ಅಥಣಿ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವಂತೆ ಒತ್ತಾಯಿಸಿ ಅಥಣಿ ತಾಲೂಕಿನ ದರೂರ ಕೃಷ್ಣಾ ನದಿ ದಡದ ಮೇಲೆ ರೈತ ಸಂಘಟನೆ ನಡೆಯುತ್ತಿರುವ ಅಹೋರಾತ್ರಿ ಧರಣಿ 4ನೇ ದಿನಕ್ಕೆ ಕಾಲಿರಿಸಿತು.
ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಅಥಣಿ ಶಾಸಕ ಮಹೇಶ ಕುಮಠಳ್ಳಿ ಬೆಂಬಲ ನೀಡಿ ಅವರು ಮಾತನಾಡಿ, ತಾಲೂಕಿನ ಅವರಖೋಡ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರೆಜ್ ನಿರ್ಮಾಣ ಮಾಡಿ ನೀರು ಸಂಗ್ರಹಿಸಿದಾಗ ಮಾತ್ರ ಅಥಣಿ ಮತಕ್ಷೇತ್ರದ ಜನ-ಜಾನುವಾರು ಹಾಗೂ ರೈತರ ಬವಣೆ ನೀಗಿಸಲು ಸಾಧ್ಯವಾಗುತ್ತದೆ ಎಂದರು.
ಪ್ರತಿ ವರ್ಷ ನೀರಿಗಾಗಿ ಹಾಹಾಕಾರ ಉಂಟಾಗಿ ಟ್ಯಾಂಕರ್ ಮೂಲಕ ನೀರನ್ನು ಒದಗಿತ್ತಾ ಬರಲಾಗುತ್ತಿದ್ದರೂ ಸಹ ಸಮರ್ಪಕ ನೀರಿನ ವ್ಯವಸ್ಥೆ ಆಗುತ್ತಿಲ್ಲ. ಆದ್ದರಿಂದ ಅವರಖೋಡ ಬಳಿ ಬ್ಯಾರೆಜ್ ನಿರ್ಮಾಣ ಮಾಡುವುದರಿಂದ ಅಥಣಿ ಪಟ್ಟಣದ 60 ಸಾವಿರ ಜನಸಂಖ್ಯೆ ಹಾಗೂ ತಾಲೂಕಿನ ಸುಮಾರು 35 ಗ್ರಾಮಗಳ ಜನ ವಸತಿಗಳಲ್ಲಿ ಸುಮಾರು 2 ಲಕ್ಷ ಜನರಿಗೆ ನೀರನ್ನು ಒದಗಿಸಬಹುದಾಗಿದೆ. ಸೋಮವಾರ ಬೆಳಗಾವಿಗೆ ಸಚಿವ ಡಿ.ಕೆ.ಶಿವಕುಮಾರ ಆಗಮಿಸಲಿದ್ದು, ಅವರ ಗಮನಕ್ಕು ತರುವುದಾಗಿ ತಿಳಿಸಿದರು.
ಈ ವೇಳೆ ರೈತ ಸಂಘದ ತಾಲೂಕಾಧ್ಯಕ್ಷ ಮಹಾದೇವ ಮಡಿವಾಳ ಮಾತನಾಡಿ, ಜಿಲ್ಲಾಧಿಕಾರಿಗಳು ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಂದು ಕೃಷ್ಣಾ ನದಿಗೆ ನೀರನ್ನು ಹರಿಸುವ ಕುರಿತು ನಿಖರ ಮಾಹಿತಿ ನೀಡುವವರೆಗೂ ಧರಣಿ ಸತ್ಯಾಗ್ರಹವನ್ನು ನಾವು ಹಿಂದಕ್ಕೆ ಪಡೆಯುವುದಿಲ್ಲ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸತೀಷ ಕುಲಕರ್ಣಿ, ವಿನಯ ಪಾಟೀಲ ಕುಮಾರ ಮಡಿವಾಳ, ಮಹಾದೇವ ಕುಚನೂರ, ಮೋದಿನ ಮೋಳೆ, ಮುರೇಘಪ್ಪ ಬೂರಾಗ, ಹನುಮಂತ ನಾಯಿಕ ಸೇರಿದಂತೆ ಅನೇಕ ರೈತರು ಮತ್ತು ಗ್ರಾಮಸ್ಥರು ಇದ್ದರು.