Advertisement

ರೈತರಿಗೆ ಪೂರಕವಲ್ಲದ ಬಜೆಟ್

07:09 AM Feb 02, 2019 | Team Udayavani |

ಕೇಂದ್ರ ಸರ್ಕಾರ ಮಂಡಿಸಿರುವ ಮಧ್ಯಂತರ ಬಜೆಟ್ನ್ನು ಬಿಜೆಪಿಯೇತರ ಪಕ್ಷಗಳು ಚುನವಣಾ ಬಜೆಟ್ ಎಂದು ಲೇವಡಿ ಮಾಡಿದರೆ, ಬಿಜೆಪಿ ಕಾರ್ಯಕರ್ತರು ಐತಿಹಾಸಿಕ ಬಜೆಟ್ ಎಂದು ಶ್ಲಾಘಿಸಿದ್ದಾರೆ. ಆದಾಯ ತೆರಿಗೆ ಮಿತಿ ಹೆಚ್ಚಳಕ್ಕೆ ಜಿಲ್ಲೆಯ ನಾಗರಿಕರು, ಎಲ್ಲಾ ಪಕ್ಷಗಳ ಕಾರ್ಯಕರ್ತರು ಸ್ವಾಗತಿಸಿದ್ದಾರೆ.

Advertisement

ವಾರ್ಷಿಕ 6 ಸಾವಿರ ಪ್ರೋತ್ಸಾಹ ಧನ ನೀಡುವ ಉದ್ದೇಶಕ್ಕೆ ಕೆಲವು ರೈತರು ಸ್ವಾಗತಿಸಿದ್ದಾರೆ, ಕೆಲವರು ಇದು ಸಾಲೋದಿಲ್ಲ ಎಂದಿದ್ದಾರೆ, ಇನ್ನು ಕೆಲವರು ಇದು ಜಾರಿಯಾಗುತ್ತಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಹೆಚ್ಚು ರೈಲು ಓಡಾಟ, ರೇಷ್ಮೆ ಕೃಷಿ ಮತ್ತು ಉದ್ಯಮಕ್ಕೆ ಪ್ರೋತ್ಸಾಹ ನಿರೀಕ್ಷಿಸಿದ್ದ ನಾಗರಿಕರಿಗೆ ನಿರಾಸೆಯಾಗಿದೆ.

ರಾಮನಗರ: ಶುಕ್ರವಾರ ವಿತ್ತ ಸಚಿವ ಪಿಯೂಷ್‌ ಗೋಯೆಲ್‌ ಮಂಡಿಸಿದ 2019-20ನೇ ಸಾಲಿನ ಮಧ್ಯಂತರ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತ ಸಮುದಾಯ ಕೃಷಿ ಪೂರಕ ಬಜೆಟ್ ಅಲ್ಲ ಎಂದು ದೂರಿದರೆ, ಸರ್ಕಾರಿ ನೌಕರರು, ಉದ್ಯೋಗಸ್ಥರು ಮತ್ತು ವ್ಯಾಪಾರಿಗಳು ಬಜೆಟನ್ನು ಸ್ವಾಗತಿಸಿದ್ದಾರೆ.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ನರೇಂದ್ರ ಮೋದಿ ಸರ್ಕಾರ ಎಲ್ಲರ ಮೂಗಿಗು ತುಪ್ಪ ಹಚ್ಚಿದ್ದಾರೆ, ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಂಡಿಸಿರುವ ಬಜೆಟ್ ಎಂದು ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯ ಪ್ರಣಾಳಿಕೆಯಂತಿರುವ ಬಜೆಟನ್ನು ಜನ ಸಾರಾಸಗಟಾಗಿ ತಿರಸ್ಕರಿಸುತ್ತಾರೆ.

5 ವರ್ಷಗಳಲ್ಲಿ ಅಚ್ಚೇದಿನ್‌ ಬರಲೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತರು ಇಂತಹ ಅತ್ಯುತ್ತಮ ಬಜೆಟ್ ಯಾವ ಸರ್ಕಾರವೂ ಮಂಡಿಸಿಲ್ಲ. ವಿರೋಧ ಪಕ್ಷಗಳು ರಾಜಕೀಯ ಕಾರಣಗಳಿಗೆ ವಿರೋಧ ಮಾಡುತ್ತಿವೆ ಎಂದು ದೂರಿದ್ದಾರೆ.

Advertisement

ಜನಮೆಚ್ಚಿದ್ದು: ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷ ರೂವರೆಗೆ ಏರಿಸಿರುವುದು, ಮಹಿಳಾ ನೌಕರರಿಗೆ ಹೆರಿಗೆ ರಜೆ ವಿಸ್ತರಣೆ, ರೈತರಿಗೆ ವಾರ್ಷಿಕ 6 ಸಾವಿರ ರೂ. ಪ್ರೋತ್ಸಾಹ ಧನ, ಪ್ರಧಾನ ಮಂತ್ರಿ ಶ್ರಮ-ಯೋಗಿ ಮಾನ್‌ಧಾನ್‌ ಯೋಜನೆ ಮೂಲಕ ಅಸಂಘಟಿತ ಕಾರ್ಮಿಕರು ತಿಂಗಳಿಗೆ ಕೇವಲ 55 ರೂ. ಪಾವತಿಸಿ, 60 ವರ್ಷಗಳ ನಂತರ ಮಾಸಿಕ 3 ಸಾವಿರ ಪಿಂಚಣಿ ಪಡೆಯುವ ಯೋಜನೆ, ನೈಸರ್ಗಿ ವಿಕೋಪಗಳ ವೇಳೆ ಬೆಳೆ ನಷ್ಟವಾದರೆ ಕೃಷಿ ಸಾಲದ ಬಡ್ಡಿದರಗಳಿಗೆ ಶೇ.2ರಷ್ಟು ಇಳಿಕೆ ಮುಂತಾದ ನಿರ್ಧಾರಗಳನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ.

ಜನಮೆಚ್ಚದ್ದು: ಸ್ವಾಮಿನಾಥನ್‌ ವರದಿಯನ್ನು ಜಾರಿ ಮಾಡವ ವಿಚಾರವನ್ನು ಪ್ರಸ್ತಾಪಿಸದಿರುವುದು, ಎಂ.ಎಸ್‌.ಪಿ ಕಾರ್ಯಕ್ರಮದಡಿ ಸ್ಥಳೀಯ ಬೆಳೆಗಳನ್ನು ಸೇರಿಸದಿರುವುದು, ನಿರುದ್ಯೋಗ ಸಮಸ್ಯೆಗೆ ಸ್ಪಂದಿಸುವ ಯೋಜನೆ ರೂಪಿಸದಿರುವುದು, ರೈಲು ಯೋಜನೆಗಳಿಗೆ ಸ್ಪಂದಿಸದಿರುವುದು, ರೇಷ್ಮೆ ಕೃಷಿ ಮತ್ತು ಉದ್ಯಮದ ಅಭಿವೃದ್ಧಿಗೆ ಸ್ಪಂದಿಸದಿರುವುದು, ಮೇಕೆದಾಟು ಯೋಜನೆಗೆ ಆರ್ಥಿಕ ನೆರವು ಘೋಷಿಸದಿರುವುದು ಜಿಲ್ಲೆಯ ಜನರಲ್ಲಿ ಬೇಸರ ಮೂಡಿಸಿದೆ. ಸಚಿವ ಪಿಯೂಷ್‌ ಗೋಯೆಲ್‌ ಮಂಡಿಸಿರುವ ಆಯವ್ಯಯಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಡ್ಡಿದಾರರ ಕಪಿಮುಷ್ಟಿಯಿಂದ ಪಾರು: ಸಣ್ಣ ವ್ಯಾಪಾರಸ್ಥರಿಗೆ ಮುದ್ರಾ ಯೋಜನೆಯ ಮೂಲಕ ಬ್ಯಾಂಕುಗಳಲ್ಲಿ ಸಾಲ ಪಡೆಯುವ ವ್ಯವಸ್ಥೆ ಹಿಂದೆಯೇ ಜಾರಿಯಾಗಿದೆ. ಮುದ್ರಾ ಯೋಜನೆಯಿಂದ ಸಾಕಷ್ಟು ಸಣ್ಣ ವ್ಯಾಪಾರಸ್ಥರು ಅಕ್ರಮ ಬಡ್ಡಿದಾರರ ಕಪಿಮುಷ್ಟಿಯಿಂದ ಪಾರಾಗಿದ್ದಾರೆ. ವಾರ್ಷಿಕ ವಹಿವಾಟು 20 ಲಕ್ಷ ರೂ ಮೀರಿದರೆ ಮಾತ್ರ ಜಿ.ಎಸ್‌.ಟಿ. ಕಾಯ್ದೆಯಡಿ ವ್ಯಾಪಾರಸ್ಥರು ನೋಂದಣಿ ಮಾಡಿಕೊಳ್ಳಬೇಕಿತ್ತು.

ಕೆಲ ತಿಂಗಳ ಹಿಂದೆ ಈ ಮಿತಿಯನ್ನು ಕೇಂದ್ರ ಸರ್ಕಾರ 40 ಲಕ್ಷಕ್ಕೆ ಏರಿಸಿ ವ್ಯಾಪಾರಸ್ಥರ ಮನವಿಗೆ ಸ್ಪಂದಿಸಿದ್ದಾರೆ. ಶೇ.90ಕ್ಕೂ ಹೆಚ್ಚು ವ್ಯಾಪಾರಿಗಳು ತ್ತೈಮಾಸಿಕ ರಿಟರ್ನ್ಸ್ ಸಲ್ಲಿಕೆಗೆ ಕೇಂದ್ರ ಸರ್ಕಾರ ಮನಸ್ಸು ಮಾಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಜಿ.ಎಸ್‌.ಟಿ ಸ್ಲಾಬ್‌ಗಳನ್ನು 2ಕ್ಕೆ ಇಳಿಸುವಂತೆ ಮಾಡಿದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ನಗದು ರಹಿತ ವ್ಯಾಪಾರಕ್ಕೆ ಪ್ರೋತ್ಸಾಹ ಸಾಲದು: ಇದು ಸ್ಪರ್ಧಾತ್ಮಕ ಯುಗ. ಸಾಂಪ್ರದಾಯಿಕ ವ್ಯಾಪಾರಸ್ಥರು ಆನ್‌ಲೈನ್‌ ವ್ಯಾಪರದ ಸವಾಲು ಎದುರಿಸುತ್ತಿದ್ದಾರೆ. ದರ ಸ್ಪರ್ಧೆಯಿಂದಾಗಿ ವ್ಯಾಪಾರದಲ್ಲಿ ಲಾಭಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸೈಪಿಂಗ್‌ ಮೆಷಿನ್‌ ಮೂಲಕ ವಹಿವಾಟಿಗೆ ಬ್ಯಾಂಕುಗಳು ಶೇ.1ರಿಂದ 2ರಷ್ಟು ಶುಲ್ಕ ಪಡೆಯುತ್ತಿವೆ. ಲಾಭಗಳಿಕೆಯಲ್ಲಿ ನಷ್ಟವಾಗುತ್ತಿರುವ ಸಂದರ್ಭದಲ್ಲಿ ಈ ಕಮೀಷನ್‌ ಕೊಡುವುದು ಸಾಧ್ಯವಿಲ್ಲ. ಹೀಗಾಗಿ ಕನಿಷ್ಠ 5 ಸಾವಿರದವರೆಗಿನ ವಹಿವಾಟಿಗೆ ಶುಲ್ಕ ರದ್ದು ಮಾಡಬೇಕಿತ್ತು ಎಂದು ಕೆಲವು ವ್ಯಾಪಾರಸ್ಥರು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next