ನವದೆಹಲಿ: ಸಬ್ಸಿಡಿ ರಹಿತ ಅಡುಗೆ ಅನಿಲದ ಪ್ರತಿ ಸಿಲಿಂಡರ್ ದರವನ್ನು 65ರೂಪಾಯಿಯಷ್ಟು ನಗರ ಪ್ರದೇಶಗಳಲ್ಲಿ ಕಡಿತಗೊಳಿಸಿರುವುದಾಗಿ ಬುಧವಾರ ತಿಳಿಸಿದೆ. ಅಡುಗೆ ಅನಿಲದ ದರವನ್ನು ಸತತ ಎರಡನೇ ಬಾರಿಗೆ ಇಳಿಕೆ ಮಾಡಿದಂತಾಗಿದೆ.
ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಪ್ರತಿ ಸಿಲಿಂಡರ್ (14.2ಕೆಜಿ) ಬೆಲೆಯನ್ನು 61.5 ರೂಪಾಯಿಯಂತೆ ಹಾಗೂ ದೆಹಲಿ ಮತ್ತು ಮುಂಬೈನಲ್ಲಿ ಪ್ರತಿ ಸಿಲಿಂಡರ್ ಗೆ 62 ರೂಪಾಯಿ ಕಡಿತಗೊಳಿಸಿರುವುದಾಗಿ ವರದಿ ತಿಳಿಸಿದೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪ್ರಕಾರ, ದೆಹಲಿ ನಗರದಲ್ಲಿ ಇರುವ ಇಂಡಿಯನ್ ಆಯಿಲ್ ಗ್ರಾಹಕರು ಸಬ್ಸಿಡಿ ರಹಿತ ಪ್ರತಿ ಸಿಲಿಂಡರ್ ಗೆ 744 ರೂಪಾಯಿ ಹಾಗೂ ಮುಂಬೈನಲ್ಲಿರುವ ಗ್ರಾಹಕರು 714 ರೂಪಾಯಿ ಪಾವತಿಸುವಂತೆ ಹೇಳಿದೆ.
ಒಂದು ವರ್ಷಕ್ಕೆ ಸರ್ಕಾರ ಒಂದು ಮನೆಗೆ 12 ಸಿಲಿಂಡರ್ ಗಳನ್ನು(14.2ಕಿಲೋ ಗ್ರಾಂ) ಸಬ್ಸಿಡಿ ಸಹಿತವಾಗಿ ನೀಡಲಿದೆ. ಹೆಚ್ಚುವರಿಯಾಗಿ ಸಿಲಿಂಡರ್ ಬೇಕಿದ್ದರೆ ಗ್ರಾಹಕರು ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಬೇಕು. ಗ್ರಾಹಕರಿಗೆ ನೀಡುವ ಸಬ್ಸಿಡಿ ಪ್ರತಿ ತಿಂಗಳು ವ್ಯತ್ಯಾಸವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.