Advertisement
ಬೆಳ್ತಂಗಡಿ ತಾಲೂಕಿನಿಂದ 40 ಕಿ.ಮೀ. ದೂರದಲ್ಲಿದ್ದು, ನೆರಿಯ ಗ್ರಾ.ಪಂ.ಗೆ ಒಳಪಡುವ ಚಾರ್ಮಾಡಿ ಘಾಟಿಯಲ್ಲಿ 6ನೇ ತಿರುವಿನಿಂದ ಬಲಕ್ಕೆ ಸುಮಾರು 10 ಕಿ.ಮೀ. ಸಾಗಿದರೆ ಬಾಂಜಾರುಮಾಲೆ ಇದೆ. ಮಲೆಕುಡಿಯ ಸಮುದಾಯಕ್ಕೆ ಸೇರಿದ ಕುಟುಂಬಗಳು ಇಲ್ಲಿ ಮೂರು ತಲೆಮಾರುಗಳಿಂದ ವಾಸಿಸುತ್ತಿವೆ. ಪ್ರಸಕ್ತ 43 ಕುಟುಂಬಗಳ 168 ಮಂದಿ ಕೃಷಿಯನ್ನೇ ಆಶ್ರಯಿಸಿ ಜೀವನ ನಡೆಸುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪ್ರಪಂಚದಾದ್ಯಂತ ಹಳ್ಳಿಹಳ್ಳಿಯ ಮನೆಗಳ ಕದ ತಟ್ಟಿರುವ ಕೋವಿಡ್ ಬಾಂಜಾರು ಮಲೆ ಮಲೆಕುಡಿಯ ನಿವಾಸಿಗಳತ್ತ ಸುಳಿದಿಲ್ಲ. ಇವರು ಲಾಕ್‌ಡೌನ್ ಬಳಿಕ ಊರಿನಿಂದ ಹೊರಗೆ ಕಾಲಿಡದಿರುವುದೇ ಕಾರಣ. ಹಾಗೆಯೇ ತಮ್ಮೂರಿಗೆ ಯಾರೂ ಪ್ರವೇಶಿಸಲು ಬಿಟ್ಟಿಲ್ಲ. ಹುಟ್ಟು ಶ್ರಮಜೀವಿಗಳಾಗಿರುವ ಇವರು ತಮ್ಮ ಆಹಾರವನ್ನು ತಾವೇ ಬೆಳೆ ಯುತ್ತಾರೆ, ಮೂಲಿಕೆಗಳನ್ನು ಆಶ್ರಯಿಸಿ ಆರೋಗ್ಯವಾಗಿದ್ದಾರೆ. 168ಕ್ಕೂ ಹೆಚ್ಚು ಜನ
ಸುಮಾರು 168 ಜನಸಂಖ್ಯೆ ಹೊಂದಿರುವ ಗ್ರಾಮವು 250 ಎಕ್ರೆಗೂ ಅಧಿಕ ಕೃಷಿ ಭೂಮಿ ಹೊಂದಿದೆ. 60 ವರ್ಷಕ್ಕಿಂತ ಮೇಲ್ಪಟ್ಟ 20ಕ್ಕೂ ಹೆಚ್ಚು ಮಂದಿಯಿದ್ದು, 5 ವರ್ಷಕ್ಕಿಂತ ಕಡಿಮೆಯ 22 ಮಕ್ಕಳು, 14 ವರ್ಷಕ್ಕಿಂತ ಕಡಿಮೆಯ 14 ಮಕ್ಕಳಿದ್ದಾರೆ. ಒಬ್ಬ ಗರ್ಭಿಣಿಯೂ ಕಾಲೊನಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ ಈವರೆಗೆ ಕೋವಿಡ್ ಪ್ರಕರಣ ದಾಖಲಾಗದೆ ಆರೋಗ್ಯ ವಂತರಾಗಿದ್ದಾರೆ.
Related Articles
ನಿಸರ್ಗ ಸಹಜ ಆಹಾರ, ನೀರು, ಗಾಳಿಯೇ ಇವರ ಆರೋಗ್ಯ ಸುರಕ್ಷಿತವಾಗಿರಲು ಕಾರಣ. ತಾವೇ ಬೆಳೆದ ಸಾವಯವ ತರಕಾರಿಯ ಬಳಕೆ ಇವರ ರೋಗನಿರೋಧಕ ಶಕ್ತಿ ವೃದ್ಧಿ ಮಾಡಿದೆ. ಸಂಬಾರ ಬೆಳೆಗಳು, ಅಡಿಕೆ, ರಬ್ಬರ್, ತೆಂಗು ಬೆಳೆಯುತ್ತಿದ್ದು, ಕಠಿನ ಪರಿಶ್ರಮಿಗಳೂ ಆಗಿರುವುದರಿಂದ ಇತರ ಕಾಯಿಲೆಗಳಿಲ್ಲ, ದೈಹಿಕವಾಗಿಯೂ ಸದೃಢರಾಗಿದ್ದಾರೆ.
Advertisement
ಕಳೆದ ಬಾರಿ ಕೋವಿಡ್ ಪರೀಕ್ಷೆ ನಡೆಸಿದ್ದು, ಯಾರಿಗೂ ಪಾಸಿಟಿವ್ ಬಂದಿಲ್ಲ. ಎಲ್ಲರೂ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. “ವೈದ್ಯರ ನಡೆ ಹಳ್ಳಿ ಕಡೆ’ ಯೋಜನೆಯಡಿ ಈ ವಾರ ಬಾಂಜಾರು ಮಲೆ ಕಾಲೊನಿ ನಿವಾಸಿಗಳ ಆರೋಗ್ಯ ತಪಾಸಣೆ ನಡೆಸಲಾಗುವುದು.-ಡಾ| ಕಲಾಮಧು, ಆರೋಗ್ಯಾಧಿಕಾರಿ, ಬೆಳ್ತಂಗಡಿ - ಚೈತ್ರೇಶ್ ಇಳಂತಿಲ