ಈ ಬಾರಿಯೂ ಕೆಲವು ಐತಿಹಾಸಿಕ ಪುರುಷರ ಹೆಸರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿದೆ. ಈ ಪೈಕಿ ಮಹಾತ್ಮ ಗಾಂಧಿಯ ಹತ್ಯೆಯ ಕುರಿತಾಗಿ ಮಾಡಿದ ಪ್ರಸ್ತಾವ ಪೂರ್ಣರೂಪದ ವಿವಾದವಾಗಿ ಮಾರ್ಪಟ್ಟಿದೆ. ಮಹಾತ್ಮ ಗಾಂಧಿ ಹತ್ಯೆ ವಿಚಾರವನ್ನು ಮೊದಲಿಗೆ ಎತ್ತಿರುವವರು ರಾಜಕಾರಣಿಯಾಗಿ ಪರಿವರ್ತಿತರಾಗಿರುವ ನಟ ಕಮಲಹಾಸನ್. ತಮಿಳುನಾಡಿನ ಉಪಚುನಾವಣೆಗೆ ಪ್ರಚಾರ ಮಾಡುತ್ತಿದ್ದ ವೇಳೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದು ಎಂದು ಅವರು ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನುದ್ದೇಶಿಸಿ ನೀಡಿದ ಹೇಳಿಕೆ ವಿವಾದದ ಕಿಡಿಯೆಬ್ಬಿಸಿತು. ಎಲ್ಲ ಕಡೆಗಳಿಂದ ಈ ಹೇಳಿಕೆಗೆ ವಿರೋಧ ವ್ಯಕ್ತವಾದ ಬಳಿಕ ಕಮಲಹಾಸನ್ ಎಲ್ಲ ಧರ್ಮಗಳಲ್ಲಿ ಭಯೋತ್ಪಾದಕರು ಇದ್ದಾರೆ ಎಂದು ತನ್ನಿಂದಾದ ಪ್ರಮಾದಕ್ಕೆ ತೇಪೆ ಹಚ್ಚುವ ಪ್ರಯತ್ನವನ್ನೇನೋ ಮಾಡಿದರು. ಆದರೆ ಮರುದಿನ ಭೋಪಾಲ್ನ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಗೋಡ್ಸೆ ಕುರಿತಾಗಿ ನೀಡಿದ ಹೇಳಿಕೆ ಈ ವಿವಾದ ಇನ್ನಷ್ಟು ಉಲ್ಬಣಿಸುವಂತೆ ಮಾಡಿದೆ ಮಾತ್ರವಲ್ಲ ಬಿಜೆಪಿಗೂ ಈ ಹೇಳಿಕೆಯಿಂದ ಬಹಳ ಮುಜುಗರವಾಗಿದೆ.
ಕಾಂಗ್ರೆಸಿನ ದಿಗ್ವಿಜಯ್ ಸಿಂಗ್ ಎದುರಾಗಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಕಣಕ್ಕಿಳಿಸಿದಾಗಲೇ ಭೋಪಾಲ್ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿತ್ತು. ಪ್ರಜ್ಞಾ ಸಿಂಗ್ ವಿರುದ್ಧ ಮಾಲೇಗಾಂವ್‌ನಲ್ಲಿ ಬಾಂಬ್‌ಸ್ಫೋಟಿಸಿದ ಆರೋಪವಿದೆ. ಆರೋಪ ಇನ್ನೂ ಸಾಬೀತಾಗಿಲ್ಲ ಹಾಗೂ ಅವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಹೀಗಾಗಿ ಕಾನೂನಿನ ದೃಷ್ಟಿಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಹಕ್ಕು ಅವರಿಗಿದೆ. ಆದರೆ ನೈತಿಕವಾಗಿ ಭಯೋತ್ಪಾದನೆಯ ಆರೋಪ ಹೊತ್ತಿರುವ ವ್ಯಕ್ತಿಯನ್ನು ಕಣಕ್ಕಿಳಿಸಿದ್ದು ಸರಿಯೇ ಎಂಬ ಜಿಜ್ಞಾಸೆ ಆರಂಭದಿಂದಲೇ ಇತ್ತು. ಪ್ರಜ್ಞಾ ಸಿಂಗ್ ನಡೆನುಡಿಗಳು ಕೂಡಾ ಈ ಪ್ರಶ್ನೆ ಇನ್ನಷ್ಟು ಗಾಢವಾಗುವಂತೆ ಮಾಡಿದೆ. ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಪ್ರಜ್ಞಾ ಸಿಂಗ್ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ.
ತನ್ನನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಸಾವಿಗೆ ತನ್ನ ಶಾಪವೇ ಕಾರಣ ಎಂಬ ಹೇಳಿಕೆ ಹಲವು ದಿನ ಚರ್ಚೆಯಲ್ಲಿತ್ತು. ಮುಂಬಯಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿರುವ ಕರ್ಕರೆಯನ್ನು ಸರಕಾರ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿಯಿತ್ತು ಗೌರವಿಸಿದೆ. ಇಂಥ ಅಧಿಕಾರಿಗೆ ಅವಮಾನವಾಗುವ ಹೇಳಿಕೆ ನೀಡುವ ಮೂಲಕ ಪ್ರಜ್ಞಾ ಬಿಜೆಪಿಯ ದೇಶಭಕ್ತಿಯನ್ನು ವಿಪಕ್ಷಗಳು ಲೇವಡಿ ಮಾಡುವಂತೆ ಮಾಡಿದ್ದರು.
ಇದೀಗ ಗೋಡ್ಸೆ ದೇಶಭಕ್ತರಾಗಿದ್ದನು, ಎಂದೆಂದೂ ದೇಶಭಕ್ತರಾಗಿ ಇರುತ್ತಾನೆ. ಅವನನ್ನು ದೇಶದ್ರೋಹಿ ಎನ್ನುವವರಿಗೆ ಜನರು ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಎನ್ನುವ ಮೂಲಕ ಪಕ್ಷಕ್ಕೆ ಭಾರೀ ಹಾನಿ ಮಾಡಿದ್ದಾರೆ. ಕಡೇ ಹಂತದ ಚುನಾವಣೆ ನಡೆಯಲು ಬರೀ 48 ತಾಸುಗಳು ಬಾಕಿಯಿರುವಾಗ ನೀಡಿರುವ ಹೇಳಿಕೆಯಿಂದಾಗಬಹುದಾದ ಪರಿಣಾಮವನ್ನು ಊಹಿಸಲು ರಾಜಕೀಯಕ್ಕೆ ಹೊಸಬರಾಗಿರುವ ಪ್ರಜ್ಞಾರಿಂದ ಸಾಧ್ಯವಾಗದಿರಬಹುದು. ಆದರೆ ಪಕ್ಷಕ್ಕೆ ಅದು ಅರಿವಾಗಿದೆ. ಹೀಗಾಗಿ ಸ್ವತಃ ಮೋದಿಯೇ ಈ ಹೇಳಿಕೆಗೆ ಸ್ಪಷ್ಟೀಕರಣ ನೀಡಬೇಕಾಗಿ ಬಂತು. ಗಾಂಧಿ ಕುರಿತು ಹಗುರವಾಗಿ ಮಾತನಾಡಿದ ಪ್ರಜ್ಞಾರನ್ನು ಕ್ಷಮಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಮೋದಿ ಈ ಹೇಳಿಕೆಯಿಂದಾಗಬಹುದಾದ ಹಾನಿಯನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ. ಅಂತೆಯೇ ಪ್ರಜ್ಞಾ ಮತ್ತು ಅವರ ಹೇಳಿಕೆಯನ್ನು ಸಮರ್ಥಿಸಿ ಟ್ವೀಟ್ ಮಾಡಿರುವ ಇಬ್ಬರಿಗೆ ಅಧ್ಯಕ್ಷ ಅಮಿತ್ ಶಾ ನೊಟೀಸ್ ಜಾರಿಗೊಳಿಸಿದ್ದಾರೆ. ಓರ್ವ ನಾಯಕ ಅಮಾನತುಗೊಂಡಿದ್ದಾರೆ.
ಮೋದಿ ಪ್ರಚಾರದ ಕಡೇ ದಿನ ಕಡೇ ಗಳಿಗೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು ಕೂಡಾ ಈ ಬಾರಿಯ ಚುನಾವಣೆಯ ಒಂದು ವಿಶೇಷತೆ. ಪ್ರಧಾನಿಯಾಗಿ ಐದು ವರ್ಷದಲ್ಲಿ ಮೋದಿ ಎದುರಿಸಿದ ಮೊದಲ ಪತ್ರಿಕಾಗೋಷ್ಠಿಯಿದು. ಐದು ವರ್ಷ ತನ್ನನ್ನು ಬೆಂಬಲಿಸಿದವರಿಗೆ ಧನ್ಯವಾದ ಹೇಳುವ ಉದ್ದೇಶದಿಂದ ಮೋದಿ ಪತ್ರಿಕಾಗೋಷ್ಠಿಗೆ ಬಂದಿದ್ದರೂ ಪ್ರಜ್ಞಾಸಿಂಗ್ ಹೇಳಿಕೆಗೆ ಮತ್ತೂಮ್ಮೆ ಸ್ಪಷ್ಟೀಕರಣ ನೀಡುವುದೂ ಗೋಷ್ಠಿಯ ಇನ್ನೊಂದು ಉದ್ದೇಶವಾಗಿತ್ತು. ಮಾತ್ರವಲ್ಲದೆ ಪತ್ರಕರ್ತರನ್ನು ಎದುರಿಸದ ಪ್ರಧಾನಿ ಎಂಬ ಅಪವಾದವನ್ನು ತಪ್ಪಿಸುವ ಇರಾದೆಯೂ ಇರಬಹುದು. ಪತ್ರಿಕಾಗೋಷ್ಠಿಯ ಉದ್ದೇಶ ಏನೇ ಇದ್ದರೂ ಓರ್ವ ಅಭ್ಯರ್ಥಿಯ ಹೇಳಿಕೆಯಿಂದಾದ ಹಾನಿಯನ್ನು ಸರಿಪಡಿಸಲು ಮೋದಿಯಂಥ ಪ್ರಭಾವಿ ನಾಯಕರೇ ಬರಬೇಕಾಯಿತು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ. ದಿಗ್ವಿಜಯ್ ಸಿಂಗ್ ನೀಡಿದ ಹಿಂದು ವಿರೋಧಿ ಹೇಳಿಕೆಯ ಲಾಭ ಪಡೆಯಲು ಬಿಜೆಪಿ ಪ್ರಜ್ಞಾ ಸಿಂಗ್‌ರನ್ನು ಕಣಕ್ಕಿಳಿಸಿತ್ತು. ಆದರೆ ಪ್ರಜ್ಞಾ ಸಿಂಗ್ ಬೆನ್ನುಬೆನ್ನಿಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ತನ್ನ ರಾಜಕೀಯ ಅಪ್ರಬುದ್ಧತನವನ್ನು ಜಾಹೀರುಪಡಿಸಿದ್ದಾರೆ. ಭೋಪಾಲ್ ಹಿಂದಿನಿಂದಲೂ ಬಿಜೆಪಿಯ ಭದ್ರಕೋಟೆ. ಈ ಸಲ ಎಲ್ಲಿಯಾದರೂ ಇಲ್ಲಿ ಬಿಜೆಪಿ ಸೋತರೆ ಪಕ್ಷಕ್ಕೆ ಆಗುವ ಮುಜುಗರ ಅಷ್ಟಿಷ್ಟಲ್ಲ. ಅಭ್ಯರ್ಥಿಗಳನ್ನು ಆರಿಸುವಾಗ ಎಲ್ಲ ಆಯಾಮಗಳಿಂದಲೂ ಆಲೋಚಿಸಬೇಕಾಗುತ್ತದೆ ಎಂಬ ಪಾಠವನ್ನು ಈ ಆಯ್ಕೆ ಎಲ್ಲ ಪಕ್ಷಗಳಿಗೆ ಕಲಿಸಬೇಕು.