ಬೆಂಗಳೂರು: “ದೇವೇಗೌಡರ ಚದುರಂಗದಾಟ ಯಾರಿಗೂ ಅರ್ಥವಾಗುವುದಿಲ್ಲ. ಪಕ್ಷ ಸೋತ ನಂತರವೂ ಸಂಘಟನೆ ಮಾಡಿ ಪಕ್ಷ ಕಟ್ಟಿ ಅಧಿಕಾರಕ್ಕೆ ತರುವ ಶಕ್ತಿ ಅವರಿಗಿದೆ’ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತಾ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಇನ್ನೇನು ಮುಗಿದೇ ಹೋಯ್ತು ಎಂದಾಗಲೂ ಲೆಕ್ಕಿಸದೆ ಪಕ್ಷ ಕಟ್ಟಿದ ಉದಾಹರಣೆ ಇದೆ. ಇಬ್ಬರು ಶಾಸಕರನ್ನು ಇಟ್ಟುಕೊಂಡು ಪಕ್ಷ ಅಧಿಕಾರಕ್ಕೆ ತಂದವರು ಅವರು ಎಂದು ತಿಳಿಸಿದರು.
ದೇಶದ ರಾಜಕಾರಣವನ್ನು ಆಳವಾಗಿ ಅಧ್ಯಯನ ಮಾಡಿರುವ ದೇವೇಗೌಡರಿಗೆ ರಾಜಕೀಯದಲ್ಲಿ ಅವರಿಗೆ ಅವರೇ ಸಾಟಿ. ಸೋಲು ಎಂಬುದು ಎಂದೂ ಅವರನ್ನು ಕುಗ್ಗಿಸಲ್ಲ ಎಂದರು. ಮಾಜಿ ಶಾಸಕರಾದ ಎಚ್.ಎಸ್.ಶಿವಶಂಕರ್, ಪಾವಗಡ ತಿಮ್ಮರಾಯಪ್ಪ, ಶಾರದಾ ಪೂರ್ಯನಾಯಕ್ ಮಾತನಾಡಿ, ನಾವು ಸೋತಿರಬಹುದು.
ಆದರೆ, ಪಕ್ಷ ಸಂಘಟನೆಯಲ್ಲಿ ಸುಮ್ಮನೆ ಕುಳಿತಿಲ್ಲ. ನಮ್ಮದೇ ಸರ್ಕಾರ ಇರುವುದರಿಂದ ಕಾರ್ಯಕರ್ತರು ಹಾಗೂ ಮುಖಂಡರನ್ನು ಗುರುತಿಸುವ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ಕುಮಾರಸ್ವಾಮಿ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಶಾಸಕರಾದ ಗೋಪಾಲಯ್ಯ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಮುಖಂಡರಾದ ರಮೇಶ್‌ಬಾಬು ಸೇರಿ ಹಲವು ಮಾಜಿ ಶಾಸಕರು ಉಪಸ್ಥಿತರಿದ್ದರು.
ವಿಶ್ವನಾಥ್ ಗೈರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್.ವಿಶ್ವನಾಥ್ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ತಮ್ಮ ಸ್ವ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಇದ್ದ ಕಾರಣ ಬಂದಿಲ್ಲ ಎಂದು ಪಕ್ಷದ ನಾಯಕರು ಸಮಜಾಯಿಷಿ ನೀಡಿದರು.