Advertisement

Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ

05:31 PM May 17, 2024 | Team Udayavani |

ಕೊಪ್ಪಳ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕೇಂದ್ರ ಸರ್ಕಾರವು ಅಸಹಕಾರ ತೋರುತ್ತಿದೆ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಅವರು ಹೇಳಿದ್ದಾರೆ.

Advertisement

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣ ವಿಚಾರದಲ್ಲಿ ಸರ್ಕಾರ ಈಗಾಗಲೇ ತನಿಖೆ ಆರಂಭಿಸಿದೆ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದು ವಿದೇಶದಿಂದ ಕರೆತಂದು ಬಂಧಿಸಲು ಕೇಂದ್ರ ಸಹಕಾರ ಕೊಡಬೇಕಿದೆ. ಅವರಿಂದಲೇ ನಮಗೆ ಸಹಕಾರ ಸಿಗುತ್ತಿಲ್ಲ ಎಂದರು.

ರಾಜ್ಯ ಕಾಂಗ್ರೆಸ್ ಸರಕಾರ ಪತನವಾಗಲಿದೆ ಎಂಬ ಮಹಾ ಸಿಎಂ ಏಕನಾಥ್ ಶಿಂಧೆ ಹೇಳಿಕೆ ವಿಚಾರ, ಬಿಜೆಪಿಗೆ ಸ್ವಂತ ಬಲದ ಮೇಲೆ ಗೆದ್ದ ಉದಾಹರಣೆಯಿಲ್ಲ. ರಾಜ್ಯದಲ್ಲಿ ಸಿಂಧೆಯಂಥ ಯಾರೂ ಇಲ್ಲ. ಈ ಬಾರಿ ರಾಜ್ಯದಲ್ಲಿ ಅಂತಹ ಪರಸ್ಥಿತಿ ನಿರ್ಮಾಣವಾಗಲ್ಲ. ಬಿಜೆಪಿಯವರು ಸುಳ್ಳುಗಾರರು, ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂಬುದು ರಾಜ್ಯ ಹಾಗೂ ದೇಶದಲ್ಲಿ ಗೊತ್ತಿದೆ. ಅವರು ಸುಳ್ಳು ಹೇಳುತ್ತಾರೆ ಎಂಬುದಕ್ಕೆ ನಾನೇ ಉದಾಹರಣೆ. ಬಿಜೆಪಿ ಸರಕಾರ ಮಾಡುವಾಗ ಏನ್ ಬೇಕಾದರೂ ಸುಳ್ಳು ಹೇಳಿ ಕರೆದುಕೊಂಡು ಹೋಗುತ್ತಾರೆ. ಆದರೆ ಯಾವ ಆಸೆಗಳನ್ನು ಈಡೇರಿಸುವುದಿಲ್ಲ. ನಮ್ಮ ಪಕ್ಷದ ಶಾಸಕರು ಹೋಗೋದಿಲ್ಲ. ಬಿಜೆಪಿಯವರು ಹಗಲುಗನಸು ಕಾಣೋದನ್ನು ಬಿಡಲಿ. ಯಾವುದೇ ಕಾರಣಕ್ಕೂ ಸರಕಾರ ಬದಲಾಗಲ್ಲ. ಶಿಂಧೆ ಹೇಳಿದರೂ ಅಷ್ಟೆ, ಮೋದಿ ಹೇಳಿದರೂ ಅಷ್ಟೆ ನಮ್ಮ ಸರಕಾರ ಬೀಳೋದಿಲ್ಲ ಎಂದರು.

ಬಿಜೆಪಿ ಸರಕಾರವಿದ್ದಾಗ ಕೊಲೆ, ರೇಪ್ ಆಗಿಲ್ವಾ ?
ಹುಬ್ಬಳ್ಳಿಯಲ್ಲಿ ಅಂಜಲಿ ಹತ್ಯೆ ವಿಚಾರ, ಇಂತಹ ಘಟನೆಗಳು ಆಗಬಾರದು. ಇಂತಹ ಘಟನೆಗಳನ್ನು ಖಂಡಿಸುತ್ತೇವೆ. ಅಂತಹವರ ಮೇಲೆ ಕ್ರಮ ವಹಿಸುತ್ತೇವೆ. ಕೆಲವೊಂದಿಷ್ಟು ಜನರು ದುಷ್ಟತನಕ್ಕೆ ಇಳಿದಿದ್ದಾರೆ.

ದುಷ್ಟರನ್ನು ಮಟ್ಟಹಾಕಲು ಸರ್ಕಾರ ಚರ್ಚೆ ನಡೆಸಿದೆ. ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಚರ್ಚೆ ಮಾಡಿದ್ದಾರೆ. ಇಂತಹ ಕೃತ್ಯಗಳನ್ನು ನಾವಾಗಲಿ, ಸರಕಾರವಾಗಲಿ ಸಹಿಸಿಕೊಳ್ಳುವುದಿಲ್ಲ. ಯುವತಿ ಕುಟುಂಬ ಮೊದಲೇ ದೂರು ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿ ವಿರುದ್ಧ ಸರಕಾರ ಈಗಾಗಲೇ ಕ್ರಮಕೈಗೊಂಡಿದೆ ಎಂದರಲ್ಲದೇ ಬಿಜೆಪಿ ಸರಕಾರವಿದ್ದಾಗಲೂ ಕೊಲೆಗಳಾಗಿವೆ. ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಕೊಲೆ, ರೇಪ್‌ಗಳು ಆಗಿಲ್ಲವಾ ? ಅವರ ಕಾಲದಲ್ಲಿ ಇಂತಹ ಘಟನೆಗಳು ನಡೆದಿವೆ ಎಂದ ಮಾತ್ರ ನಾವು ಅದನ್ನು ಸಮರ್ಥಿಸಿಕೊಳ್ಳುತ್ತೇವೆ ಎಂದಲ್ಲ. ಇಂತಹ ದುಷ್ಟರು ಎಲ್ಲ ಕಾಲದಲ್ಲೂ ಇರುತ್ತಾರೆ. ಅವರನ್ನು ಮಟ್ಟ ಹಾಕುವ ಕೆಲಸ ಮಾಡುತ್ತೇವೆ. ನಮ್ಮ ಕರ್ನಾಟಕ ಪೊಲೀಸ್ ಸ್ಟ್ರಾಂಗ್ ಇದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next