ವಾಷಿಂಗ್ಟನ್ : 2021 ನೇ ಸಾಲಿನ ಔಷಧ ಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಮೆರಿಕಾದ ವಿಜ್ಞಾನಿಗಳಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್ ಅವರಿಗೆ ಜಂಟಿಯಾಗಿ ನೀಡುವುದಾಗಿ ನೊಬೆಲ್ ಸಮಿತಿ ಸೋಮವಾರ ಘೋಷಿಸಿದೆ.
ಶರೀರಶಾಸ್ತ್ರ ಅಥವಾ ಔಷಧ ಶಾಸ್ತ್ರದ ವಿಜ್ಞಾನಿಗಳಾದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೂಟಿಯನ್ “ತಾಪಮಾನ ಮತ್ತು ಸ್ಪರ್ಶಕ್ಕಾಗಿ ಗ್ರಾಹಕಗಳ ಸಂಶೋಧನೆ ಮಡಿದ ಮಹಾ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ನೊಬೆಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಥಾಮಸ್ ಪರ್ಲ್ ಮನ್ನ್ ತಿಳಿಸಿದ್ದಾರೆ.
ಜೂಲಿಯಸ್ ಅವರು ಕಾಳು ಮೆಣಸಿನಲ್ಲಿರುವ ಸಕ್ರಿಯ ಅಂಶವಾದ ಕ್ಯಾಪ್ಸೈಸಿನ್ ಅನ್ನು ಬಳಸಿ ಚರ್ಮವು ಶಾಖಕ್ಕೆ ಪ್ರತಿಕ್ರಿಯಿಸಲು ಅನುಮತಿಸುವ ನರ ಸಂವೇದಕಗಳನ್ನು ಗುರುತಿಸಿದ್ದರು.
ಪಟಪೌಟಿಯನ್ ಅವರು ಯಾಂತ್ರಿಕ ಪ್ರಚೋದನೆಗೆ ಪ್ರತಿಕ್ರಿಯಿಸುವ ಕೋಶಗಳಲ್ಲಿ ಪ್ರತ್ಯೇಕ ಒತ್ತಡ ಸಂವೇದಕಗಳ ಬಗ್ಗೆ ಸಂಶೋಧನೆ ನಡೆಸಿದ್ದರು.
ಔಷಧಿ ವಿಭಾಗದಲ್ಲಿ ನೊಬೆಲ್ ಪಡೆದವರನ್ನು ಸ್ವೀಡನ್‌ನ ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನ 5 ಸದಸ್ಯರ ಸಮಿತಿಯು ಆಯ್ಕೆ ಮಾಡುತ್ತದೆ. ಬಹುಮಾನವಾಗಿ 1 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು 8.22 ಕೋಟಿ ರೂ.) ನೀಡಲಾಗುತ್ತದೆ. ಒಂದಕ್ಕಿಂತ ಹೆಚ್ಚು ವಿಜೇತರು ಇದ್ದರೆ, ಮೊತ್ತವನ್ನು ಸಮಾನವಾಗಿ ಹಂಚಲಾಗುತ್ತದೆ. ಇದಲ್ಲದೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರದಲ್ಲೂ ನೊಬೆಲ್ ನೀಡಲಾಗುತ್ತದೆ.