Advertisement

ಖಾಸಗಿ ಬಸ್‌ ಸೇವೆಗೆ ಸಾಧಾರಣ ಸ್ಪಂದನೆ

12:23 AM Jun 02, 2020 | Sriram |

ಮಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆ ಯಲ್ಲಿ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್‌ಗಳ ಓಡಾಟ ಸೋಮವಾರದಿಂದ ಆರಂಭಗೊಂಡಿದ್ದು, ಮೊದಲ ದಿನ ಪ್ರಯಾಣಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Advertisement

ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದ ವರಿಗೆ, ಮುಖ್ಯವಾಗಿ ಉದ್ಯೋಗಸ್ಥರಿಗೆ ಅನುಕೂಲವಾಯಿತು. ಆದರೆ ಬೆಳಗ್ಗೆ ಮತ್ತು ಸಂಜೆಯ ಹೊತ್ತು ಹೊರತು ಪಡಿಸಿದರೆ ಉಳಿದ ಸಮಯದಲ್ಲಿ ಹೆಚ್ಚಿನ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಮಂಗಳೂರು-ಪುತ್ತೂರು, ಮಂಗಳೂರು- ಮೂಡು ಬಿದಿರೆ, ಮಂಗಳೂರು-ಉಡುಪಿ ಸಹಿತ ವಿವಿಧೆಡೆ ಸುಮಾರು 75 ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳು, ಮಂಗಳೂರು ನಗರ ವ್ಯಾಪ್ತಿಯಲ್ಲಿ 115 ಸಿಟಿ ಬಸ್‌ಗಳು, ಜಿಲ್ಲೆಯ ವಿವಿಧ ಮಾರ್ಗಗಳಲ್ಲಿ 25 ಕಾಂಟ್ರಾಕ್ಟ್ ಕ್ಯಾರೇಜ್‌ ಖಾಸಗಿ ಬಸ್‌ಗಳು ಓಡಾಟ ನಡೆಸಿದವು.

ಮಾರ್ಗಸೂಚಿ ಪಾಲನೆ
ಸರಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲಾಗಿತ್ತು. ಬಸ್‌ಗಳನ್ನು ಸ್ಯಾನಿಟೈಸೇಶನ್‌ ಮಾಡಿದ ಅನಂತರ ಸಂಚಾರ ಆರಂಭಿಸಲಾಗಿತ್ತು. ಬಸ್‌ನೊಳಗೆ ಪ್ರಯಾಣಿಕರಿಗಾಗಿ ಸ್ಯಾನಿಟೈಸರ್‌ ಇಡಲಾಗಿದೆ. ಕೆಲವು ಪ್ರಯಾಣಿಕರು ಅದನ್ನು ತಾವಾಗಿಯೇ ಕೈಗಳಿಗೆ ಹಚ್ಚಿಕೊಂಡರು. ಕೆಲವು ಬಸ್‌ಗಳಲ್ಲಿ ನಿರ್ವಾಹಕರೇ ಪ್ರಯಾಣಿಕರ ಕೈಗೆ ಸ್ಪ್ರೆ ಮಾಡಿದರು. ಬಸ್‌ನ ಒಟ್ಟು ಸೀಟುಗಳ ಪೈಕಿ ಶೇ.50ರಷ್ಟು ಅಂದರೆ 30-35 ಮಂದಿ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಯಿತು. ಮಾಸ್ಕ್ ಬಳಕೆ ಮಾಡದೆ ಬಸ್‌ ಹತ್ತಲು ಅವಕಾಶವಿರಲಿಲ್ಲ.

ಪ್ರಯಾಣಿಕರಿಗೆ ಅನುಕೂಲ
“ನನ್ನಂತ ನೂರಾರು ಮಂದಿ ಸಿಟಿ ಬಸ್‌ಗಳನ್ನೇ ಅವಲಂಬಿಸಿಕೊಂಡಿ ದ್ದಾರೆ. ಬಸ್‌ ಆರಂಭಿಸಿದ್ದರಿಂದ ಅನುಕೂಲವಾಗಿದೆ. ಇಬ್ಬರು ಕುಳಿತುಕೊಳ್ಳುವ ಸೀಟಿನಲ್ಲಿ ಒಬ್ಬರೇ ಪ್ರಯಾಣ, ಮಾಸ್ಕ್ ಧರಿಸುವುದು ಕಡ್ಡಾಯವಾಗಿ ಮಾಡಿದ್ದ ರಿಂದ ಕೊರೊನಾ ಭೀತಿ ದೂರವಾಗಿದೆ. ಪ್ರಯಾಣಿಕರು ಸ್ವಯಂ ಆಗಿ ಎಚ್ಚರಿಕೆ ವಹಿಸಿಕೊಂಡರೆ ಯಾವ ಪ್ರಯಾಣಿಕರಿಗೂ ಅಪಾಯವಿಲ್ಲ’ ಎಂದು ಶೇಡಿಗುರಿಯ ಮಹಿಳೆಯೋರ್ವರು ಪ್ರತಿಕ್ರಿಯಿಸಿದರು.

ತೆರಿಗೆ ಪ್ರಕ್ರಿಯೆ ವಿಳಂಬದಿಂದ ಬಸ್‌ ಸಂಖ್ಯೆ ಕಡಿತ
ಸೋಮವಾರದಿಂದ ಸುಮಾರು 150 ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳನ್ನು ಓಡಿಸಲು ನಿರ್ಧರಿಸಲಾಗಿತ್ತು. ಆದರೆ ಕೆಲವು ಬಸ್‌ಗಳು ಆರ್‌ಟಿಒಗೆ ಪಾವತಿಸಬೇಕಾಗಿದ್ದ ತೆರಿಗೆ ಪಾವತಿ ಪ್ರಕ್ರಿಯೆ ಪೂರ್ಣವಾಗದ ಹಿನ್ನೆಲೆಯಲ್ಲಿ ಅವು ರಸ್ತೆಗೆ ಇಳಿಯಲಿಲ್ಲ. ಮಂಗಳವಾರದಿಂದ 150 ಬಸ್‌ಗಳು ಓಡಾಟ ನಡೆಸಲಿವೆ ಎಂದು ಖಾಸಗಿ ಬಸ್‌ ಮಾಲಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ತಿಳಿಸಿದ್ದಾರೆ. ಇದೇ ಕಾರಣದಿಂದ 150ರ ಬದಲು 115 ಸಿಟಿ ಬಸ್‌ಗಳು ಮಾತ್ರ ಸೋಮವಾರ ರಸ್ತೆಗಿಳಿದಿವೆ ಎಂದು ಸಿಟಿಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರು ತಿಳಿಸಿದ್ದಾರೆ.

Advertisement

ಮಂಗಳೂರು-ಉಡುಪಿ ಬಸ್‌ಗಳು ಭರ್ತಿ
ಸ್ಟೇಟ್‌ಬ್ಯಾಂಕ್‌ನಿಂದ ಉಡುಪಿ – ಮಣಿಪಾಲ ಕಡೆಗೆ ಹೋಗುವ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳ ಪೈಕಿ ಹೆಚ್ಚಿನ ಬಸ್‌ಗಳು ಭರ್ತಿಯಾಗಿದ್ದವು. “ನಮ್ಮ ಬಸ್‌ನಲ್ಲಿಯೂ ಎಲ್ಲ ಪ್ರಯಾಣಿಕರಿಗೆ ಸ್ಯಾನಿಟೈಸರ್‌ ಒದಗಿಸಲಾಗಿದೆ. ಬಸ್‌ನಲ್ಲಿ 30ರಿಂದ 35 ಮಂದಿ ಪ್ರಯಾಣಿಕರನ್ನು ಮಾತ್ರ ಕರೆದುಕೊಂಡು ಹೋಗುತ್ತೇವೆ. ಜನ ಎಷ್ಟಿದ್ದಾರೆ ಎಂಬುದನ್ನು ಉಡುಪಿ-ದ.ಕ. ಜಿಲ್ಲೆಗಳ ಗಡಿ ಪ್ರದೇಶವಾಗಿರುವ ಹೆಜಮಾಡಿಯ ಚೆಕ್‌ಪೋಸ್ಟ್‌ ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಾರೆ. ಈ ಹಿಂದೆ ಸಾಮಾನ್ಯ ದಿನಗಳಲ್ಲಿ ಪ್ರತಿ 2 ನಿಮಿಷಕ್ಕೊಮ್ಮೆ ಖಾಸಗಿ ಎಕ್ಸ್‌ ಪ್ರಸ್‌ ಬಸ್‌ ಓಡಾಟ ನಡೆಸುತ್ತಿತ್ತು. ಆದರೆ ಇಂದು ಅರ್ಧ ಗಂಟೆಗೊಂದು ಸಂಚರಿಸುತ್ತಿದೆ. ಹಾಗಾಗಿ ಪ್ರಯಾಣಿಕರ ಸಂಖ್ಯೆತುಂಬಾ ಕಡಿಮೆಯೇನಿಲ್ಲ’ ಎಂದು ಎಕ್ಸ್‌ಪ್ರೆಸ್‌ ಬಸ್ಸಿನ ಕಂಡಕ್ಟರ್‌ ಓರ್ವರು ಹೇಳಿದರು.

ಬಸ್‌ಗಳ ಸಂಖ್ಯೆ ಕಡಿಮೆಯಾಗದು’
“ಈ ಮೊದಲೇ ತಿಳಿಸಿದಂತೆ ಜಿಲ್ಲೆಯ ವಿವಿಧ ಭಾಗಗಳಿಗೆ ಸೋಮವಾರ 25 ಕಾಂಟ್ರಾಕ್ಟ್ ಕ್ಯಾರೇಜ್‌ ಖಾಸಗಿ ಬಸ್‌ಗಳು ಓಡಾಟ ನಡೆಸಿವೆ. ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆ ಇತ್ತು. ಆದರೂ ಬಸ್‌ಗಳ ಓಡಾಟವನ್ನು ಒಂದು ತಿಂಗಳವರೆಗೂ ಕಡಿಮೆ ಮಾಡುವುದಿಲ್ಲ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದರೆ ಅದಕ್ಕೆ ಪೂರಕವಾಗಿ ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡುತ್ತೇವೆ’ ಎಂದು ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ಗಳ ಮಾಲಕರ ಸಂಘದ ಅಧ್ಯಕ್ಷ ಜಯರಾಮ ಶೇಖ ತಿಳಿಸಿದ್ದಾರೆ.

“ಇನ್ನೂ ಒಂದು ವಾರ ಬೇಕು’
ಬಸ್‌ಗಳಲ್ಲಿ 30 ಮಂದಿಗೆ ಮಾತ್ರ ಪ್ರಯಾಣಕ್ಕೆ ಅವಕಾಶವಿದೆ. ಆದರೆ ನಮಗೆ ಇಂದಿನ ಮೊದಲ ಟ್ರಿಪ್‌ನಲ್ಲಿ ಅಷ್ಟು ಜನವೂ ಆಗಿಲ್ಲ. ಜನ ಬಸ್‌ನಲ್ಲಿ ತಿರುಗಾಡಬೇಕಾದರೆ ಇನ್ನೂ ಒಂದು ವಾರಬೇಕಾಗಬಹುದು’ ಎಂದು ಸ್ಟೇಟ್‌ಬ್ಯಾಂಕ್‌ನಿಂದ ಪುತ್ತೂರಿಗೆ ಹೋಗಿ ವಾಪಸಾದ ಬಸ್‌ನ ಕಂಡಕ್ಟರ್‌ ಪ್ರತಿಕ್ರಿಯಿಸಿದರು. “ನನ್ನ ಟ್ರಿಪ್‌ನಲ್ಲಿ 500 ರೂ. ಕೂಡ ಕಲೆಕ್ಷನ್‌ ಆಗಿಲ್ಲ. ಜನವೇ ಇಲ್ಲ’ ಎಂದು ಜ್ಯೋತಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಸರ್ವೀಸ್‌ ಬಸ್‌ನ ನಿರ್ವಾಹಕರೋರ್ವರು ಹೇಳಿದರು.

ಬಿ.ಸಿ.ರೋಡು: ಬೆರಳೆಣಿಕೆಯ ಬಸ್ಸು ಸಂಚಾರ
ಬಂಟ್ವಾಳ: ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಕೆಲವೊಂದು ಖಾಸಗಿ ಬಸ್‌ಗಳು ಸುಮಾರು 2 ತಿಂಗಳ ಬಳಿಕ ಸೋಮವಾರ ರಸ್ತೆಗಿಳಿದಿದ್ದು, ಬಿ.ಸಿ.ರೋಡು ಮೂಲಕ ತೆರಳುವ ಕಾಂಟ್ರಾಕ್ಟ್ ಕ್ಯಾರೇಜ್‌ ಹಾಗೂ ಇತರ ಗ್ರಾಮೀಣ ರಸ್ತೆಗಳಲ್ಲಿ ಖಾಸಗಿ ಬಸ್‌ ಸಂಚಾರ ನಡೆಸಿವೆ. ಎಲ್ಲÉ ಬಸ್‌ಗಳಿಗೂ ಸಂಚಾರಕ್ಕೆ ಅವಕಾಶವಿದ್ದರೂ, ಕೇವಲ ಬೆರಳೆಣಿಕೆಯ ಬಸ್‌ಗ‌ಳು ಮಾತ್ರ ರಸ್ತೆಗಿಳಿದಿದ್ದವು. ಬಸ್‌ಗಳಲ್ಲಿ ಬೆಳಗ್ಗೆ ಹಾಗೂ ಸಂಜೆಯ ಹೊತ್ತಿನಲ್ಲಿ ಪ್ರಯಾಣಿಕರು ಕಂಡುಬಂದರೆ, ಉಳಿದ ಅವಧಿಯಲ್ಲಿ ಖಾಲಿಯಾಗಿಯೇ ಓಡಾಟ ನಡೆಸುತ್ತಿದ್ದುದು ಕಂಡುಬಂತು.

ಪುತ್ತೂರಿನಲ್ಲೂ ಪ್ರಯಾಣಿಕರ ಕೊರತೆ
ಪುತ್ತೂರು: ಪುತ್ತೂರು ಕೇಂದ್ರೀಕರಿಸಿಯೂ ಖಾಸಗಿ ಬಸ್‌ಗಳು ಸೋಮ ವಾರ ತಮ್ಮ ಸೇವೆ ಆರಂಭಿಸಿದ್ದು, ಮೊದಲ ದಿನ ಜನರಿಂದ ಹೆಚ್ಚಿನ ಸ್ಪಂದನೆ ಸಿಗಲಿಲ್ಲ.

ಪುತ್ತೂರು ತಾಲೂಕಿನ ಬುಳೇರಿಕಟ್ಟೆ – ಪುಣಚ – ವಿಟ್ಲ ರಸ್ತೆಯಲ್ಲಿ ಒಂದು ಖಾಸಗಿ ಬಸ್ಸು ಹಾಗೂ ಕಬಕ -ಪುತ್ತೂರು -ವಿಟ್ಲ ನಡುವೆ ಒಂದು ಖಾಸಗಿ ಬಸ್ಸುಗಳು ಸಂಚರಿಸಿವೆ.

ಪುತ್ತೂರು – ಮಂಗಳೂರು ನಡುವೆಯೂ ಬೆಳಗ್ಗೆ 6 ಗಂಟೆಯಿಂದ ಖಾಸಗಿ ಬಸ್‌ಗಳು ಸಂಚಾರ ನಡೆಸಿವೆ. ಉಪ್ಪಿನಂಗಡಿ -ಗುರುವಾಯನಕೆರೆ – ಬೆಳ್ತಂಗಡಿ ಭಾಗದಲ್ಲಿಯೂ ಬೆರೆಳೆಣಿಕೆಯ ಬಸ್‌ ಓಡಾಟ ಆರಂಭಿಸಿವೆ. ಒಂದು ವಾರದ ಹಿಂದೆಯೇ ಸರಕಾರಿ ಬಸ್ಸುಗಳು ಓಡಾಟ ಆರಂಭಿಸಿದ್ದರೂ ಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿದಿಲ್ಲ. ಜಿಲ್ಲೆಯಲ್ಲಿ ಕೋವಿಡ್-19 ಅಬ್ಬರ ಇನ್ನೂ ಕಡಿಮೆಯಾಗದ ಹಿನ್ನೆಲೆ ಯಲ್ಲಿ ಜನತೆಗೆ ಓಡಾಟದ ಭಯ ಕಾಡುತ್ತಿದೆ. ಹಾಗಾಗಿ ಬಸ್‌ ಸಂಚಾರ ಆರಂಭಿಸಲಾಗಿದ್ದರೂ ಗ್ರಾಮೀಣ ಭಾಗದ ಜನತೆಯಿಂದ ಹೆಚ್ಚಿನ ಸ್ಪಂದನೆ ದೊರಕುತ್ತಿಲ್ಲ.

ಪುತ್ತೂರು -ಕುಂಜೂರುಪಂಜ -ಪಾಣಾಜೆ, ಪುತ್ತೂರು -ವಿಟ್ಲ, ಪುತ್ತೂರು -ಕಬಕ – ವಿಟ್ಲ, ಪುತ್ತೂರು -ರೆಂಜ -ಸುಳ್ಯಪದವು, ಪುತ್ತೂರು -ಈಶ್ವರಮಂಗಲ -ಪಲ್ಲತ್ತೂರು, ಉಪ್ಪಿನಂಗಡಿ -ಗುರುವಾಯನಕೆರೆ ಭಾಗದಲ್ಲಿ ಅತ್ಯಂತ ಹೆಚ್ಚು ಖಾಸಗಿ ಬಸ್‌ಗಳ ಓಡಾಟ ನಡೆಯುತ್ತದೆ.

ಇದರಲ್ಲಿ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಖಾಸಗಿ ಬಸ್‌ಗಳೇ ಜನತೆಗೆ ಅನಿವಾರ್ಯ. ಆದರೆ ಪುತ್ತೂರು-ಪಾಣಾಜೆಯಂತಹ ಕೆಲ ಗ್ರಾಮೀಣ ಭಾಗದ ರಸ್ತೆಗಳ ಖಾಸಗಿ ಬಸ್‌ಗಳ ಓಡಾಟಕ್ಕೆ ಖಾಸಗಿ ಮಾಲಕರು ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಖಾಸಗಿ ಹಾಗೂ ಸರಕಾರಿ ಬಸ್‌ಗಳ ಓಡಾಟಗಳೇ ಇಲ್ಲದ ಹಲವಾರು ಭಾಗಗಳಲ್ಲಿ ಖಾಸಗಿ ಜೀಪ್‌, ಟ್ರಾಕ್ಸಿ, ಮ್ಯಾಕ್ಸಿಕ್ಯಾಬ್‌, ಮಿನಿಬಸ್‌ ಮುಂತಾದ ವಾಹನಗಳು ಇನ್ನೂ ಸಮರ್ಪಕವಾಗಿ ರಸ್ತೆಗಿಳಿದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next