ವರದಿ: ಭೆ„ರೋಬಾ ಕಾಂಬಳೆ
ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಸೋಮವಾರದಂದು ಭರಾಟೆ ಜೋರಾಗಿತ್ತು. ರಾಷ್ಟ್ರೀಯ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉಮೇದುವಾರಿಕೆ ತುಂಬಿದರು. ಕೆಲ ದಿನಗಳಿಂದ ಮಸುಕಾಗಿದ್ದ ಚುನಾವಣಾ ಕಾವು ಸೋಮವಾರ ರಂಗು ಪಡೆದುಕೊಂಡಿತ್ತು. ಶನಿವಾರದವರೆಗೆ ಕೇವಲ 76 ಮಂದಿಯಷ್ಟೇ ನಾಮಪತ್ರ ಸಲ್ಲಿಸಿದ್ದರು.
ಸೋಮವಾರ ಕೊನೆಯ ದಿನವಾಗಿದ್ದರಿಂದ ಚುನಾವಣಾಧಿಕಾರಿಗಳ ಕಾರ್ಯಾಲಯಕ್ಕೆ ತಂಡೋಪ ತಂಡವಾಗಿ ಬೆಂಬಲಿಗರು ಆಗಮಿಸಿದ್ದರು. 100 ಮೀಟರ್ ಅಂತರದಲ್ಲಿಯೇ ಬ್ಯಾರಿಕೇಡ್ ಹಾಕಿ ಜನರನ್ನು ತಡೆಯಲಾಗಿತ್ತು. ಸೂಚಕರು ಮತ್ತು ಅಭ್ಯರ್ಥಿಯನ್ನು ಮಾತ್ರ ಒಳಗೆ ಬಿಡಲಾಗುತ್ತಿತ್ತು. ಪಕ್ಷೇತರ ಅಭ್ಯರ್ಥಿಗೆ ಆರು ಜನ ಸೂಚಕರು ಹಾಗೂ ಪಕ್ಷದ ಬಿ ಫಾರಂ ಇದ್ದರೆ ಒಬ್ಬರು ಸೂಚಕರ ಸಹಿ ಬೇಕಿತ್ತು. ಅದರಂತೆ ಅಭ್ಯರ್ಥಿಗಳು ತಮಗೆ ಬೇಕಾದವರನ್ನು ಕರೆಯಿಸಿ ಸೂಚಕರಾಗಿ ಸಹಿ ಪಡೆದುಕೊಂಡು ನಾಮಪತ್ರ ಸಲ್ಲಿಸಿದರು.
ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ತಮ್ಮ ಪ್ರಭಾವ ಬಳಸಿಕೊಂಡು ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಪಡೆದವರು ಉತ್ಸಾಹದಿಂದ ಬಂದು ಕಚೇರಿಯತ್ತ ಹೆಜ್ಜೆ ಹಾಕಿದರು. ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳು ಚುನಾವಣಾಧಿಕಾರಿ ಕಚೇರಿ ಸುತ್ತಲೂ ಕಂಡು ಬಂದರು. ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ರವಿವಾರ ಮಧ್ಯರಾತ್ರಿ ಘೋಷಣೆ ಆಗುತ್ತಿದ್ದಂತೆ ಸೋಮವಾರ ಬೆಳಗ್ಗೆಯಿಂದ ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸುವ ಭರಾಟೆ ಜೋರಾಗಿತ್ತು. ಅಭ್ಯರ್ಥಿಗಳು ಮೊದಲೇ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಬಿ ಫಾರಂ ತೆಗೆದುಕೊಂಡು ಬಂದು ನಾಮಪತ್ರ ಸಲ್ಲಿಸಿದರು.
ಟಿಕೆಟ್ ಸಿಗದವರು ಪಕ್ಷೇತರ ರಾಗಿ ನಾಮಪತ್ರ ಸಲ್ಲಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಾಹ್ನದ ಹೊತ್ತಿಗೆ 40ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದ ಬಿಜೆಪಿಯ ಬಿ ಫಾರಂ ಪಡೆದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಇನ್ನೂ ಕೆಲವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು. ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳು ತಮ್ಮ ಪಕ್ಷದ ಶಲ್ಯಾ, ಟೊಪ್ಪಿಗೆ ಹಾಕಿಕೊಂಡು ಬಂದಿದ್ದರು. ಚುನಾವಣಾ ಕಣದಲ್ಲಿ ನಾ ಮುಂದು ತಾ ಮುಂದು ಎಂಬಂತೆ ಅಭ್ಯರ್ಥಿಗಳು ಬೆಳಗ್ಗೆ 11 ಗಂಟೆಯ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.