ಬೆಂಗಳೂರು: ಶಬ್ದ ಮಾಲಿನ್ಯ ಉಂಟು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸೂಚಿಸಿ ನ್ಯಾಯಾಲಯ ಹೊರಡಿಸಿದ ಆದೇಶ ಜಾರಿ ಸಂಬಂಧ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಕುರಿತು ಇಂದಿರಾನಗರ ಪ್ರದೇಶದಲ್ಲಿ 80ಕ್ಕೂ ಹೆಚ್ಚು ಬಾರ್‌ಗಳಿದ್ದು, ಅವುಗಳಿಂದ ಮಿತಿ ಮೀರಿದ ಶಬ್ಧ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾ.ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಸಂಬಂಧ ವೈಯುಕ್ತಿಕವಾಗಿ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಫೆ.14ಕ್ಕೆ ಮುಂದೂಡಿತು.
ಪರಿಸರ ಸಂರಕ್ಷಣೆ ಕಾಯ್ದೆ-1986ರ ಸೆಕ್ಷನ್ 15ರ ಪ್ರಕಾರ ಶಬ್ದ ಮಾಲಿನ್ಯ ಉಂಟು ಮಾಡಿದವರ ವಿರುದ್ಧ ಕಾನೂನು ಪ್ರಕಾರ ದೂರು ದಾಖಲಿಸಿ ಶಿಕ್ಷೆ ವಿಧಿಸಬಹುದಾಗಿದೆ. ಸೆಕ್ಷನ್ 19ರ ಪ್ರಕಾರ ಶಬ್ದ ಮಾಲಿನ್ಯ ಉಂಟು ಮಾಡಿದವರ ವಿರುದ್ಧ ಕೇಂದ್ರ ಸರ್ಕಾರ, ಸರ್ಕಾರದ ಪ್ರಾಧಿಕಾರ, ಸರ್ಕಾರಿ ಅಧಿಕಾರಿಯು ಕಾನೂನು ಪ್ರಕಾರ ದೂರು ದಾಖಲಿಸಬೇಕಿದೆ. ಪರಿಸರ ಸಂರಕ್ಷಣಾ ಕಾಯ್ದೆ-1986ರ ಸೆಕ್ಷನ್ 19 ಅನ್ನು ಜಾರಿ ಮಾಡದ ಹೊರತು ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಜಾರಿಗೆ ಮಾಡಲು ಸಾಧ್ಯವಿಲ್ಲ.
ಆದ್ದರಿಂದ ಸೆಕ್ಷನ್ 19ರ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ತಿಳುವಳಿಕೆೆ ಮೂಡಿಸಬೇಕಿದ್ದು,. ಶಬ್ದ ಮಾಲಿನ್ಯ ಉಂಟು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿ ಒಂದು ತಿಂಗಳಲ್ಲಿ ನಿರ್ದೇಶನ ಹೊರಡಿಸಬೇಕು ಎಂದು ಸರ್ಕಾರಕ್ಕೆ 2019ರ ಸೆ.19ರಂದು ಆದೇಶಿಸಿತ್ತು. ಅಂತಹದೆ ಆದೇಶವನ್ನು 2019ರ ನ.11ರಂದು ನೀಡಲಾಗಿತ್ತು.
ಸೋಮವಾರ ಅರ್ಜಿ ವಿಚಾರಣೆ ವೇಳೆ ಸರ್ಕಾರವು ಪ್ರಮಾಣಪತ್ರ ಸಲ್ಲಿಸಿತ್ತು. ಆ ಪ್ರಮಾಣಪತ್ರದಲ್ಲಿ ಹೈಕೋರ್ಟ್‌ನ ಈ ಎರಡು ಆದೇಶವನ್ನು ರಾಜ್ಯ ಸರ್ಕಾರ ಪಾಲನೆ ಮಾಡಿರುವ ಬಗ್ಗೆ ಯಾವುದೇ ವಿವರಣೆ ಇರಲಿಲ್ಲ. ಅದರಿಂದ ಬೇಸರಗೊಂಡ ಹೈಕೋರ್ಟ್, ನ್ಯಾಯಾಲಯದ ಆದೇಶವನ್ನು ಸರ್ಕಾರ ಪಾಲನೆ ಮಾಡಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ನೀಡುವುದು ಸಮಯ ವ್ಯರ್ಥ ಮಾಡಿದಂತಾಗುತ್ತದೆ.
ಹೀಗಾಗಿ ನ್ಯಾಯಾಲಯದ ಈ ಆದೇಶ ಹಾಗೂ ಪ್ರಕರಣ ಕುರಿತು ದಾಖಲೆಗಳನ್ನು ಪೊಲೀಸ್ ಮಹಾ ನಿರ್ದೇಶಕರ ಮುಂದಿಡಬೇಕು. ಎಲ್ಲವನ್ನು ಪರಿಶೀಲಿಸಿದ ನಂತರ ನ್ಯಾಯಾಲಯದ ಆದೇಶ ಪಾಲಿಸುವ ಕುರಿತಾಗಿ ಪೊಲೀಸ್ ಮಹಾ ನಿರ್ದೇಶಕರು ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.