Advertisement

ಗ್ರಾಪಂ ನಾಮ ನಿರ್ದೇಶನಕ್ಕೆ ಭಾರಿ ಪೈಪೋಟಿ

09:50 AM May 26, 2020 | Suhan S |

ಬಾಗಲಕೋಟೆ: ಅವಧಿ ಪೂರ್ಣಗೊಂಡ ಗ್ರಾಪಂಗಳಿಗೆ ಆಡಳಿತ ಸಮಿತಿ ರಚಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಸಮಿತಿಯಲ್ಲಿ ತಮ್ಮನ್ನು ಸೇರಿಸಲು ಹಾಲಿ ಸದಸ್ಯರು ಸೇರಿದಂತೆ ಹೊಸಬರು ಪೈಪೋಟಿ ನಡೆಸಿದ್ದಾರೆ.

Advertisement

ಕೋವಿಡ್ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಸದ್ಯ ಗ್ರಾಪಂ ಚುನಾವಣೆ ಮುಂದೂಡಲಾಗಿದೆ. ಹೀಗಾಗಿ ಸದ್ಯ ಚುನಾವಣೆ ನಡೆಸದೇ ತಾತ್ಕಾಲಿಕವಾಗಿ ಆಯಾ ಗ್ರಾಪಂಗಳಿಗೆ ಆಡಳಿತ ಸಮಿತಿ ರಚಿಸಲು ಮುಂದಾಗಿದೆ. ಈ ಪ್ರಕ್ರಿಯೆಗೆ ಮುಖ್ಯಸ್ಥರನ್ನಾಗಿ ಸರ್ಕಾರ ಜಿಲ್ಲಾಧಿಕಾರಿಯನ್ನು ನೇಮಕ ಮಾಡಿದ್ದು, ಜಿಲ್ಲಾಧಿಕಾರಿಗಳು ಮೀಸಲಾತಿ ಹಾಗೂ ಗ್ರಾಪಂ ಸದಸ್ಯರ ಸಂಖ್ಯೆಗನುಗುಣವಾಗಿ ಪಂಚಾಯಿತಿಗಳಿಗೆ ಆಡಳಿತ ಮಂಡಳಿ ನೇಮಿಸುವ ಅಧಿಕಾರ ಹೊಂದಿದ್ದಾರೆ.

ಜಿಲ್ಲೆಯ ಹಲವು ಗ್ರಾಪಂಗಳ ಅಧಿಕಾರವಧಿ ಮೇ 15ಕ್ಕೆ ಪೂರ್ಣಗೊಂಡಿದೆ. ಇನ್ನೂ ಕೆಲ ಪಂಚಾಯಿತಿಗಳ ಅವಧಿ ಜೂನ್‌ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಆ ವೇಳೆಗೆ ಹಾಲಿ ಇರುವ ಸದಸ್ಯರು ಮಾಜಿಗಳಾಗಿ, ಹೊಸ ಆಡಳಿತ ಮಂಡಳಿ ಬರಲಿದೆ.  ಚುನಾವಣೆ ನಡೆಯದೇ, ಮತದಾರರ ಮನೆ ಮನೆಗೂ ಹೋಗದೇ, ಯಾವುದೇ ಖರ್ಚು ಮಾಡದೇ ಮುಂದಿನ ಚುನಾವಣೆವರೆಗೆ ಆಡಳಿತ ಮಂಡಳಿ ಸದಸ್ಯರಾಗಲು ಜಿಲ್ಲೆಯಲ್ಲಿ ಭಾರಿ ಪೈಪೋಟಿ ನಡೆಯುತ್ತಿದ್ದು, ಇದು ಆಡಳಿತ ಪಕ್ಷದ ಜನಪ್ರತಿನಿಧಿಗಳಿಗೆ ಬಿಸಿ ತುಪ್ಪವಾಗಿಯೂ ಪರಿಣಮಿಸಿದೆ ಎನ್ನಲಾಗಿದೆ.

ಸದಸ್ಯರ ಸಂಖ್ಯೆಗನುಗುಣವಾಗಿ ನೇಮಕ: ಜಿಲ್ಲೆಯಲ್ಲಿ ಒಟ್ಟು 198 ಗ್ರಾಪಂಗಳಿವೆ. ಆಯಾ ಗ್ರಾಪಂಗಳಿಗೆ ಸದ್ಯ ಎಷ್ಟು ಜನ ಸದಸ್ಯರಿದ್ದಾರೋ ಅಷ್ಟೇ ವ್ಯಕ್ತಿಗಳನ್ನು ಆಡಳಿತ ಮಂಡಳಿ ಸದಸ್ಯರನ್ನಾಗಿ ಮಾಡಲಾಗುತ್ತದೆ. ಮುಖ್ಯವಾಗಿ ಈಗಾಗಲೇ ಇರುವ ಸಾಮಾನ್ಯ, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ವರ್ಗಗಳ ಮೀಸಲಾತಿ ಸದಸ್ಯ ಸ್ಥಾನಗಳಿಗೆ ಯಾವುದೇ ಧಕ್ಕೆ ಆಗದಂತೆ ಆ ವರ್ಗಕ್ಕೆ ಮೀಸಲಿರುವ ಸ್ಥಾನಗಳಿಗೆ ಅದೇ ವರ್ಗದ ಹೊಸ ಸದಸ್ಯರನ್ನು ನೇಮಿಸಲು ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿದೆ.

ಮೂರರಲ್ಲಿ ಒಂದು ಆಯ್ಕೆ: ಕೋವಿಡ್ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಗ್ರಾಪಂ ಚುನಾವಣೆ ಮುಂದೂಡುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರದ ಎದುರು ಮೂರು ಆಯ್ಕೆಗಳಿದ್ದವು. ಹಾಲಿ ಇರುವ ಆಡಳಿತ ಮಂಡಳಿ ಮುಂದುವರಿಸುವುದು, ಆಡಳಿತಾಧಿಕಾರಿಗಳ ನೇಮಕ ಮಾಡುವುದು ಇಲ್ಲವೇ ಆಡಳಿತ ಮಂಡಳಿಗೆ ನಾಮ ನಿರ್ದೇಶನ ಮಾಡುವುದು ಸಹಿತ ಮೂರು ಆಯ್ಕೆಗಳಲ್ಲಿ ಸರ್ಕಾರ, ಹೊಸ ಆಡಳಿತ ಮಂಡಳಿ ಆಯ್ಕೆಗೆ ತೀರ್ಮಾನ ಕೈಗೊಂಡಿದೆ. ಈ ಕುರಿತು ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚೆ ನಡೆದು ಅಂತಿಮ ನಿರ್ಧಾರವೂ ಕೈಗೊಳ್ಳಲಾಗಿದೆ. ಅದಕ್ಕೂ ಮುಂಚೆ ಕಾನೂನು ಇಲಾಖೆ ಹಾಗೂ ಸರ್ಕಾರದ ಅಡ್ವೋಕೇಟ್‌ ಜನರಲ್‌ ಅವರ ಅಭಿಪ್ರಾಯವನ್ನೂ ಪಡೆಯಲಾಗಿದೆ. ಪಂಚಾಯತ್‌ ರಾಜ್‌ ಅಧಿನಿಯಮ ಕಲಂ 321ರ ಅಡಿಯಲ್ಲಿ ಮುಂದಿನ ಚುನಾವಣೆ ನಡೆಯುವವರೆಗೂ ತಾತ್ಕಾಲಿಕವಾಗಿ ಆಡಳಿತ ಸಮಿತಿ ರಚನೆಗೆ ಅವಕಾಶವಿದ್ದು, ಆ ಹಿನ್ನೆಲೆಯಲ್ಲಿ ಜಿಲ್ಲೆಯ 198 ಗ್ರಾಪಂಗಳಿಗೂ ಹೊಸ ಆಡಳಿತ ಸಮಿತಿ ರಚಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

Advertisement

ಜಿಲ್ಲೆಯಲ್ಲಿವೆ 198 ಗ್ರಾಪಂ: ಬಾದಾಮಿ-42, ಬಾಗಲಕೋಟೆ-30, ಬೀಳಗಿ-24, ಹುನಗುಂದ-35, ಜಮಖಂಡಿ-38 ಹಾಗೂ ಮುಧೋಳ ತಾಲೂಕಿನಲ್ಲಿ 29 ಗ್ರಾಮ ಪಂಚಾಯಿತಿಗಳಿವೆ. ಪ್ರತಿಯೊಂದು ಗ್ರಾಪಂಗೆ 9ರಿಂದ 35ರವರೆಗೆ (ಜನಸಂಖ್ಯೆ ಅನುಗುಣವಾಗಿ) ಸದಸ್ಯರಿದ್ದು, ಆಯಾ ಸದಸ್ಯರ ಸ್ಥಾನಗಳಿಗೆ ಹೊಸದಾಗಿ ಆಡಳಿತ ಮಂಡಳಿ ಸದಸ್ಯರಾಗಿ ಹೊಸದಾಗಿ ನೇಮಕಗೊಳ್ಳಲಿದ್ದಾರೆ. ತೀವ್ರ ಪೈಪೋಟಿ: ಗ್ರಾಪಂ ಚುನಾವಣೆಗೆ ಮಾನಸಿಕವಾಗಿ ಸಿದ್ಧತೆಯಲ್ಲಿದ್ದ ಹೊಸಬರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಆಡಳಿತ ಪಕ್ಷದ ಜನಪ್ರತಿನಿಧಿಗಳ ಬೆನ್ನಿಗೆ ಬಿದ್ದು ನಾಮ ನಿರ್ದೇಶನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಆದರೆ ಪಕ್ಷಾತೀತವಾಗಿ ನೇಮಕವಾಗಬೇಕಾದ ಆಡಳಿತ ಸಮಿತಿಗೆ ಅಧಿಕೃತವಲ್ಲದಿದ್ದರೂ ಪಕ್ಷದ ಬೆಂಬಲಿಗರೇ ಹೆಚ್ಚು ನೇಮಕಗೊಳ್ಳುವ ಆತಂಕವಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಗ್ರಾಪಂಗಳಿಗೆ ಹೊಸದಾಗಿ ಆಡಳಿತ ಸಮಿತಿ ರಚಿಸುವ ಕುರಿತು ಸರ್ಕಾರದಿಂದ ಸ್ಪಷ್ಟ ನಿರ್ದೇಶನ, ನಿಯಮಾವಳಿ ಬಂದಿಲ್ಲ.ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.-ಗಂಗೂಬಾಯಿ ಮಾನಕರ, ಜಿಪಂ ಸಿಇಒ.

 

 – ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next