ಬೆಂಗಳೂರು: ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೆ ಬಂಧನ ಭೀತಿ ಎದುರಾಗಿದೆ.
2016ರಲ್ಲಿ ಬಿಡುಗಡೆಗೊಂಡು ಭರ್ಜರಿ ಯಶಸ್ಸು ಗಳಿಸಿದ್ದ ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿನ ಹಾಡೊಂದಕ್ಕೆ ಸಂಬಂಧಿಸಿದಂತೆ ಲಹರಿ ಆಡಿಯೋ ಸಂಸ್ಥೆ ರಕ್ಷಿತ್ ಶೆಟ್ಟಿ ಮಾಲಕತ್ವದ ಪರಮ್ವಾಹ್ ಸ್ಟುಡಿಯೋಸ್ ವಿರುದ್ಧ ದೂರು ದಾಖಲಿಸಿ ನ್ಯಾಯಾಲಯದ ಮೆಟ್ಟಿಲು ಏರಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ 9ನೇ ಎಸಿಎಂಎಂ ನ್ಯಾಯಾಲಯವು ನಟ ರಕ್ಷಿತ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೆ ಇದೇ ಫೆಬ್ರವರಿ 20ರಂದು ಸಮನ್ಸ್ ಜಾರಿ ಮಾಡಿತ್ತು. ಈ ಸಮನ್ಸ್ ಗೆ ಉತ್ತರಿಸಲು ವಿಫಲವಾದ ರಕ್ಷಿತ್ ಶೆಟ್ಟಿ ಅವರಿಗೆ ಇದೀಗ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಕಿರಿಕ್ ಪಾರ್ಟಿ ಚಿತ್ರದಲ್ಲಿ ಬರುವ ‘ಹೇ ಹೂ ಆರ್ ಯೂ..’ ಹಾಡಿನಲ್ಲಿ ರವಿಚಂದ್ರನ್ ಅಭಿನಯದ ‘ಶಾಂತಿ ಕ್ರಾಂತಿ’ ಚಿತ್ರದಲ್ಲಿ ಬರುವ ಹಾಡಿನ ಸಂಗೀತವನ್ನು ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ, ಈ ಹಾಡಿನ ಮಾಲಕತ್ವವನ್ನು ಹೊಂದಿರುವ ಲಹರಿ ಆಡಿಯೋ ಸಂಸ್ಥೆ ರಕ್ಷಿತ್ ಶೆಟ್ಟಿ ಒಡೆತನದ ಪರಮ್ವಾಹ್ ಸ್ಟುಡಿಯೋಸ್ ಮತ್ತು ಸಂಗೀತ ನಿರ್ದೇಶಕರ ವಿರುದ್ಧ ದೂರು ದಾಖಲಿಸಿತ್ತು.
ಈ ಪ್ರಕರಣದಲ್ಲಿ ಪರಮ್ವಾಹ್ ಸ್ಟುಡಿಯೋಸನ್ನು ಪ್ರಥಮ ಆರೋಪಿಯನ್ನಾಗಿಸಲಾಗಿದೆ ಮತ್ತು ನಟ್ ರಕ್ಷಿತ್ ಶೆಟ್ಟಿ ಹಾಗೂ ಕಿರಿಕ್ ಪಾರ್ಟಿ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರನ್ನು ಕ್ರಮವಾಗಿ ಎರಡು ಹಾಗೂ ಮೂರನೇ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ಲಹರಿ ಆಡಿಯೋ ಸಂಸ್ಥೆಯ ಪರ ವಕೀಲೆ ಯೋವಿನಿ ರಾಜೇಶ್ ಅವರು ವಕಾಲತ್ತು ವಹಿಸಿದ್ದಾರೆ.