Advertisement

“ಅನಿವಾಸಿ ಭಾರತೀಯರು ನಮಗೆ ಸಂಬಂಧಿಕರು’

03:45 AM Jan 09, 2017 | Team Udayavani |

ಬೆಂಗಳೂರು: ಅನಿವಾಸಿ ಭಾರತೀಯರನ್ನು ನಾನು ಪಾಸ್‌ಪೋರ್ಟ್‌ ಕಲರ್‌ ನೋಡಿ ಗುರುತಿಸುವುದಿಲ್ಲ, ಬದಲಿಗೆ ರಕ್ತ ಸಂಬಂಧಿಕರೆಂಬಂತೆ ನೋಡುತ್ತೇನೆ. ಜಗತ್ತಿನ ಯಾವುದೇ ರಾಷ್ಟ್ರದಲ್ಲಿದ್ದರೂ ನಿಮ್ಮ ಭದ್ರತೆ ಮತ್ತು ಸುರಕ್ಷತೆ ನಮ್ಮ ಸರ್ಕಾರದ ಜವಾಬ್ದಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅನಿವಾಸಿ ಭಾರತೀಯ ಸಮುದಾಯಕ್ಕೆ ಅಭಯ ನೀಡಿದ್ದಾರೆ.

Advertisement

ಭಾನುವಾರ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನೆರೆದಿದ್ದ ಸಹಸ್ರಾರು ಅನಿವಾಸಿ ಭಾರತೀಯ ಸಮೂಹ ಹಾಗೂ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಹಮ್‌ ಪಾಸ್‌ಪೋರ್ಟ್‌ ಕ ಕಲರ್‌ ನಹಿ ದೇಕ್ತೆ, ಖೂನ್‌ ಕ ರಿಶಾ¤ ಸೆ ದೇಕ್ತೆ’ ಎಂದು ಭಾವನಾತ್ಮಕವಾಗಿ ನುಡಿದರು.

ಉದ್ಯೋಗ, ಉದ್ಯಮ ಅರಸಿ ನೆಲೆಸಿರುವ ಆ ನೆಲ ನಿಮಗೆ ಕರ್ಮಭೂಮಿಯಾಗಲಿ. ಆದರೆ ಜನ್ಮ ನೀಡಿದ ಈ ನೆಲ ಧರ್ಮಭೂಮಿ ಎಂಬುದನ್ನು ಮರೆಯಬೇಡಿ. ನಮ್ಮದು ಹೃದಯ ಬೆಸೆಯುವ ಸಂಬಂಧವಾಗಬೇಕು ಎಂದು ಹೇಳಿದರು.

ಭಾರತದ ಕಟ್ಟಕಡೆಯ ಮನುಷ್ಯನ ಅಭಿವೃದ್ಧಿಯಲ್ಲಿ ಭಾಗಿದಾರರಾಗಿ. ಬಂಡವಾಳ ಹೂಡಿಕೆ ಮೂಲಕ ಸಮಗ್ರ ಭಾರತದ ಅಭಿವೃದ್ಧಿಯಲ್ಲಿ ಪಾಲುದಾರರಾಗಿ. ಸ್ವತ್ಛ ಭಾರತ್‌, ನಮಾಮಿ ಗಂಗೆ ಯೋಜನೆಗೆ ಮುಕ್ತ ಮನಸ್ಸಿನಿಂದ ದೇಣಿಗೆ ನೀಡಿ. ಈ ಮೂಲಕ ಭಾರತದೊಂದಿಗೆ ನಿಮ್ಮ ಬಾಂಧವ್ಯ ನಿರಂತರವಾಗಿರಲಿ. ಎಫ್ಡಿಐ ಎಂದರೆ ನನ್ನಲ್ಲಿ ಎರಡು ಅರ್ಥಗಳಿವೆ. “ಫಾರಿನ್‌ ಡೈರೆಕ್ಟ್ ಇನ್‌ವೆಸ್ಟ್‌ಮೆಂಟ್‌’ ಎಂಬ ಅರ್ಥ ಒಂದಾದರೆ ಮತ್ತೂಂದು ಅರ್ಥ “ಫ‌ಸ್ಟ್‌ ಡೆವಲಪ್‌ ಇಂಡಿಯಾ’ ಎಂದು ಹೇಳಿದ ಅವರು, ಭಾರತಕ್ಕೆ ನೀವು ಅತಿಥಿಗಳಲ್ಲ, ಆತಿಥೇಯರು ಎಂದರು.

ಅನಿವಾಸಿ ಭಾರತೀಯ ಸಮುದಾಯ ಎಲ್ಲೆಲ್ಲಿ ವಾಸಿಸಿದೆಯೋ ಅಲ್ಲಿ ಇತರೆ ಅನಿವಾಸಿಯರಿಗೆ ಮಾದರಿಯಾಗಿರುವುದು ಹೆಮ್ಮೆಯ ವಿಷಯ. ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಚೀನಾ ಸೇರಿದಂತೆ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಭಾರತೀಯರು ಪ್ರಮುಖ ಹುದ್ದೆ ಅಲಂಕರಿಸಿರುವುದು ಸಂತೋಷದ ವಿಷಯ. ಭಾರತೀಯರ ಸಾಮರ್ಥ್ಯಕ್ಕೆ ಇದು ಸಾಕ್ಷಿ ಎಂದು ಹೇಳಿದರು.

Advertisement

ಅನಿವಾಸಿ ಭಾರತೀಯರಿಗೆ ಏನೇ ಸಮಸ್ಯೆ ಎದುರಾದರೂ 24 ಗಂಟೆಗಳ ನಿರಂತರ ಸಹಾಯಹಸ್ತ ನೀಡುವಂತೆ ಎಲ್ಲ ರಾಷ್ಟ್ರಗಳಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾವು ನಿಮಗಾಗಿ ಇದ್ದೇವೆ ಎಂಬ ಸಂದೇಶ ರವಾನೆ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರ ಸಂಪರ್ಕದಲ್ಲಿರಲು ನಿರ್ದೇಶನ ನೀಡಲಾಗಿದೆ ಎಂದು ಮೋದಿ ತಿಳಿಸಿದರು.

ಪಾಸ್‌ಪೋರ್ಟ್‌ ಕಳೆದು ಹೋದರೆ, ವೀಸಾ ಸಂಬಂಧಿತ ಸಮಸ್ಯೆ ಎದುರಾದರೆ, ಕಾನೂನು ನೆರವು ಬೇಕಿದ್ದರೆ ಅನಿವಾರ್ಯ ಸಂದರ್ಭದಲ್ಲಿ ಆಶ್ರಯ ಅಗತ್ಯವಾದರೆ, ಆರ್ಥಿಕ ನೆರವು ಬೇಕಾದರೆ ಮುಕ್ತವಾಗಿ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಬಹುದು. ಆ ಕಚೇರಿಗಳು ನಿಮ್ಮ ಸೇವೆಗೆ ಇರುವ ಸೇವಾ ಕೇಂದ್ರಗಳು ಎಂದು ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ 54 ರಾಷ್ಟ್ರಗಳ 19 ಸಾವಿರ ಅನಿವಾಸಿ ಭಾರತೀಯರ ಸಮಸ್ಯೆಗೆ ಸ್ಪಂದಿಸಿ ಸ್ವದೇಶಕ್ಕೆ ಮರಳಲು ಅವಕಾಶ ಮಾಡಿಕೊಟ್ಟಿದ್ದೇವೆ. 90 ಸಾವಿರ ಭಾರತೀಯರಿಗೆ ಹಲವಾರು ರೀತಿಯಲ್ಲಿ ನೆರವಾಗಿದ್ದೇವೆ. ಅನಿವಾಸಿ ಭಾರತೀಯರಿಗಾಗಿ ಕಳೆದ ವರ್ಷ ಆಯೋಜಿಸಲಾಗಿದ್ದ “ಭಾರತ್‌ಕೋ ಜಾನೋ’ ಆನ್‌ಲೈನ್‌ ಕ್ವಿಜ್‌ ಸ್ಪರ್ಧೆಯಲ್ಲಿ ಐದು ಸಾವಿರ ಮಂದಿ ಭಾಗವಹಿಸಿದ್ದರು. ಆ ಸಂಖ್ಯೆ ಈ ಬಾರಿ 50 ಸಾವಿರ ಆಗಬೇಕು ಎಂಬುದು ನನ್ನ ಆಸೆ. ಅದಕ್ಕೆ ನೀವು ಜತೆಗೂಡಬೇಕು ಎಂದು ಪ್ರಧಾನಿ ಮನವಿ ಮಾಡಿದರು.

ಭಾರತದ ಪ್ರತಿಭೆ ವಿದೇಶಗಳಲ್ಲಿ ಬೆಳಗುತ್ತಿದೆ ಎಂಬ ಮಾತು ನಿಜ. ಆದರೆ, ಮುಂದಿನ ದಿನಗಳಲ್ಲಿ ಭಾರತದ ಪ್ರತಿಭೆ ಇಲ್ಲಿಯೇ ಬೆಳಗಿ ಮತ್ತಷ್ಟು ಪ್ರತಿಭೆ ಸೃಷ್ಟಿಸಲಿದೆ. ಅದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.

ಸ್ವಾಗತ ಭಾಷಣ ಮಾಡಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್‌, ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ಜಗತ್ತಿನೆಲ್ಲೆಡೆ ವಾಸಿಸಿರುವ ಅನಿವಾಸಿ ಭಾರತೀಯರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಭಾರತವು ಪೋರ್ಚುಗಲ್‌ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ವಿಶ್ವವೇ ಒಂದು ಕುಟುಂಬ ಎಂಬಂತೆ ನೋಡುತ್ತಿದೆ. ಅನಿವಾಸಿ ಭಾರತೀಯರು ಎಲ್ಲೇ ಇದ್ದರೂ ನಮ್ಮ ಸಂಸ್ಕೃತಿ, ಕಲೆ, ಪರಂಪರೆ ಮರೆಯದೆ ಭಾರತದ ಹಿರಿಮೆ ಹೆಚ್ಚಿಸಿದ್ದಾರೆ. ದೇಶದ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪೋರ್ಚುಗಲ್‌ ಪ್ರಧಾನಿ ಆಂಟೋನಿಯಾ ಕೋಸ್ಟಾ, ಸುರಿಮಾನೆ ಉಪಾಧ್ಯಕ್ಷ ಮೈಕೆಲ್‌ ಅಶ್ವಿ‌ನ್‌ ಅಧಿನ್‌, ರಾಜ್ಯಪಾಲ ವಜೂಭಾಯ್‌ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜನರಲ್‌ ವಿ.ಕೆ.ಸಿಂಗ್‌, ರಾಜ್ಯ ಕೈಗಾರಿಕೆ ಸಚಿವ ಆರ್‌.ವಿ. ದೇಶಪಾಂಡೆ ಉಪಸ್ಥಿತರಿದ್ದರು.

ಮೋದಿ.. ಮೋದಿ.. ಎಂದು ಜೈಕಾರ
ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆಗೆ ಆಗಮಿಸಿದಾಗಿನಿಂದ ನಿರ್ಗಮಿಸುವವರೆಗೂ ಜೈಕಾರಗಳ ಸರಿಮಳೆಯಾಯಿತು. ವೇದಿಗೆ ಆಗಮಿಸುತ್ತಿದ್ದಂತೆ ಸಭಾಂಗಣದಲ್ಲಿದ್ದವರು ಎದ್ದು ನಿಂತು ಹರ್ಷೋದ್ಗಾರದೊಂದಿಗೆ ಸ್ವಾಗತಿಸಿ, ಮೋದಿ… ಮೋದಿ… ಎಂದು ಘೋಷಣೆ ಹಾಕಿದರು. ಆ ನಂತರ ನೋಟು ಅಮಾನ್ಯ ವಿಷಯ ಪ್ರಸ್ತಾಪಿಸಿ, ಭ್ರಷ್ಟಾಚಾರ ಮತ್ತು ಕಪ್ಪುಹಣ ನಿಯಂತ್ರಣ ವಿಚಾರಕ್ಕೆ ಸಮ್ಮತಿ ಬಯಸಿದಾಗ ಚಪ್ಪಾಳೆ ಮೂಲಕ ಹರ್ಷೋದ್ಗಾರ ವ್ಯಕ್ತಪಡಿಸಿ ಮೋದಿ ಮೋದಿ ಎಂದು ಘೋಷಣೆ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next