ಶಿಗ್ಗಾವಿ: ಹಾವೇರಿ ಜಿಲ್ಲೆಯಲ್ಲಿ ಟೆಕ್ಸ್‌ಟೈಲ್ (ಜವಳಿ ಪಾರ್ಕ್)ಉದ್ಯಮ ಆರಂಭಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜವಳಿ ಪಾರ್ಕ್ ನಿರ್ಮಾಣಕ್ಕೆ ಅವಶ್ಯಕ ಮೂಲಭೂತ ಸೌಲಭ್ಯಗಳು, ವಿವಿಧ ಉತ್ಪಾದನಾ ಹಂತದ ಕಚ್ಚಾ ಪದಾರ್ಥಗಳ ಸಂಗ್ರಹಕ್ಕೆ ಜಾಗ, ನೂಲು ತಯಾರಿಕೆ, ಒಣಗಿಸುವಿಕೆ, ಉತ್ಪಾದನೆಯ ಎಲ್ಲಾ ಹಂತದ ಕಾರ್ಯಗಳಿಗೆ ಬೇಕಾದಷ್ಟು ಸೌಲಭ್ಯ ಅಲ್ಲದೇ, ಸಿದ್ಧವಸ್ತು ಮಾರ್ಕೆಟಿಂಗ್ ವ್ಯವಸ್ಥೆಗೆ ಅವಶ್ಯಕ ಜಾಗ, ಪಾರ್ಕಿಂಗ್‌ಗೆ ಜಿಲ್ಲಾಧಿಕಾರಿಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಮುಂಗಡ ಪತ್ರದಲ್ಲೂ ಸರ್ಕಾರ ಅಭಿವೃದ್ಧಿಗೆ ಅನುದಾನ ಮೀಸಲಿರಿಸಲಿದೆ. ಬರುವ ವರ್ಷ ಎಲ್ಲಾ ಕೆಲಸ ಪೂರ್ಣಗೊಳಿಸಲಾಗುವುದು. ಇದರಿಂದ ಉದ್ಯಮದ ಜತೆಗೆ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಸೃಷ್ಟಿ ಆಗಲಿದೆ ಎಂದರು.
ಶರೀಫ್ ಶಿವಯೋಗಿಗಳ ಪ್ರಾಧಿಕಾರ ರಚಿಸುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸ ಪ್ರಾ ಧಿಕಾರ ರಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದರು. ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಶ್ರದ್ಧಾಕೇಂದ್ರ ಶಿಶುವಿನಾಳ ಸಂತ ಶರೀಫ್‌ಶಿವಯೋಗಿಗಳ ಗದ್ದುಗೆಗೆ 5ಕೋಟಿ ರೂ. ಅನುದಾನ ನೀಡಲು ಡಿಪಿಆರ್‌ಗೆ ಅನುಮೋದನೆ ಸಲ್ಲಿಸಲಾಗಿದ್ದು, ಅಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುವುದು ಎಂದರು.
ಸಣ್ಣ ನೀರಾವರಿ ಇಲಾಖೆಗೆ 30 ಕೋಟಿ ಅನುದಾನ ನೀಡಲಾಗಿದ್ದು, ವಿವಿಧ ಹಂತದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಅಲ್ಲದೇ ಮೂರು ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಮಧ್ಯಭಾಗದ ಹಳೇ ಬಸ್ ನಿಲ್ದಾಣದಲ್ಲಿ ಹೊಸ ವಿನ್ಯಾಸದಲ್ಲಿ ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಲಿವೆ. ಜತೆಗೆ ಬಸ್ ನಿಲುಗಡೆಗೂ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಪಟ್ಟಣದಲ್ಲಿ ಕಿತ್ತೂರು ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ ಜತೆಗೆ ರಾಯಣ್ಣನ ಪ್ರತಿಮೆ ಸ್ಥಾಪಿಸಲಾಗುವುದು. ಡಾ| ಅಂಬೇಡ್ಕರ್, ಬೇರೆ ಮಹಾತ್ಮರು, ದಾರ್ಶನಿಕರ ಮೂರ್ತಿಪ್ರತಿಷ್ಠಾಪನೆಯ ಚರ್ಚೆಗಳಿದ್ದು, ಇನ್ನೂ ಪೂರ್ಣಗೊಂಡಿಲ್ಲ ಎಂದು ಬೊಮ್ಮಾಯಿ ತಿಳಿಸಿದರು.