ಬಾಗಲಕೋಟೆ: ಕ್ಷೇತ್ರದ ನಾಯಕತ್ವ ಬದಲಾವಣೆ ಮಾಡುವಂತಹ ಅನಿವಾರ್ಯ ಬಂದೊದಗಿದೆ. ಆಟೋರಿಕ್ಷಾ ಗುರುತಿಗೆ ತಮ್ಮ ಮತವನ್ನು ನೀಡುವ ಮೂಲಕ ಬದಲಾವಣೆ ಮಾಡಬೇಕು ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಮನವಿ ಮಾಡಿದರು.
ವಿದ್ಯಾಗಿರಿಯ ಬಿಟಿಡಿಎ ಹತ್ತಿರದ ನಂದೀಶ್ವರ ನಗರ, ಜ್ಯೋತಿ ಕಾಲೋನಿ, ರೂಪಲ್ಯಾಂಡ, ಬಸವನಗರ ಸೇರಿದಂತೆ ವಿವಿಧೆಡೆ ಮನೆ ಮನೆಗೆ ತೆರಳಿ ಮತಯಾಚಿಸಿದರು. ನಂದೀಶ್ವರ ಓಣಿಯ ಪ್ರತಿಯೊಂದು ಮನೆಯೊಳಗೆ ಸೇರುತ್ತಿರುವ ಕೊಳಚೆ ನೀರಿನಿಂದ ಮನೆಗಳೆಲ್ಲವೂ ಗಟಾರಗಳಾಗಿ ಪರಿವರ್ತಣೆಗೊಂಡಿವೆ. ಕೊಳಚೆಯಲ್ಲಿ ಜನ ಬದುಕುತ್ತಿರುವುದು ನೋಡುತ್ತಿದ್ದರೆ ಆಶ್ಚರ್ಯವಾಗುತ್ತದೆ. ಮುಳುಗಡೆ ನಗರವೆಂದು ಪ್ರಖ್ಯಾತಗೊಂಡಿರುವ ಬಾಗಲಕೋಟೆಯ ಜನರ ಬದುಕು ನಿಜವಾಗಿಯೂ ಮುಳುಗಡೆಯಾಗಿದೆ. ಹಂದಿಗಳು ವಾಸವಾಗದಂತಹ ಸ್ಥಿಯಲ್ಲಿರುವ ಈ ಓಣಿಯಲ್ಲಿ ಜನರು ಬದುಕುತ್ತಿರುವುದು ನಿಜಕ್ಕೂ ಖೇದಕರ ಸಂಗತಿ. ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುವ ನಾಯಕರು, ಇಲ್ಲೊಮ್ಮೆ ಬಂದು ನೋಡಲಿ. ಕ್ಷೇತ್ರ ಎಷ್ಟು ಬದಲಾವಣೆಯಾಗಿದೆ ಎಂಬುದನ್ನೇ ತಾವೇ ಕಣ್ಣಾರೆ ಕಾಣಲಿ. ಇಂತಹ ಸ್ಥಿತಿಯಲ್ಲಿರುವ ಜನರು ಬದಲಾವಣೆ ಬಯಸಿದ್ದಾರೆ ಎಂದು ಹೇಳಿದರು.
ಕ್ಷೇತ್ರದ ಜನರು ಮೂರು ಬಾರಿ ನಾಯಕನನ್ನಾಗಿ ಆರಿಸಿ ತಂದರೂ ಒಂದು ಓಣಿಗೆ ಬೇಕಾಗಿರುವ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಸಮಸ್ಯೆ ಹೊತ್ತು ಬಂದವರಿಗೆ ಪ್ರತಿಕ್ರಿಯೇ ನಿಡದಂತಹ ವಿಫಲ ನಾಯಕನ್ನು ಕ್ಷೇತ್ರದಿಂದ ಶಾಶ್ವತವಾಗಿ ಮಾಜಿಗೊಳಿಸಬೇಕು. ಈ ಬಾರಿ ಸ್ವಾಭಿಮಾನಿ ಕಾರ್ಯಕರ್ತರ ಶಕ್ತಿಯಾಗಿರುವ ಆಟೋರಿಕ್ಷಾ ಚಿನ್ಹೆಗೆ ಮತ ನೀಡಿ ಎಂದು ಕೇಳಿಕೊಂಡರು. ಜನನಾಯಕನಾದವನು ಸೌಮ್ಯ ಸ್ವಭಾವ ಹೊಂದಿರಬೇಕು. ತಮ್ಮ ಬಳಿ ಬರುವ ಜನರ ಕಷ್ಟಗಳನ್ನು ಅರಿತುಕೊಳ್ಳುವ ಗುಣ ಇರಬೇಕು. ಆದರೆ, ಇಂತಹ ನಾಯಕರು ನಮ್ಮ ಕ್ಷೇತ್ರದಲ್ಲಿಲ್ಲ. ಈ ಬಾರಿ ಸ್ವಾಭಿಮಾನಿ ಕಾರ್ಯಕರ್ತರು ಒಟ್ಟುಗೂಡಿ ಬಾಗಲಕೋಟೆ ಅಭಿವೃದ್ಧಿ ಪಡೆಯಾಗಿ ಸಿದ್ಧಗೊಂಡಿದೆ. ಸ್ವಾಭಿಮಾನಿ ಕಾರ್ಯಕರ್ತರ ಹೋರಾಟ ಏನೆಂದು ಜನರಿಗೆ ತಿಳಿದಿದೆ ಎಂದರು.
ಮುಖಂಡರಾದ ಸಂತೋಷ ಹೊಕ್ರಾಣಿ, ಬಸವರಾಜ ಕಟಗೇರಿ, ರವಿ ಕುಮಟಗಿ, ಅಶೋಕ ಮುತ್ತಿನಮಠ, ಅಶೋಕ ಮಹೇಂದ್ರಕರ, ನಾಗರಾಜ ಕೆರೂರ, ಸಚಿನ ಮರಿಶೆಟ್ಟಿ, ಸಂಜೀವ ಡಿಗ್ಗಿ, ಶ್ರೀಶೈಲ ಅಂಗಡಿ, ರಾಜು ಗೌಳಿ, ಅರುಣ ಲೋಕಾಪುರ, ಗುರು ಅನಗವಾಡಿ, ಶಂಕರ ಮಗಜಿ, ವಿಶಾಲ ಮಾಂಡಗಿ, ಪುಟ್ಟು ಅಜ್ಜೋಡಿ, ಬಿ.ಎಂ. ಪಾಟೀಲ, ಶಶಿರೇಖಾ ಶಿಗ್ಲಿಮಠ, ಗೋನಿಬಾಯಿ ಮುಂತಾದವರು ಪಾಲ್ಗೊಂಡಿದ್ದರು.
ಜಿಲ್ಲಾ ಕೇಂದ್ರವಾದ ನಂದೀಶ್ವರ ನಗರದಲ್ಲಿ ಕೊಳಚೆ ಸ್ಥಿತಿ ನಿರ್ಮಾಣವಾಗಿದ್ದು, ಕ್ಷೇತ್ರ ಎಷ್ಟು ಅಭಿವೃದ್ಧಿಯಾಗಿದೆ ಎಂಬುದನ್ನು ಅಭಿವೃದ್ಧಿ ಹರಿಕಾರರು ನೋಡಲಿ. ಇದರಿಂದ ಜನರು ರೋಸಿದ್ದಾರೆ. ಇದಕ್ಕಾಗಿಯೇ ಜನ ಬದಲಾವಣೆ ಬಯಸಿದ್ದಾರೆ. ಜನರೆಲ್ಲರೂ ಸ್ವಾಭಿಮಾನಿ ಕಾರ್ಯಕರ್ತರಿಗೆ ಬೆಂಬಲ ಸೂಚಿಸುತ್ತಿದ್ದು, ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಚರಂತಿಮಠರ ಗೆಲವು ನಿಶ್ಚಿತ.
–ಸಂತೋಷ ಹೊಕ್ರಾಣಿ, ಯುವ ಮುಖಂಡ