Advertisement

ನೆರೆ ಪ್ರದೇಶಕ್ಕೆ ನೋಡಲ್ ಅಧಿಕಾರಿ ಭೇಟಿ

01:28 PM Aug 18, 2019 | Team Udayavani |

ಹಾವೇರಿ: ಅತಿವೃಷ್ಠಿ ಹಾಗೂ ನೆರೆಯಿಂದ ಹಾನಿಯಾಗಿರುವ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಪರ ಮುಖ್ಯ ಕಾರ್ಯರ್ಶಿ ಹಾಗೂ ಅತಿವೃಷ್ಠಿ ಹಾಗೂ ನೆರೆ ಪರಿಹಾರ ಜಿಲ್ಲಾ ನೋಡಲ್ ಅಧಿಕಾರಿ ವಿ.ಮಂಜುಳಾ ಭೇಟಿ ನೀಡಿ ವೀಕ್ಷಿಸಿದರು.

Advertisement

ನಾಗೇಂದ್ರನಮಟ್ಟಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತನಾಡಿದರು. ಪರಿಹಾರ ಕೇಂದ್ರಗಳ ಸೌಲಭ್ಯಗಳ ಕುರಿತಂತೆ ಪರಿಶೀಲನೆ ನಡೆಸಿದರು. ಶುದ್ಧ ಕುಡಿಯುವ ನೀರು ಹಾಗೂ ವೈದ್ಯಕೀಯ ಸೌಕರ್ಯ ಕುರಿತಂತೆ ಪರಿಶೀಲಿಸಿ ವ್ಯವಸ್ಥೆ ಕುರಿತಂತೆ ಸಂತ್ರಸ್ತರಿಂದ ಮಾಹಿತಿ ಪಡೆದರು.

ಬೆಂಗಳೂರು-ಪುಣೆ ಹೆದ್ದಾರಿಯ ವರದಾ ಸೇತುವೆಯ ಬಳಿ ನದಿ ಪ್ರವಾಹದಿಂದ ಕೃಷಿ ಬೆಳೆಗೆ ನೀರು ನುಗ್ಗಿ ಹಾನಿಯಾಗಿರುವ ಕುರಿತಂತೆ ಪರಿಶೀಲನೆ ನಡೆಸಿದರು. ಕುಣಿಮೆಳ್ಳಿಹಳ್ಳಿ ಹಾಗೂ ಹರವಿ ಮಾರ್ಗ ಮಧ್ಯದ ಹಳ್ಳದ ನೀರು ಹತ್ತಿ ಮತ್ತು ಕಬ್ಬು ಬೆಳೆಗೆ ನುಗ್ಗಿ ಬೆಳೆ ಹಾನಿ ಮಾಡಿರುವ ಕುರಿತಂತೆ ಪರಿಶೀಲನೆ ನಡೆಸಿದ ಅವರು ಹೊಲದಲ್ಲಿ ನಿಂತ ನೀರು ಬತ್ತಿಹೋದ ಮೇಲೆ ಪರ್ಯಾಯ ಬೆಳೆ ಬೆಳೆಯುವ ಕುರಿತಂತೆ ರೈತರಿಗೆ ಅಗತ್ಯ ಮಾರ್ಗದರ್ಶನ ಮಾಡುವಂತೆ ಸೂಚನೆ ನೀಡಿದರು.

ಅಡಿಕೆ, ಬಾಳೆ ತೋಟದಲ್ಲಿ ನಿಂತ ನೀರು ಬಸಿದು ಹೋಗುವಂತೆ ಕಾಲುವೆ ನಿರ್ಮಾಣಕ್ಕೆ ರೈತರಿಗೆ ಮಾರ್ಗದರ್ಶನ ನೀಡಿ ಸಾಧ್ಯವಾದಷ್ಟು ಬೆಳೆ ಉಳಿಸಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು. ಹೊಸ ಕೂಡಲ ಗ್ರಾಮದ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ಊಟ, ವಸತಿ, ಆರೋಗ್ಯ, ಕುಡಿಯುವ ನೀರಿನ ಕುರಿತಂತೆ ಸಂತ್ರಸ್ತ ಮಹಿಳೆಯರಿಂದ ಮಾಹಿತಿ ಪಡೆದರು. ಕುಡಿಯುವ ನೀರಿನ ಕಾರಣಕ್ಕಾಗಿ ಯಾವುದೇ ಕಾರಣಕ್ಕೂ ಸಾಂಕ್ರಾಮಿಕ ರೋಗಗಳು ಹರಡಬಾರದು. ಕುಡಿಯುವ ನೀರಿನ ಶುದ್ಧೀಕರಣ ಹಾಗೂ ಕುದಿಸಿದ ನೀರನ್ನು ಬಳಕೆಮಾಡಲು ಜಾಗೃತಿ ಮೂಡಿಸಬೇಕು. ವೈದ್ಯ ತಂಡ ನಿರಂತರವಾಗಿ ತಪಾಸಣೆ ಮಾಡಬೇಕು ಎಂದು ಸೂಚಿಸಿದರು.

ಸ್ಥಳಾಂತರಗೊಳ್ಳಿ: ಹಳೆ ಕೂಡಲ ಗ್ರಾಮಕ್ಕೆ ಭೇಟಿ ನೀಡಿ ಮನೆ ಕುಸಿತಗೊಂಡಿರುವುದನ್ನು ಪರಿಶೀಲಿಸಿದರು. ತಂಡವಾಗಿ ತಕ್ಷಣವೇ ವರದಿ ಸಿದ್ಧಪಡಿಸಿ ಸಲ್ಲಿಸಬೇಕು. ಸಂತ್ರಸ್ತರಿಗೆ ಪರಿಹಾರವನ್ನು ಮಾರ್ಗಸೂಚಿಯಂತೆ ತಕ್ಷಣವೇ ನೀಡಬೇಕು ಎಂದು ತಹಶೀಲ್ದಾರ್‌ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಗ್ರಾಮಸ್ಥರೊಂದಿಗೆ ಮಾತನಾಡಿ, ಹೊಸ ಕೂಡಲ ಗ್ರಾಮದಲ್ಲಿ ಈಗಾಗಲೇ ತಮಗೆ ನಿವೇಶನ ನೀಡಿದೆ. ಸರ್ಕಾರ ನಿಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ. ಅಲ್ಲಿಯೇ ಹೊಸ ಮನೆ ನಿರ್ಮಾಣ ಮಾಡಿಕೊಳ್ಳಬೇಕು. ಆದರೂ ತಾವು ಅಲ್ಲಿಗೆ ಹೋಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಪದೇ ಪದೇ ಸರ್ಕಾರದ ಸೌಲಭ್ಯಗಳು ಕೊಡಲು ಸಾಧ್ಯವಾಗುವುದಿಲ್ಲ ಎಂದು ಮನವರಿಕೆಮಾಡಿಕೊಟ್ಟರು. ಈಗಾಗಲೇ ಹೊಸ ಗ್ರಾಮದಲ್ಲಿ ನಿವೇಶನ ಪಡೆದು ಅಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳದವರ ಪಟ್ಟಿ ಮಾಡಿ ಹಾಗೂ ಯಾರಿಗೆ ನಿವೇಶನವಿಲ್ಲವೋ ಅಂಥವರ ವಿವರ ಸಲ್ಲಿಸಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿ ಮುಖಂಡರು ವಿವರ ನೀಡಿ 1961-62ರಲ್ಲಿ ಪ್ರವಾಹ ಬಂದಾಗ ಸ್ಥಳಾಂತರಿಸಿ ಹೊಸ ಕೂಡಲದಲ್ಲಿ ನಿವೇಶನ ನೀಡಲಾಗಿತ್ತು. ಬಹಳ ಜನ ಆ ನಿವೇಶನವನ್ನು ಮಾರಾಟ ಮಾಡಿ ಅದೇ ಹಳೆಯ ನಿವೇಶನದಲ್ಲಿ ಮನೆ ನಿರ್ಮಾಣಮಾಡಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಕಾರಣದಿಂದ ಗ್ರಾಮ ಪಂಚಾಯಿತಿಯಿಂದ ತೀರ್ಮಾನ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಮನೆ ಮಂಜೂರಾಗುವ ಫಲಾನುಭವಿಗಳು ಕಡ್ಡಾಯವಾಗಿ ಹೊಸ ಗ್ರಾಮದಲ್ಲೇ ಮನೆ ನಿರ್ಮಾಣ ಮಾಡಿಕೊಳ್ಳಲು ನಿರ್ಣಯಿಸಲಾಗಿದೆ ಎಂದು ವಿವರಿಸಿದರು. ಬಂಕಾಪುರ ಸೇರಿದಂತೆ, ಶಿಗ್ಗಾವಿ-ಸವಣೂರ ಸಂತ್ರಸ್ತ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ, ಆಯಾ ತಾಲೂಕಾ ತಹಶೀಲ್ದಾರ್‌, ಕೃಷಿ ಇಲಾಖಾ ಅಧಿಕಾರಿಗಳು, ತಾಪಂ ಇಒಗಳು, ಪಿಡಿಒಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next