ಹುಬ್ಬಳ್ಳಿ: ಇಲ್ಲಿನ ಕ್ಲಬ್ ರಸ್ತೆಯಲ್ಲಿರುವ ಕೋಟಕ್ ಮಹೀಂದ್ರಾ ಬ್ಯಾಂಕ್‌ನಿಂದ ರೈತನಿಗೆ ಎನ್‌ಒಸಿ ನೀಡಲು ಸತಾಯಿಸುತ್ತಿರುವುದನ್ನು ಖಂಡಿಸಿ ಶುಕ್ರವಾರ ಹಾವೇರಿ ಜಿಲ್ಲೆ ರಾಣಿಬೆನ್ನೂರ ತಾಲೂಕು ಮಾಗೂಡ ಗ್ರಾಮದ ರೈತರು ಇಲ್ಲಿನ ಬ್ಯಾಂಕ್ ಶಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಾಗೂಡ ಗ್ರಾಮದ ಬಸನಗೌಡ ಬ್ಯಾಳಪ್ಪನವರ ಎನ್ನುವ ರೈತ ಕಳೆದ 2011ರಲ್ಲಿ ಟ್ರಾಕ್ಟರ್ ಖರೀದಿಗೆ ಎಂದು 4 ಲಕ್ಷ ರೂ. ಸಾಲ ಪಡೆದಿದ್ದರು. 2015ರ ವರೆಗೆ ಅಸಲು ಬಡ್ಡಿ ಸೇರಿದಂತೆ ಬ್ಯಾಂಕ್‌ಗೆ 5.97 ಲಕ್ಷ ರೂ.ಗಳನ್ನು ಪಾವತಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ 2500 ರೂ. ತುಂಬಿದರೆ ಎನ್‌ಒಸಿ ನೀಡುತ್ತೇವೆ ಎಂದು ಹೇಳಿದ ಕೋಟಕ್ ಬ್ಯಾಂಕ್‌ನವರು ಅವನಿಗೆ ಎನ್‌ಒಸಿ ನೀಡದೆ ಅಲೆದಾಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಬ್ಯಾಂಕ್‌ಗೆ ಹಲವು ಬಾರಿ ಬಂದರೂ ಸ್ಪಂದನೆ ತೋರದ ಬ್ಯಾಂಕ್‌ನವರು ಕಳೆದ ಎರಡು ತಿಂಗಳ ಹಿಂದೆ ಕೋರ್ಟ್ ಮೂಲಕ ಇನ್ನು 65 ಸಾವಿರ ರೂ. ಹಣ ಸಂದಾಯ ಮಾಡಬೇಕು ಎಂದು ನೋಟಿಸ್ ಜಾರಿ ಮಾಡಿದ್ದಾರೆ.
ಇದರಿಂದ ಬೇಸರಗೊಂಡ ರೈತ ಬಸನಗೌಡ ರೈತ ಸಂಘದ ಮುಖಂಡರಿಗೆ ಮಾಹಿತಿ ನೀಡಿದ್ದು, ಶುಕ್ರವಾರ ನಗರಕ್ಕೆ ಆಗಮಿಸಿದ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಜೆವರೆಗೂ ಬ್ಯಾಂಕ್‌ನಲ್ಲಿ ಕುಳಿತು ಪ್ರತಿಭಟನೆ ನಡೆಸಿ ರೈತರು ಕೊನೆಗೂ ಎನ್‌ಒಸಿ ಪಡೆಯುವ ಕುರಿತು ಲಿಖೀತ ಪತ್ರ ಪಡೆದುಕೊಂಡು ಬ್ಯಾಂಕ್‌ನಿಂದ ತೆರಳಿದರು. ಆಗಸ್ಟ್ 10ರಂದು ರೈತನಿಗೆ ಎನ್‌ಒಸಿ ನೀಡಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ಲಿಖೀತವಾಗಿ ಹೇಳಿಕೆ ನೀಡಿದ್ದಾರೆ.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ ಕೋಟುರ, ಕಾರ್ಯಾಧ್ಯಕ್ಷ ಪ್ರಕಾಶ ಬಾರಕೆ, ಚಂದ್ರ ಜೋಗೆನಹಳ್ಳಿ, ರಾಮಣ್ಣ ಬೊಮ್ಮಜ್ಜಿ, ನಾಗಪ್ಪ ಕೊಟ್ಟೂರ, ನಾಗಪ್ಪ ತೋಟಮ್ಮನವರ, ಈರಣ್ಣ ಮಾಯಕಾರ ಸೇರಿದಂತೆ ಮೊದಲಾದವರು ಪತ್ರಿಭಟನೆಯಲ್ಲಿ ಪಾಲ್ಗೊಂಡಿದ್ದರು.