಗೆ ಸಿಡಿದು ಬೆಂಕಿ ಹೊತ್ತಿಕೊಂಡ ಘಟನೆಯೂ ನಡೆಯಿತು. ಪಟ್ಟಣದಲ್ಲಿ ರೈತರ ಮೇಲೆ ಪಿಎಸ್‌ಐ ಲಾಠಿ ಬೀಸಿದ್ದಾರೆಂಬ ವದಂತಿ ಹರಡಿದ್ದರಿಂದ ಸ್ವಲ್ಪ ಸಮಯ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಬಾಗಲಕೋಟೆಯಲ್ಲಿ ವೈನ್‌ಶಾಪ್‌ವೊಂದಕ್ಕೆ ಕಲ್ಲು ಎಸೆಯಲಾಯಿತು. ಬೆಳಗಾವಿ ಜಿಲ್ಲೆಯ ಹಲವೆಡೆಯೂ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂತು. ವಿಜಯಪುರ ಸೇರಿದಂತೆ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.

ಎನ್‌ಫಿಲ್ಡ್‌ ಏರಿದ ಕೋನರೆಡ್ಡಿ: ಬೆಳಗ್ಗೆಯೇ ರಾಯಲ್‌ ಎನ್‌ಫಿಲ್ಡ್‌ ಬೈಕ್‌ನಲ್ಲಿ ಧಾರವಾಡದ ನಗರದ ತುಂಬೆಲ್ಲಾ ಸಂಚರಿಸಿದ ನವಲಗುಂದದ ಶಾಸಕ ಎನ್‌. ಎಚ್‌.ಕೋನರೆಡ್ಡಿ ಹೋರಾಟಕ್ಕೆ ಸಾಥ್‌ ನೀಡಿದರು.  

ರಸ್ತೆ ಮಧ್ಯೆಯೇ ಹೋಮ
ಮಹದಾಯಿ ವಿವಾದ ಶೀಘ್ರ ಬಗೆಹರಿಯಲಿ ಎಂದು  ಕರ್ನಾಟಕ ಯುವ ಸೇನೆ ಕಾರ್ಯಕರ್ತರು ರಸ್ತೆ ನಡುವೆಯೇ ಸ್ನಾನ ಮಾಡಿ ಹೋಮ ಮಾಡಿದರು. ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನಾಕಾರರು ಭಜನೆ ಮಾಡಿದರು. ಮಹಿಳಾ ಹೋರಾಟಗಾರರು ಕುಂಟೆ ಬಿಲ್ಲೆ
ಆಡಿದರು. ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಕಾರ್ಯಕರ್ತರು ತಲೆ ಮೇಲೆ ನೀರು ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಆಟೋ ಚಾಲಕರ ಸಂಘದವರು ರಾಜಕಾರಣಿಗಳನ್ನು ಹರಾಜು ಹಾಕಿದರು.

Advertisement

ಹಾಲು ಹಂಚಿದ  ಬಸವರಾಜ
ಧಾರವಾಡದ ನಗರಕ್ಕೆ ದಿನನಿತ್ಯ ಬೈಕ್‌ ಮೇಲೆ ಬಂದು ಎರಡು ಕ್ಯಾನ್‌ ಹಾಲು ಪೂರೈಸುವ ಸಮೀಪದ ಕ್ಯಾರಕೊಪ್ಪ ಗ್ರಾಮದ ಬಸವರಾಜ ಬುಧವಾರ ಮಹದಾಯಿ ಹೋರಾಟಕ್ಕೆ ಬಂದಿದ್ದ ಹೋರಾಟಗಾರರಿಗೆ ಕುಡಿಯಲು ಹಾಲು ನೀಡಿ ಹೋರಾಟಕ್ಕೆ ಸಾಥ್‌
ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next