ಮಂಗಳೂರು : ಖಾಸಗಿ ದಾವೆಯೊಂದಕ್ಕೆ ಸಂಬಂಧಿಸಿದಂತೆ ನಿವೃತ್ತ ಪೊಲೀಸ್ ಅಧಿಕಾರಿ ಜಯಂತ್ ಶೆಟ್ಟಿ ಅವರ ವಿರುದ್ಧ ಮಂಗಳೂರಿನ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯವು ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದೆ.
ಸಾಮಾಜಿಕ ಕಾರ್ಯಕರ್ತ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಕಬೀರ್ ಉಳ್ಳಾಲ… ಸುಮಾರು 14 ವರ್ಷದ ಹಿಂದೆ ಹೂಡಿದ ಖಾಸಗಿ ದಾವೆಯೊಂದಕ್ಕೆ ಸಂಬಂಧಿಸಿದಂತೆ ಜಯಂತ್ ಶೆಟ್ಟಿ ಅವರಿಗೆ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಉಳ್ಳಾಲದಲ್ಲಿ ಅಮಾಯಕರ ಮೇಲೆ ಪ್ರಹಾರ ನಡೆಸುತ್ತಿದ್ದುದನ್ನು ಪ್ರಶ್ನಿಸಿದ ತನ್ನನ್ನು 2008ರಲ್ಲಿ ಉಳ್ಳಾಲದಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಅಂದಿನ ಇನ್‌ಸ್ಪೆಕ್ಟರ್ ಜಯಂತ್ ಶೆಟ್ಟಿ ಬಂಧಿಸಿದ್ದರು. ಬಿಡುಗಡೆಗೊಂಡು ಇನ್‌ಸ್ಪೆಕ್ಟರ್‌ಜಯಂತ್ ಶೆಟ್ಟಿ ಮತ್ತು ಪಿಎಸ್‌ಐ ಶಿವಪ್ರಕಾಶ್ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಪ್ರಕರಣ ಹೈಕೋರ್ಟ್‌ವರೆಗೂ ಸಾಗಿತ್ತು. ಈ ಮಧ್ಯೆ ತನ್ನ ದೂರನ್ನು ಮಂಗಳೂರು ನ್ಯಾಯಾಲಯವು ವಜಾಗೊಳಿಸಿತ್ತು. ಆದರೆ ತಾನು ಸತತ ಹೋರಾಟ ನಡೆಸಿದುದರ ಫಲವಾಗಿ ಪ್ರಕರಣ ಮುಂದುವರೆದಿತ್ತು. ಶಿವಪ್ರಕಾಶ್ ಜಾಮೀನು ಪಡೆದಿದ್ದು ಜಯಂತ್ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜೂ.20ರಂದು ನ್ಯಾಯಾಲಯವು ಜಯಂತ್ ಶೆಟ್ಟಿಯ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ಕಬೀರ್ ತಿಳಿಸಿದ್ದಾರೆ.
ಇದನ್ನೂ ಓದಿ : ಒಳ ಉಡುಪಿನಲ್ಲಿ 19 ಲಕ್ಷ ರೂ. ಮೌಲ್ಯದ ಚಿನ್ನ ಅಕ್ರಮ ಸಾಗಾಟ ಪತ್ತೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಂತ್ ಶೆಟ್ಟಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೂ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ನ್ಯಾಯವಾದಿ ಎಸ್.ಎಸ್.ಖಾಝಿ ತಿಳಿಸಿದ್ದಾರೆ.