Advertisement

ಸಾಧಾರಣ ಮಳೆ; ಕೃಷಿ ಸಿದ್ಧತೆಗೆ ಕಳೆ

09:32 PM May 13, 2019 | Lakshmi GovindaRaj |

ಕೆ.ಆರ್‌.ನಗರ: ಕಳೆದ ಸಾಲಿಗಿಂತ ಈ ಬಾರಿ ವಾಡಿಕೆ ಮಳೆ ಕಡಿಮೆಯಾಗಿದ್ದರೂ ತಾಲೂಕಿನಾದ್ಯಂತ ರೈತರು ತಂಬಾಕು ಸಸಿ ನಾಟಿ ಮಾಡಲು ಜಮೀನುಗಳನ್ನು ಉಳುಮೆ ಮಾಡಿ ಹದ ಮಾಡಿಕೊಳ್ಳುತ್ತಿದ್ದಾರೆ.

Advertisement

ಹಿಂದಿನ ಸಾಲಿನಲ್ಲಿ ಏಪ್ರಿಲ್‌ ತಿಂಗಳ ಮಧ್ಯಭಾಗದವರೆಗೆ 69 ಮಿ.ಮೀ. ಮಳೆಯಾಗಿತ್ತು. ಈ ಸಾರಿ 45 ಮಿ.ಮೀ. ಮಳೆಯಾಗಿದೆ. ಮತ್ತೆ ಸಕಾಲದಲ್ಲಿ ಮಳೆಯ ನಿರೀಕ್ಷೆಯಲ್ಲಿರುವ ರೈತರು ಪೂರ್ವ ಸಿದ್ಧತೆಯಲ್ಲಿದ್ದಾರೆ.

ಜತೆಗೆ ತಂಬಾಕು ನಾಟಿ ಮಾಡುವ ರೈತರು ಸಸಿ ಮಡಿ ಮಾಡಿಕೊಂಡಿದ್ದು, ಉತ್ತಮ ಮಳೆಯಾದ ಕೂಡಲೇ ನಾಟಿ ಮಾಡಲು ಸಿದ್ಧವಾಗಿದ್ದಾರೆ. ಅಲ್ಲದೇ, 2 ಬಾರಿ ಬಿದ್ದಿರುವ ಸಾಧಾರಣ ಮಳೆಯಿಂದ ರೈತ ಸಮೂಹ ಉಳುಮೆಯಲ್ಲಿ ನಿರತವಾಗಿದೆ.

ಕೆ.ಆರ್‌.ನಗರ ತಾಲೂಕಿನಲ್ಲಿ 26.5 ಸಾವಿರ ಹೆಕ್ಟೇರ್‌ ತರಿ ಭೂಮಿ, 14 ಸಾವಿರ ಹೆಕ್ಟೇರ್‌ ಖುಷ್ಕಿ ಭೂಮಿ ಮತ್ತು 4 ಸಾವಿರ ಹೆಕ್ಟೇರ್‌ ತೋಟದ ಭೂಮಿ ಇದ್ದು, ಇದರ ಜತೆಗೆ ಒಂದು ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿದೆ.

ಕೃಷಿ ಇಲಾಖೆಯ ವತಿಯಿಂದ ಈಗಾಗಲೇ ರೈತರಿಗೆ ರಿಯಾಯ್ತಿ ದರದಲ್ಲಿ ಜೋಳ, ಅಲಸಂದೆ, ಉದ್ದು, ಸೆಣಬು, ಹುರುಳಿ ಸೇರಿದಂತೆ ಇತರ ಬಿತ್ತನೆ ಬೀಜಗಳನ್ನು ತರಿಸಲಾಗುತ್ತಿದೆ. ಮುಂಗಾರು ಹಂಗಾಮಿಗೆ ಅಗತ್ಯವಿರುವ ಭತ್ತದ ಬೀಜ ನೀಡಲು ಪೂರಕ ಆದೇಶ ನೀಡಿ ಅಗತ್ಯ ಕ್ರಮವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.

Advertisement

ಕುಡಿಯುವ ನೀರಿನ ಲಭ್ಯತೆ: ತಾಲೂಕಿನ 220 ಗ್ರಾಮಗಳ ಪೈಕಿ 152 ಗ್ರಾಮಗಳಿಗೆ ಕಾವೇರಿ ನದಿಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 83 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ಸರಬರಾಜು ಮಾಡಲಾಗುತ್ತಿದೆ.

60 ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಕಾಮಗಾರಿಗೆ ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳಿದ 8 ಗ್ರಾಮಗಳಿಗೆ ಹುಣಸೂರು ಪಟ್ಟಣಕ್ಕೆ ಕಾವೇರಿ ನದಿಯಿಂದ ನೀರು ಸರಬರಾಜು ಮಾಡುವ ಮೂಲದಿಂದ ನೀರು ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ತಾಲೂಕಿನಾದ್ಯಂತ 34 ಗ್ರಾಪಂಗಳಿದ್ದು ಕಾವೇರಿ ನದಿಯಿಂದ ನೀರು ಸರಬರಾಜಾಗದ ಗ್ರಾಮಗಳಿಗೆ ಕೊಳವೆ ಬಾವಿಯಿಂದ ಓವರ್‌ ಹೆಡ್‌ ಟ್ಯಾಂಕ್‌ಗಳ ಮೂಲಕ ನೀರು ನೀಡುತ್ತಿದ್ದು, ಈವರೆಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವಂತಹ ಪರಿಸ್ಥಿತಿ ಎದುರಾಗಿಲ್ಲ.

ಪಟ್ಟಣಕ್ಕೆ ಸಮಸ್ಯೆ: ಕೆ.ಆರ್‌.ನಗರ ಪಟ್ಟಣದ ಪುರಸಭೆ ವ್ಯಾಪ್ತಿಯ 21 ವಾರ್ಡುಗಳಿಗೂ ಕಾವೇರಿ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. 2 ದಿನಗಳಿಗೊಮ್ಮೆ ನೀರು ಬರುವುದರಿಂದ ನಾಗರಿಕರಿಗೆ ತೊಂದರೆಯಾಗಿದೆ. ಜತೆಗೆ ಕೆಲವು ವಾರ್ಡುಗಳಿಗೆ ಶುದ್ಧೀಕರಿಸದೆ ನೀರನ್ನು ಬಿಡುತ್ತಿರುವುದರಿಂದ ಮಣ್ಣು ಮಿಶ್ರಿತ ನೀರು ಬರುತ್ತದೆ ಎಂಬುದು ಬಹುತೇಕರ ದೂರು.

ತಾಲೂಕಿನ ಮಧ್ಯಬಾಗದಲ್ಲಿ ಕಾವೇರಿ ನದಿ ಹರಿದು ಹೋಗಿರುವುದರಿಂದ ಗ್ರಾಮಾಂತರ ಪ್ರದೇಶದ ಜನರಿಗೆ ನೀರಿನ ಸಮಸ್ಯೆ ಅಷ್ಟಾಗಿ ಭಾದಿಸುತ್ತಿಲ್ಲ. ಆದರೆ ಕೆಲವು ಗ್ರಾಪಂಗಳ ಅಸಮರ್ಪಕ ನಿರ್ವಹಣೆಯಿಂದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಈ ಬಗ್ಗೆ ತಾಲೂಕು ಆಡಳಿತ ಮತ್ತು ಚುನಾಯಿತ ಜನಪ್ರತಿನಿಧಿಗಳು ಗಮನಹರಿಸಬೇಕಿದೆ.

ಬೇಸಿಗೆ ವೇಳೆ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಂದ ಕುಡಿಯುವ ನೀರಿನ ಸಂಬಂಧ ಯಾವುದೇ ದೂರುಗಳು ಕೇಳಿ ಬಂದರೂ ತಕ್ಷಣ ಸ್ಪಂದಿಸುವಂತೆ ತಾಲೂಕು ಆಡಳಿತದ ವತಿಯಿಂದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
-ಎಂ.ಮಂಜುಳಾ, ತಹಶೀಲ್ದಾರ್‌

ಕೆ.ಆರ್‌.ನಗರ ತಾಲೂಕಿನ 34 ಗ್ರಾಪಂ ಪಿಡಿಒ, ಕಾರ್ಯದರ್ಶಿಗಳು ಮತ್ತು ನೀರುಗಂಟಿಗಳ ಸಭೆ ನಡೆಸಿ ಬೀಸಿಗೆ ಸಂದರ್ಭದಲ್ಲಿ ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ನಿರ್ದೇಶನ ನೀಡಲಾಗಿದೆ. ಈ ಸಂಬಂಧ ಯಾವುದೇ ದೂರುಗಳಿದ್ದರೂ ತಾಪಂ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಬಹುದು.
-ಲಕ್ಷ್ಮೀಮೋಹನ್‌, ಇಒ

ಕೆ.ಆರ್‌.ನಗರ ಪಟ್ಟಣದ 21 ವಾರ್ಡುಗಳಿಗೂ ಕಾವೇರಿ ನದಿುಂದ ದಿನ ಬಿಟ್ಟು ದಿನ ನೀರು ಸರಬರಾಜಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾದರೆ ಅದನ್ನು ನಿಭಾಯಿಸಲು ಪುರಸಭೆ ಸನ್ನದ್ಧವಾಗಿದೆ. ಜತೆಗೆ ಕಾವೇರಿ ನದಿಗೆ ಜಾಕ್‌ವೆಲ್‌ ಬಳಿ ಅಡ್ಡಲಾಗಿ ಕಟ್ಟೆ ಕಟ್ಟಿ ನೀರು ಸಂಗ್ರಹಕ್ಕೆ ತೀರ್ಮಾನಿಸಲಾಗಿದೆ.
-ಕೆ.ಶಿವಣ್ಣ, ಪುರಭೆ ಮುಖ್ಯಾಧಿಕಾರಿ

ಈಗ ಬಿದ್ದಿರುವ ಎರಡು ಮೂರು ಬಾರಿಯ ಮಳೆಯಿಂದ ಭೂಮಿ ಹದ ಮಾಡಿಕೊಳ್ಳಲಾಗಿದೆ. ಮತ್ತೆ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದೇವೆ. ಹೀಗಾಗಿ ಕೃಷಿ ಇಲಾಖೆ ಸೂಕ್ತ ಸಲಹೆ ನೀಡುವುದರೊಂದಿಗೆ ಸರ್ಕಾರದ ಸವಲತ್ತುಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು.
-ಜಿ.ಕೆ.ಸ್ವಾಮಿ, ಗೇರದಡ ಗ್ರಾಮದ ರೈತ

* ಜಿ.ಕೆ.ನಾಗಣ್ಣಗೇರದಡ

Advertisement

Udayavani is now on Telegram. Click here to join our channel and stay updated with the latest news.

Next