Advertisement

ಬಿಜೆಪಿಯ ಯಾರೊಬ್ಬರೂ ಕಾಂಗ್ರೆಸ್ ಸೇರುವುದಿಲ್ಲ: ಸಚಿವ ಎಸ್.ಟಿ.ಸೋಮಶೇಖರ್

05:40 PM Oct 04, 2021 | Team Udayavani |

ಬೆಂಗಳೂರು: ಅನೇಕ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಚಾರವನ್ನೇ ಕಾಂಗ್ರೆಸ್ ಮುಖಂಡರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಬಗ್ಗೆ ಗೊತ್ತಿದ್ದವರು ಆ ಪಕ್ಷಕ್ಕೆ ಹೋಗುವುದಿಲ್ಲ. ಬಿಜೆಪಿಯ ಯಾರೊಬ್ಬರೂ ಕಾಂಗ್ರೆಸ್ ಸೇರುವುದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “ಕಾಂಗ್ರೆಸ್‍ನ ಶಾಸಕರು ನನ್ನನ್ನು ಸಂಪರ್ಕಿಸಿದ್ದಾರೆ. ನಮಗೆ ಬೇಡ್ರಪ್ಪಾ ನೀವು, ಬರೋದಾದರೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಸಂಪರ್ಕಿಸಿ” ಎಂದು ಹೇಳಿದ್ದೇನೆ ಎಂದರು.

ಪಕ್ಷಕ್ಕೆ ಸೇರ್ಪಡೆ ಮಾಡುವವರು ರಾಜ್ಯಾಧ್ಯಕ್ಷರು. ಅವರೇ ಭರವಸೆ ನೀಡಬೇಕು. ಅವರಿಗೆ ಸಮಗ್ರ ರಾಜ್ಯದ ಮಾಹಿತಿ ಇರುತ್ತದೆ ಎಂದರು.

ರಾಜಕಾಲುವೆ ತೆರವು, ಚರಂಡಿ ಸರಿಪಡಿಸುವ ಕಾರ್ಯದ ಕುರಿತು ಮುಖ್ಯಮಂತ್ರಿಗಳು ತಮ್ಮ ಸಭೆಯಲ್ಲಿ ಸ್ಪಷ್ಟ ಆದೇಶ ನೀಡಿದ್ದಾರೆ. ಅದರಂತೆ ಕೆಲಸಗಳು ನಡೆದಿವೆ. ನಿನ್ನೆ ತೀವ್ರ ಮಳೆ ಬಿದ್ದ ಕಾರಣ ಕೆಲವೆಡೆ ಸ್ವಲ್ಪ ಸಮಸ್ಯೆ ಆಗಿದೆ. ಆ ಸಮಸ್ಯೆ ಬಗ್ಗೆ ಮಧ್ಯರಾತ್ರಿ ತಿಳಿದು ಸಂಬಂಧಿತ ಎಂಜಿನಿಯರ್ ಗಳಿಗೆ ತಿಳಿಸಿದ್ದು, ತಕ್ಷಣ ಸ್ಪಂದಿಸಿದ್ದಾರೆ ಎಂದರು.

ಬೆಂಗಳೂರಿನಲ್ಲಿ 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧೆಡೆ ವೈಟ್ ಟಾಪಿಂಗ್, ಡಾಂಬರೀಕರಣ ನಡೆಯುತ್ತಿಲ್ಲವೇ? ಯಡಿಯೂರಪ್ಪ ಅವರಿದ್ದ ಸಂದರ್ಭದಲ್ಲಿ ದೊಡ್ಡ ರಸ್ತೆಗಳ ಕಾಂಕ್ರಿಟೀಕರಣ, ಡಾಂಬರೀಕರಣಕ್ಕೆ ಟೆಂಡರ್ ಕೂಡ ಆಗಿದೆ. ಸಮಗ್ರ ಬೆಂಗಳೂರಿಗೆ ಸಂಬಂಧಿಸಿದ ಕಾಮಗಾರಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಸದನದಲ್ಲಿ 20 ಸಾವಿರ ಕೋಟಿ ಮೊತ್ತದ ವಿಚಾರ ಹೇಳಿದ್ದಾರೆ. ಕೇವಲ ರಸ್ತೆಗಳ ಗುಂಡಿ ಮುಚ್ಚುವ ಬಗ್ಗೆ ಮುಖ್ಯಮಂತ್ರಿಗಳು ಹೇಳಿಲ್ಲ. 12ಕ್ಕೂ ಹೆಚ್ಚು ರಸ್ತೆಗಳ ಕೆಲಸ ನಡೆದಿದೆ ಎಂದರು.

Advertisement

ಪಕ್ಷದ ರಾಜ್ಯಾಧ್ಯಕ್ಷರ ಆದೇಶದಂತೆ ತಿಂಗಳಿಗೆ ಎರಡು ಬಾರಿ ರಾಜ್ಯ ಕಾರ್ಯಾಲಯಕ್ಕೆ ಭೇಟಿ ಕೊಡಬೇಕಾಗಿದೆ. ಅಲ್ಲಿ ಸಾರ್ವಜನಿಕರು ಮತ್ತು ಕಾರ್ಯಕರ್ತರ ಅಹವಾಲು ಆಲಿಸಿ ಪರಿಹರಿಸಲು ಸೂಚಿಸಿದ್ದಾರೆ. ಇಂದು ಮೂರ್ನಾಲ್ಕು ಜನರು ಸಹಕಾರ ಇಲಾಖೆ ಕುರಿತಂತೆ ಮಾಹಿತಿ ಕೇಳಿದ್ದು ಸ್ಥಳದಲ್ಲೇ ಅದನ್ನು ನೀಡಲಾಗಿದೆ ಎಂದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next