ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿ ಮೈಕೊರೆಯುವ ಚಳಿಗೆ ತತ್ತರಿಸಿ ಹೋಗಿದ್ದು, ಮತ್ತೊಂದೆಡೆ ಉತ್ತರ ಭಾರತದಾದ್ಯಂತ ಮುಂದಿನ ಎರಡು ದಿನಗಳ ಕಾಲ ವಿಪರೀತ ಚಳಿಗಾಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.
ನವದೆಹಲಿಯಲ್ಲಿ ದಾಖಲೆ ಪ್ರಮಾಣದ ಕನಿಷ್ಠ 2.4 ಡಿಗ್ರಿ ಸೆಲ್ಸಿಯಸ್ ತಾಪಮಾನ ಇಳಿಕೆಯಾಗಿದೆ. ದಿಲ್ಲಿಯಲ್ಲಿ ಶನಿವಾರ ಬೆಳಗ್ಗೆ ದಾಖಲೆ ಪ್ರಮಾಣದ ಕನಿಷ್ಠ ಚಳಿಗಾಳಿ ತಾಪಮಾನಕ್ಕೆ ಸಾಕ್ಷಿಯಾಗಿದ್ದು, ದಟ್ಟ ಮಂಜು, ಇಬ್ಬನಿಯಿಂದ ವಾಹನ ಸವಾರರು ಪರದಾಡುವಂತಾಗಿತ್ತು ಎಂದು ವರದಿ ತಿಳಿಸಿದೆ.
ಪಂಜಾಬ್, ಹರ್ಯಾಣ, ಚಂಡೀಗಢ್, ದಿಲ್ಲಿ, ಉತ್ತರ ರಾಜಸ್ಥಾನ ಮತ್ತು ಉತ್ತರಪ್ರದೇಶಗಳಲ್ಲಿಯೂ ಮೈಕೊರೆಯುವ ಚಳಿಗಾಳಿ ಬೀಸುತ್ತಿರುವುದಾಗಿ ಹವಾಮಾನ ಇಲಾಖೆ ವರದಿ ಹೇಳಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ದಟ್ಟು ಮಂಜು ಕವಿದ ವಾತಾವರಣದಿಂದಾಗಿ ನಾಲ್ಕು ವಿಮಾನಗಳ ಸಂಚಾರ ಬದಲಿಸಿದ್ದು, 20ಕ್ಕೂ ಅಧಿಕ ರೈಲು ಸಂಚಾರ ವಿಳಂಬವಾಗಿತ್ತು ಎಂದು ವರದಿ ವಿವರಿಸಿದೆ.
ವಿಪರೀತ ಚಳಿಗಾಳಿ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಅಲಿಗಢ್, ಬಾಘ್ ಪತ್, ಮೀರತ್ ಮತ್ತು ಹಾಪುರ್ ನ ಎಲ್ಲಾ ಶಾಲಾ, ಕಾಲೇಜುಗಳನ್ನು ಡಿಸೆಂಬರ್ 28ರ ತನಕ ರಜೆ ಘೋಷಿಸಲಾಗಿತ್ತು. ಲಕ್ನೋದಲ್ಲಿ ಡಿ.29ರವರೆಗೆ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹಿಮಾಚಲ ಪ್ರದೇಶದಲ್ಲಿಯೂ ಚಳಿಗಾಳಿ ಮುಂದುವರಿದಿದ್ದು, ಲಾಹೌಲ್, ಸ್ಪೀಟಿ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ ಮೈನಸ್ 15 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿದೆ. ಕಾಲ್ಪಾದ ಕಿನ್ನೌರ್ ಜಿಲ್ಲೆಯಲ್ಲಿ ಅತೀ ಕಡಿಮೆ ಮೈನಸ್ 1.7 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.