Advertisement

ಉಡುಪಿ: ಸಾಮಾಜಿಕ ಜಾಲತಾಣಕ್ಕೆ ಉತ್ತರ ಭಾರತದ ವಂಚಕರ ಕಣ್ಣು

07:59 PM Aug 08, 2021 | Team Udayavani |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ದರೋಡೆ, ಕಳ್ಳತನ ಪ್ರಕರಣಕ್ಕಿಂತಲೂ ಆನ್‌ಲೈನ್‌ ಮೂಲಕ ವಂಚನೆ ಮಾಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಸೆನ್‌ ಠಾಣೆ ಯಲ್ಲಿ ಚಿತ್ರ-ವಿಚಿತ್ರ ಪ್ರಕರಣಗಳು ದಾಖಲಾಗುತ್ತಿರುವುದು ಪೊಲೀಸರಿಗೂ ಸವಾಲಾಗುತ್ತಿದೆ.

Advertisement

ಮುಖ್ಯವಾಗಿ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ನಮ್ಮ ಗೆಳೆಯರೆನಿಸಿಕೊಂಡವರ ಭಾವಚಿತ್ರ ಹಾಕಿ ಅದೇ ಹೆಸರಿನಲ್ಲಿ ಸಂದೇಶ  ಕಳುಹಿಸಿ ಹಣಕ್ಕೆ ಬೇಡಿಕೆ ಇರಿಸುವ ಘಟನೆ ದಿನಂಪ್ರತಿ ನಡೆಯುತ್ತಿವೆ. ಜಿಲ್ಲೆಯ ಜಿಲ್ಲಾಧಿಕಾರಿಗಳ ಹೆಸರಿ ನಲ್ಲಿಯೂ 4ರಿಂದ 5 ಬಾರಿ ಹಲವು ಮಂದಿಗೆ ಇಂತಹ ಸಂದೇಶಗಳು ರವಾನೆ ಯಾಗಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಶ್ಲೀಲ ವೀಡಿಯೋ:

ಪೇಸ್‌ಬುಕ್‌ ಮೆಸೆಂಜರ್‌ಗೆ ಪರಿಚಿತ ರಂತೆ ಸಂದೇಶ ಕಳುಹಿಸಿ ಮೊಬೈಲ್‌ ಸಂಖ್ಯೆ ಪಡೆದುಕೊಂಡು ಕೆಲವೇ ಕ್ಷಣ ಗಳಲ್ಲಿ ವೀಡಿಯೋ ಕರೆ ಮಾಡುತ್ತಾರೆ. ಆ  ಕಡೆಯಿಂದ ಯಾವುದೇ ಚಿತ್ರ ಕಂಡು ಬರುವುದಿಲ್ಲ. ಈ ವೇಳೆ ನಮ್ಮ ಮುಖಚಿತ್ರ ವುಳ್ಳ ವೀಡಿಯೋ ತೆಗೆದು ಅದಕ್ಕೆ ಅಶ್ಲೀಲ ವಿಡಿಯೋಗಳನ್ನು ಎಡಿಟ್‌ ಮಾಡಿ ನಮ್ಮನ್ನು  ಬೆದರಿಸುತ್ತಾರೆ. ಇಂತಿಷ್ಟು ಹಣ ನೀಡ ಬೇಕು; ಇಲ್ಲದಿದ್ದರೆ ನಿಮ್ಮ ಫೇಸ್‌ಬುಕ್‌ನಲ್ಲಿರುವ ಎಲ್ಲರಿಗೂ ಈ ವೀಡಿಯೋವನ್ನು ಕಳುಹಿಸುವ ಬೆದರಿಕೆ ಒಡ್ಡಲಾಗುತ್ತದೆ. ಹೆಚ್ಚಿನವರು ಇಂತಹ ಸಂದೇಶಗಳಿಗೆ ಹೆದರಿ ಅವರು ಕೇಳಿದಷ್ಟು ಹಣ ನೀಡುವ ಘಟನೆಗಳೂ ನಡೆಯುತ್ತಿವೆ.

ವಿದ್ಯಾರ್ಥಿಗಳು, ಗಣ್ಯ ವ್ಯಕ್ತಿಗಳೇ ಟಾರ್ಗೆಟ್‌:

Advertisement

ಇಂತಹ ಸಂದೇಶಗಳನ್ನು ವಿದ್ಯಾರ್ಥಿ ಗಳು ಹಾಗೂ ಗಣ್ಯವ್ಯಕ್ತಿಗಳನ್ನು ಕೇಂದ್ರೀ ಕರಿಸಿಕೊಂಡು ಮಾಡಲಾಗುತ್ತದೆ. ವಿದ್ಯಾರ್ಥಿಗಳು ಬೇಗನೆ ಹೆದರಿ ಹಣ ನೀಡುತ್ತಾರೆ ಎಂಬುದು ಒಂದು ಕಾರಣ ವಾದರೆ; ತಮ್ಮ ಘನತೆ ಹರಾಜಾಗಬಾರದು ಎಂದು ಗಣ್ಯ ವ್ಯಕ್ತಿಗಳು ಹಣ ನೀಡ ಬಹುದು ಎಂಬ ಉದ್ದೇಶ ಕೃತ್ಯ ಮಾಡುವವರದ್ದಾಗಿರುತ್ತದೆ. ತಪ್ಪಿ ಒಂದು ವೇಳೆ ಹಣ ನೀಡಿದ್ದೇ ಆದಲ್ಲಿ ಮತ್ತೆ, ಮತ್ತೆ ಹಣಕ್ಕೆ ಬೇಡಿಕೆ ಇಡುತ್ತಲೇ ಬರುತ್ತಾರೆ.

ಉತ್ತರಭಾರತ ಮೂಲದವರ ಕೃತ್ಯ:

ಇಂತಹ ಕೃತ್ಯಗಳು ಉಡುಪಿ ಮಾತ್ರ ವಲ್ಲದೆ ದೇಶಾದ್ಯಂತವೂ ನಡೆಯುತ್ತಿದೆ. ಇದರ ಬೆನ್ನುಹತ್ತಿ ಹೋದರೆ ಸಿಗುವುದು ಯುಪಿ, ಹರಿಯಾಣ, ಪಶ್ಚಿಮ ಬಂಗಾಳ,  ಹೊಸದಿಲ್ಲಿಯ ಮಂದಿ. ನಮ್ಮ ಸಾಮಾಜಿಕ  ಜಾಲತಾಣದಲ್ಲಿರುವ ಎಲ್ಲ ಚಿತ್ರ, ಮಾಹಿತಿ ತೆಗೆದುಕೊಂಡು ಅದರಂತೆ ನಕಲಿ ಖಾತೆ ಸೃಷ್ಟಿಸಿ ಇಂತಹ ಚಟುವಟಿಕೆಗಳನ್ನು ಅವರು ನಡೆಸುತ್ತಿದ್ದಾರೆ. ಕೃತ್ಯ ನಡೆಸಿದವರ ದೂರವಾಣಿ ಸಂಖ್ಯೆ ಟ್ರೇಸ್‌ ಆದರೂ ವ್ಯಕ್ತಿ ಯಾರೆಂಬುವುದು ತಿಳಿಯುವುದಿಲ್ಲ.

ಮಾಹಿತಿ ವಿಳಂಬ:

ಇಂತಹ ಘಟನೆಗಳ ಬಗ್ಗೆ ದೂರು ಸ್ವೀಕರಿಸಿದ ಬಳಿಕ ಪೊಲೀಸರು ಸಾಮಾ ಜಿಕ  ಜಾಲತಾಣಗಳಾದ ಫೇಸ್‌ಬುಕ್‌, ಗೂಗಲ್‌,  ಇನ್ಸ್‌ಟಾಗ್ರಾಮ್‌, ಟ್ವಿಟರ್‌ಗಳಿಗೆ ಹೆಚ್ಚಿಸಿ  ವಿವರ ನೀಡುವಂತೆ ಸಂದೇಶ ರವಾನಿಸುತ್ತಾರೆ. ಆದರೆ ಇಲ್ಲಿಂದ ಬರುವ ಸಂದೇಶಗಳು ವಿಳಂಬ ವಾಗುತ್ತಿರುವುದರಿಂದ ಕೂಡ  ಆರೋಪಿಗಳ ಪತ್ತೆಕಾರ್ಯ ಕಷ್ಟಕರವಾಗುತ್ತಿದೆ. ಅದ ರಲ್ಲೂ ಟ್ವಿಟರ್‌ ಸಂಸ್ಥೆಯವರು ಯಾವ ನೋಟಿಸ್‌ಗೂ ಕ್ಯಾರೇ ಮಾಡುತ್ತಿಲ್ಲ. ಅಮೆರಿಕಾ, ಯುಕೆ ಕಚೇರಿಯಲ್ಲಿ ಕೇಳಿ ಎಂಬ ಉತ್ತರ ಲಭಿಸುತ್ತದೆ.

ಬದಲಾಗಬೇಕಿದೆ ಪೊಲೀಸರ ಕಾರ್ಯವೈಖರಿ :

ಹಲ್ಲೆ, ದರೋಡೆ, ಕಳ್ಳತನ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪತ್ತೆಹಚ್ಚುವ ಪೊಲೀಸರಿಗೆ ಸೈಬರ್‌ ಅಪರಾಧ ಪ್ರಕರಣಗಳು ಸವಾಲಾಗುತ್ತಿದೆ. ಅದಾಗಷ್ಟೇ ವಿದ್ಯಾಭ್ಯಾಸ ಮಾಡಿ ಕೆಲಸ ಸಿಗದೆ ಕಂಗಾಲಾಗುವ ವಿದ್ಯಾರ್ಥಿಗಳು ಹಾಗೂ ತಾಂತ್ರಿಕ ವಿಭಾಗಗಳಲ್ಲಿ ಪರಿಣತರಿದ್ದು, ಕೆಲಸವಿಲ್ಲದವರೂ ಇಂತಹ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಸೈಬರ್‌ ಅಪರಾಧ ಪೊಲೀಸ್‌ ಠಾಣೆಗಳಿಗೆ ನೇಮಕಾತಿ ಮಾಡುವ ಸಂದರ್ಭ ತಾಂತ್ರಿಕವಾಗಿ ನೈಪುಣ್ಯತೆ ಹೊಂದಿದವರಿಗೆ ಪ್ರಾಶಸ್ತ್ಯ ನೀಡಿದರೆ ಹಾಗೂ ಅತ್ಯುನ್ನತ ತಂತ್ರಜ್ಞಾನಗಳನ್ನು ಇಲಾಖೆಯಲ್ಲಿ ಬಳಸಿದರೆ ಇಂತಹವರ ಜಾಡನ್ನು ಸುಲಭದಲ್ಲಿ ಪತ್ತೆಹಚ್ಚಿ ಆರೋಪಿಗಳನ್ನು ಹಿಡಿಯಲು ಸಾಧ್ಯವಿದೆ.

ನಕಲಿ ಖಾತೆ  ಸೃಷ್ಟಿಸಿ ಜನರನ್ನು ವಂಚಿಸುವ ಬಗ್ಗೆ ಹಲವು ದೂರುಗಳು ಬಂದಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೂರಿಗೆ ಸಂಬಂಧಿಸಿ ಈಗಾಗಲೇ ಸಾಮಾಜಿಕ ಜಾಲತಾಣ ಸಂಸ್ಥೆಗಳ ಬಳಿ ಹಲವು  ವಿವರ ಕೇಳಲಾಗಿದೆ.-ಎನ್‌. ವಿಷ್ಣುವರ್ಧನ್‌ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಉಡುಪಿ

ಸಾಮಾಜಿಕ ಜಾಲತಾಣಗಳಲ್ಲಿ ವಂಚನೆಯಾಗುತ್ತಿರುವ ಬಗ್ಗೆ ನಾಗರಿಕರು ಎಚ್ಚರದಿಂದ ಇರಬೇಕು. ಹಣಕ್ಕೆ ಬೇಡಿಕೆ ಇಟ್ಟರೆ ಯಾವುದೇ ಕಾರಣಕ್ಕೆ ನೀಡಬಾರದು. ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡ ಜಾಗೃತವಾಗಿದ್ದು, ಈಗಾಗಲೇ ಉತ್ತರ ಭಾರತದ ಹಲವೆಡೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. -ಮಂಜುನಾಥ, ನಿರೀಕ್ಷಕರು, ಸೆನ್‌ ಠಾಣೆ, ಉಡುಪಿ

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next