Advertisement

ಈ ಕ್ಷಣದ ನಾಟಕವಾಗದಿರಲಿ

06:00 AM Apr 28, 2018 | Team Udayavani |

ಪರಮಾಣು ಶಸ್ತ್ರಾಸ್ತ್ರದ ಹೆಸರಲ್ಲಿ ಅಮೆರಿಕ ಮತ್ತು ಅದರ ಪರಮಾಪ್ತ ರಾಷ್ಟ್ರ ದಕ್ಷಿಣ ಕೊರಿಯಾವನ್ನು ಬೆದರಿಸುತ್ತಲೇ ಬಂದ ಉತ್ತರ ಕೊರಿಯಾ ಈಗ ತನ್ನ ವರಸೆ ಬದಲಿಸಿದೆ. ಶುಕ್ರವಾರ ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಉನ್‌ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ಜೇ ಇನ್‌ ನಡೆಸಿದ ಐತಿಹಾಸಿಕ ಮಾತುಕತೆ ಎರಡೂ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ಹೊಸ ಆಯಾಮ ಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಭೇಟಿ ಪಾನಮುನ್‌ಜೋಮ್‌ ಎನ್ನುವ ಹಳ್ಳಿಯಲ್ಲಿ ನಡೆದದ್ದು ವಿಶೇಷ. ಈ ಹಳ್ಳಿ ಉತ್ತರ ಮತ್ತು ದಕ್ಷಿಣ ಕೊರಿಯಾ ನಡುವಿನ ಗಡಿಯಲ್ಲಿದೆ. ದಶಕಗಳ ಹಿಂದೆ ಕದನ ವಿರಾಮದ ತೀರ್ಮಾನ ಹೊರಬಿದ್ದದ್ದೂ ಇದೇ ಪ್ರದೇಶದಿಂದಲೇ. 

Advertisement

ಎರಡೂ ರಾಷ್ಟ್ರಗಳ ನಾಯಕರು ಕೊರಿಯಾ ಪರ್ಯಾಯ ದ್ವೀಪದಾದ್ಯಂತ ಅಣ್ವಸ್ತ್ರ ನಾಶ, ಸಂಪೂರ್ಣ ಹಾಗೂ ಶಾಶ್ವತ ಶಾಂತಿ ಕಾಯ್ದು ಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ 65 ವರ್ಷಗಳಿಂದ ನಡೆಯುತ್ತಾ ಬಂದಿರುವ ಯುದ್ಧವನ್ನೂ ಕೊನೆಗಾಣಿಸುವುದಾಗಿ ಹೇಳಿದ್ದಾರೆ. ಎಲ್ಲಕ್ಕಿಂತ ಗಮನಸೆಳೆದ ಸಂಗತಿಯೆಂದರೆ, ದಕ್ಷಿಣ ಕೊರಿಯಾ ಅಧ್ಯಕ್ಷರು ಉತ್ತರ ಕೊರಿಯಾ ಸೀಮೆಯೊಳಗೆ ಕಾಲಿಟ್ಟದ್ದು , ನಂತರ ಅವರು ಕಿಮ್‌ ಜಾಂಗ್‌ ಉನ್‌ರ ಕೈ ಹಿಡಿದು ಅವರನ್ನು ದಕ್ಷಿಣ ಕೊರಿಯಾ ಗಡಿ ಯೊಳಗೆ ಕರೆತಂದದ್ದು. ಎರಡೂ ರಾಷ್ಟ್ರಗಳ ನಡುವಿನ ದಶಕಗಳ ಹಗೆತನವನ್ನು ಹಿನ್ನೆಲೆಯಲ್ಲಿಟ್ಟು ನೋಡಿದಾಗ ಇದು ಅತಿ ದೊಡ್ಡ ಬದಲಾವಣೆಯೇ ಸರಿ. 

ಈ ವಿದ್ಯಮಾನ ನಿಜಕ್ಕೂ ಜಗತ್ತನ್ನು ಎಷ್ಟು ಅಚ್ಚರಿಗೆ ದೂಡಿದೆಯೆಂದರೆ ಅಮೆರಿಕ, ಚೀನಾ, ರಷ್ಯಾ, ಜಪಾನ್‌, ಬ್ರಿಟನ್‌ ಸೇರಿದಂತೆ ಅನೇಕ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿವೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಉತ್ತರ ಕೊರಿಯಾದ ನಡೆಯನ್ನು ಕೊಂಡಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಕಿಮ್‌ ಜಾಂಗ್‌ ಉನ್‌ರನ್ನು ಸಂಬೋಧಿಸುವಾಗ “ಅತಿ ಗೌರವಾನ್ವಿತ’ ಎಂಬ ಪದ ಬಳಸಿದ್ದರು. ಟ್ರಂಪ್‌ರ ಮೃದು ಮಾತಿನ ಹಿಂದೆ, ಉತ್ತರ ಕೊರಿಯಾ ತನ್ನ ವಿದೇಶಾಂಗ ನೀತಿಯಲ್ಲಿ ಮಾಡಿಕೊಳ್ಳುತ್ತಿರುವ ಸಕಾರಾತ್ಮಕ ಬದಲಾವಣೆ ಕಾರಣ ಎನ್ನಲಾಗುತ್ತಿದೆ. ಅಮೆರಿಕದೊಂದಿಗೆ ಮಾತುಕತೆಗೆ ಕಿಮ್‌ ಆಡಳಿತ ಉತ್ಸುಕತೆ ತೋರಿಸಿರುವುದು, ಇತ್ತೀಚೆಗಷ್ಟೇ ಚೀನಾ ಅಧ್ಯಕ್ಷರ ಜೊತೆ ಅವರು ಮಾತುಕತೆಯಾಡಿರುವುದು ಹಾಗೂ “ದುರದೃಷ್ಟಕರ ಇತಿಹಾಸ ಮರಳದಂತೆ ನೋಡಿಕೊಳ್ಳೋಣ’ ಎಂದು ದಕ್ಷಿಣ ಕೊರಿಯಾದೊಂದಿಗೆ ಶಪಥ ಮಾಡಿರುವುದು ಇದಕ್ಕೆೆ ಕೆಲವು ಉದಾಹರಣೆ. 

ಈಗ ಎದುರಾಗುವ ಪ್ರಶ್ನೆಯೆಂದರೆ, ಕೆಲ ತಿಂಗಳುಗಳ ಹಿಂದಷ್ಟೇ ಅಮೆರಿಕಕ್ಕೆ ಅಣ್ವಸ್ತ್ರ ಧಮಕಿ ಹಾಕುತ್ತಿದ್ದ ಕಿಮ್‌ ಜಾಂಗ್‌ ಏಕಾಏಕಿ ತಮ್ಮ ಧಾಟಿ ಬದಲಿಸಿರುವುದೇಕೆ? ಇದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿ, ಉತ್ತರ ಕೊರಿಯನ್ನರು ಹೆಚ್ಚುತ್ತಿರುವ ಬಡತನ, ನಿರುದ್ಯೋಗ ಪ್ರಮಾಣದಿಂದಾಗಿ ರೋಸಿಹೋಗ ಲಾರಂಭಿಸಿದ್ದಾರೆ. ಪ್ರತಿಯೊಂದು ಸಮಸ್ಯೆಗೂ ಅಮೆರಿಕ-ದಕ್ಷಿಣ ಕೊರಿಯಾದತ್ತ ಇಷ್ಟು ವರ್ಷ ಬೆರಳು ತೋರಿಸುತ್ತಾ ಬಂದಿದ್ದ ಕಿಮ್‌, ಈಗ ಮತ್ತೆ ಯುದ್ಧ ಭೀತಿಯ ಕಥೆ ಹೊಡೆದು ಜನರ ಗಮನವನ್ನು ಬೇರೆಡೆ ಸೆಳೆಯಲು ಸಾಧ್ಯವಿಲ್ಲ. ಅವರು ಎಷ್ಟೇ ಹೇಳಿದರೂ ನಿಧಾನಕ್ಕೆ ಉತ್ತರ ಕೊರಿಯನ್ನರಿಗೆ ತಮ್ಮ ದೇಶದ ನಿಜ ಪರಿಸ್ಥಿತಿ ಅರಿವಾಗತೊಡಗಿದೆ. ಹೀಗಾಗಿ ದೇಶ‌ವನ್ನು ಸಮೃದ್ಧಿಯತ್ತ ಕೊಂಡೊಯ್ಯುವುದೇ ಕಿಮ್‌ ಮುಂದೆ ಇರುವ ಸುರಕ್ಷಿತ ಮಾರ್ಗ. ಹೀಗೆ ದೇಶವನ್ನು ಆಧುನಿಕಗೊಳಿಸಲು ಅವರಿಗೆ ಅಂತಾರಾಷ್ಟ್ರೀಯ ನೆರವು ಅತ್ಯಗತ್ಯ. ಜಾಗತಿಕ ಬಂಡವಾಳ ಮತ್ತು ಮಾರುಕಟ್ಟೆಗಳಿಗೆ ಸಂಪರ್ಕ ಸಿಗಬೇಕು. ಆದರೆ ಅವರ ಹುಚ್ಚಾಟಗಳಿಂದಾಗಿ ವಿಶ್ವಸಂಸ್ಥೆ ಆ ನಾಡಿನ ಮೇಲಿನ ಹಣಕಾಸು ಸೇರಿದಂತೆ ಇನ್ನಿತರ ನೆರವಿಗೆ ಕಡಿವಾಣ ಹಾಕಿಬಿಟ್ಟಿದೆ. ಚೀನಾದ ನೆರವಿಲ್ಲದಿದ್ದರೆ ಇನ್ನಷ್ಟು ತೊಂದರೆಗೆ ಈಡಾಗಿರುತ್ತಿತ್ತು ಉತ್ತರ ಕೊರಿಯಾ. ಈಗ ಚೀನಾ ಕೂಡ ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಮಣಿದು ಉತ್ತರ ಕೊರಿಯಾಕ್ಕೆ ಎಚ್ಚರಿಕೆ ಕೊಡುತ್ತಿದೆ. ಸದ್ಯಕ್ಕಂತೂ ಅದು ಎಲ್ಲರನ್ನೂ ಎದುರುಹಾಕಿಕೊಂಡು ಕಿಮ್‌ರ ಬೆನ್ನಿಗೆ ನಿಲ್ಲುವ ಸಾಧ್ಯತೆ ಇಲ್ಲ. ಇವೆಲ್ಲ ಸಂಗತಿಗಳೂ ಉತ್ತರ ಕೊರಿಯಾವನ್ನು ಅನಿವಾರ್ಯವಾಗಿ ಬದಲಾವಣೆಯ ಬಾಗಿಲಿಗೆ ತಂದು ನಿಲ್ಲಿಸಿವೆ ಎನ್ನಬಹುದು. 

ಆದರೆ, ಒಮ್ಮೆ ಅಂತಾರಾಷ್ಟ್ರೀಯ ನೆರವಿನ ಬಾಗಿಲು ತೆರೆಯಿತೋ ಕಿಮ್‌ ಜಾಂಗ್‌ ಉನ್‌ ಇದೇ ಉದಾತ್ತ ಗುಣ ತೋರಿಸುತ್ತಾರೆ ಎನ್ನುವಂತಿಲ್ಲ. ಕಿಮ್‌ ಜಾಂಗ್‌ ತಂದೆ ಅಧಿಕಾರದಲ್ಲಿದ್ದಾಗ, ಅಂದರೆ 2000 ಮತ್ತು 2007ನೇ ಇಸವಿಯಲ್ಲೂ ಎರಡೂ ರಾಷ್ಟ್ರಗಳ ನಾಯಕರ ನಡುವೆ ಇಂಥ ಸಭೆ ನಡೆದವಾದರೂ, ಉತ್ತರ ಕೊರಿಯಾದ ಕಲಹ ಬುದ್ಧಿ ಮಾತ್ರ ನಿಲ್ಲಲಿಲ್ಲ. ಈಗಲೂ ಹಾಗೆಯೇ   ಆಗಬಹುದು. ಸರ್ವಾಧಿಕಾರಿಯೊಬ್ಬನಲ್ಲಿ ಸೌಜನ್ಯ ಕಾಣಿಸಿತೆಂದರೆ ಅದನ್ನು ಬದಲಾವಣೆ ಎನ್ನಲಾಗದು, ಅದು ಆ ಕ್ಷಣದ ಅನಿವಾರ್ಯ ನಾಟಕವೂ ಆಗಿರಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next