ಮೈಸೂರು: ಕಾಗದ ರಹಿತ ಬ್ಯಾಂಕ್ ವಹಿವಾಟು ನಡೆಸುವ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಶನಿವಾರ ನಗರದಲ್ಲಿ ಸೈಕಲ್ ಜಾಥಾ ನಡೆಸಲಾಯಿತು.
ನಗರದ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಾಗೂ ಟ್ರಿಣ್ ಟ್ರಿಣ್ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ಸೈಕಲ್ ಜಾಥಾದಲ್ಲಿ ಬ್ಯಾಂಕ್ ಸಿಬ್ಬಂದಿ ಪಾಲ್ಗೊಂಡಿದ್ದರು. “ಪರಿಸರ ಉಳಿಸಿ, ಕಾಗದ ರಹಿತ ಆಡಳಿತಕ್ಕೆ ಪ್ರೋತ್ಸಾಹಿಸಿ’ ಎಂಬ ಘೋಷಣೆಯೊಂದಿಗೆ ನಗರದ ವಿವಿಧೆಡೆಗಳಲ್ಲಿ ಸೈಕಲ್ ಜಾಥಾ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.
ಉತ್ತಮ ಪ್ರತಿಕ್ರಿಯೆ: ಬ್ಯಾಂಕ್‌ನ ಅಧಿಕಾರಿ ಎಂ.ಎಂ.ರವಿಚಂದ್ರ ಮಾತನಾಡಿ, ಬ್ಯಾಂಕಿನ ಆಡಳಿತವನ್ನು ಕಾಗದ ರಹಿತವಾಗಿ ನಡೆಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸೈಕಲ್ ರ್ಯಾಲಿ ನಡೆಸಿದ್ದು, ಪರಿಸರ ಸ್ನೇಹಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾದ ರ್ಯಾಲಿ ಕೆ.ಆರ್.ವೃತ್ತ, ಅರಸು ರಸ್ತೆ, ಜೆಎಲ್‌ಬಿ ರಸ್ತೆ, ಬಲ್ಲಾಳ್ ವೃತ್ತ, ಕಾಂತರಾಜ ಅರಸು ರಸ್ತೆ, ಸರಸ್ವತಿಪುರಂ, ಕುವೆಂಪುನಗರ, ವಿಜಯಬ್ಯಾಂಕ್ ವೃತ್ತದ ಮೂಲಕ ಸಾಗಿ ಕುಕ್ಕರಹಳ್ಳಿ ಕೆರೆಯಲ್ಲಿ ಅಂತ್ಯವಾಯಿತು.
ಜಾಥಾದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಶಿವಕುಮಾರ್, ಟ್ರಿಣ್ ಟ್ರಿಣ್ ಯೋಜನೆಯ ಸುರೇಶ್‌ಬಾಬು ಸೇರಿದಂತೆ ಬ್ಯಾಂಕಿನ 30ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.