ಶ್ರೀನಗರ : ರಾಜ್ಯದಲ್ಲಿ ಪಂಚಾಯತ್ ಚುನಾವಣೆ ನಡೆಸಲಾಗುವ ರೀತಿಯನ್ನು ಪ್ರತಿಭಟಿಸಿ ಪ್ರತ್ಯೇಕತಾವಾದಿಗಳು ಬಂದ್ ಕರೆ ನೀಡಿರುವ ಕಾರಣ ಕಾಶ್ಮೀರ ಕಣಿವೆಯಲ್ಲಿ ಸಾಮಾನ್ಯ ಜನಜೀವನ ತೀವ್ರವಾಗಿ ಬಾಧಿತವಾಯಿತು.
ಜಮ್ಮು ಕಾಶ್ಮೀರದ ಬೇಸಗೆ ಕಾಲದ ರಾಜಧಾನಿಯಾಗಿರುವ ಶ್ರೀನಗರದಲ್ಲಿ ಇಂದು ಶನಿವಾರ ಹೆಚ್ಚಿನೆಲ್ಲ ಅಂಗಡಿ, ಮುಂಗಟ್ಟುಗಳು, ಪೆಟ್ರೋಲ್ ಬಂಕ್‌ಗಳು ಮತ್ತು ಇತರ ಉದ್ಯಮ ಸಂಸ್ಥೆಗಳು ಮುಚ್ಚಿದ್ದವು.
ಸಾರ್ವಜನಿಕ ಸಾರಿಗೆ ವಾಹನಗಳು ಇಂದು ರಸ್ತೆಗಿಳಿಯಲಿಲ್ಲ; ಆದರೆ ಖಾಸಗಿ ಕಾರುಗಳು, ಕ್ಯಾಬ್ ಗಳು, ಆಟೋ ರಿಕ್ಷಾಗಳು ನಗರದ ಹಲವು ಭಾಗಗಳಲ್ಲಿ ಎಂದಿನಂತೆ ಓಡಾಡುತ್ತಿದ್ದರು.
ಇದೇ ರೀತಿಯಲ್ಲಿ ಕಾಶ್ಮೀರ ಕಣಿವೆಯ ಇತರ ಜಿಲ್ಲೆಗಳಲ್ಲಿ ಕೂಡ ಬಂದ್ ನಡೆದಿರುವ ವರದಿಗಳು ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಣಿವೆಯ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ, ಆಯಕಟ್ಟಿನ ಪ್ರದೇಶಗಳಲ್ಲಿ ಭಾರೀ ಸಂಖ್ಯೆಯಲ್ಲಿಂದು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಪಂಚಾಯತ್ ಚುನಾವಣಾ ಪ್ರಹಸನದ ವಿರುದ್ಧ ಬಂದ್ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಕರೆ ನೀಡುವ ಬ್ಯಾನರ್‌ಗಳು ಜಂಟಿ ಪ್ರತಿರೋಧ ನಾಯಕತ್ವದಡಿ ವಿವಿಧೆಡೆ ಕಂಡು ಬಂದಿವೆ. ಅಂತೆಯೇ ಪ್ರತ್ಯೇಕತವಾದಿ ನಾಯಕರು ಬಂದ್ ಮುಷ್ಕರಕ್ಕೆ ದನಿ ಗೂಡಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲೀಗ ಎಂಟು ಹಂತಗಳ ಪಂಚಾಯತ್ ಚುನಾವಣೆ ನಡೆಯುತ್ತಿದೆ. ಇದನ್ನು ನಿರಸನಗೊಳಿಸುವುದಕ್ಕಾಗಿ ಪ್ರತ್ಯೇಕತಾವಾದಿ ನಾಯಕರು ಸೈಯದ್ ಅಲಿ ಶಾ ಗೀಲಾನಿ, ಮೀರ್ ವೇಜ್ ಉಮರ್ ಫಾರೂಕ್ ಮತ್ತು ಮೊಹಮ್ಮದ್ ಯಾಸಿನ್ ಮಲಿಕ್ ಜನರಿಗೆ ಬಂದ್ ಮುಷ್ಕರದ ಕರೆ ನೀಡಿದ್ದಾರೆ.