Advertisement

Bangladesh; ನೊಬೆಲ್‌ ಶಾಂತಿ ಪುರಸ್ಕೃತ ಯೂನುಸ್‌ ಬಾಂಗ್ಲಾ ಪ್ರಧಾನಿ?

11:34 PM Aug 06, 2024 | Team Udayavani |

ಢಾಕಾ: ಬಾಂಗ್ಲಾದಲ್ಲಿ ರಾಜಕೀಯ ಅಸ್ಥಿರತೆ ನಡುವೆಯೇ ಮಧ್ಯಂತರ ಸರಕಾರ ರಚನೆಯ ಸರ್ಕಸ್‌ ಶುರುವಾಗಿದೆ. ಅಧಿಕಾರ ಸ್ಥಾಪಿಸಲು ಸೇನೆ ಮತ್ತು ರಾಜಕಾರಣಿಗಳ ನಡುವೆ ಹಗ್ಗಜಗ್ಗಾಟ ಸಾಗುತ್ತಿರುವಂತೆಯೇ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್‌ ಯೂನುಸ್‌ ದೇಶದ ಚುಕ್ಕಾಣಿ ಹಿಡಿವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಹಸೀನಾ ಅವರ ಸರಕಾರ ವನ್ನೇ ಮಗುಚಿದ ಪ್ರತಿಭಟನಾಕಾರರೇ ಈಗ ಯೂನು ಸ್‌ಗೆ ಮಧ್ಯಾಂತರ ಸರಕಾರದ ಸಾರಥ್ಯ ವಹಿಸುವಂತೆ ಪಟ್ಟು ಹಿಡಿದಿದ್ದಾರೆ.

Advertisement

ಹೌದು, ಹಸೀನಾ ಯಾರನ್ನು “ರಕ್ತದಾಹಿ’ ಎಂದು ಕರೆದಿದ್ದರೋ ಅದೇ ಯೂನುಸ್‌ಗೆ ಬಾಂಗ್ಲಾ ಸಾರಥ್ಯ ನೀಡಬೇಕೆಂಬ ಕೂಗು ಕೇಳಿಬಂದಿದೆ. ರಾಷ್ಟ್ರಪತಿ ಮೊಹಮ್ಮದ್‌ ಶಹಾಬುದ್ದೀನ್‌ ಮಂಗಳವಾರ ಬಾಂಗ್ಲಾ ಸಂಸತ್ತನ್ನು ವಿಸರ್ಜಿಸಿದ್ದಾರೆ. ಬಳಿಕ ರಕ್ಷಣ ಪಡೆಯ ಮೂರೂ ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಚಳವಳಿಯ 13 ಸದಸ್ಯರೊಂದಿಗೆ ಮಧ್ಯಂತರ ಸರಕಾರ ರಚನೆ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಯೂನುಸ್‌ ಅವರಿಗೆ ಅಧಿಕಾರ ವಹಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ ಎಂದು ವಿದ್ಯಾರ್ಥಿ ನಾಯಕ ನಹೀದ್‌ ಇಸ್ಲಾಂ ಹೇಳಿದ್ದಾರೆ.

ನನ್ನ ದೇಶಕ್ಕಾಗಿ ಜವಾಬ್ದಾರಿ ಹೊರಲು ಸಿದ್ಧ: ಮಧ್ಯಾಂತರ ಸರಕಾರದ ಸಾರಥ್ಯ ವಹಿಸುವ ಹೊಣೆ ಕೊಟ್ಟರೆ, ನನ್ನ ದೇಶದ ಜನರ ಇಚ್ಛೆ ಅದೇ ಆಗಿದ್ದರೆ ಈ ಜವಾಬ್ದಾರಿ ಹೊರಲು ನಾನು ಸಿದ್ಧನಿದ್ದೇನೆ. ಆದರೆ ಮಧ್ಯಾಂತರ ಸರಕಾರ ಯಾವ ಸಮಸ್ಯೆಗೂ ಪರಿಹಾರವಲ್ಲ ಹಾಗಾಗಿ ಮುಕ್ತ ಚುನಾವಣೆ ನಡೆಯಬೇಕು. ಅದು ಮಾತ್ರವೇ ಶಾಶ್ವತ ಶಾಂತಿ ನೀಡಬಲ್ಲದು ಎಂದು ಯೂನುಸ್‌ ಹೇಳಿದ್ದಾರೆ. ಜತೆಗೆ ಹಸೀನಾದ ಕಟು ಟೀಕಾಕಾರರಾದ ಯೂನುಸ್‌, ಹಸೀನಾ ರಾಜೀನಾಮೆ ಮೂಲಕ ಬಾಂಗ್ಲಾ ಎರಡನೇ ಬಾರಿಗೆ ವಿಮೋಚನೆ ಯಾಗಿದೆ ಎಂದಿದ್ದಾರೆ.

ಯಾರು ಈ ಯೂನುಸ್‌?

ಬಾಂಗ್ಲಾದ ಆರ್ಥಿಕ ತಜ್ಞ, ಬ್ಯಾಂಕ್‌ ಉದ್ಯೋಗಿ. 1983ರಲ್ಲಿ ಬಾಂಗ್ಲಾದಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಸ್ಥಾಪಿಸಿದವರು

Advertisement

ಸಣ್ಣ ಸಾಲ ವ್ಯವಸ್ಥೆ ಪರಿಚಯಿಸಿ, ಬಡತನ ನಿರ್ಮೂಲನೆಗೆ ಕಾರಣರಾದವರು.

2006ರಲ್ಲಿ ನೊಬೆಲ್‌ ಶಾಂತಿ ಪ್ರಶಸ್ತಿಯ ಗರಿ. 2007ರಲ್ಲಿ ಹೊಸ ರಾಜಕೀಯ ಪಕ್ಷ ರಚಿಸುವುದಾಗಿ ಘೋಷಣೆ

2008ರಲ್ಲಿ ಯೂನುಸ್‌ ವಿರುದ್ಧ ತನಿಖೆಗೆ ಹಸೀನಾ ಸರಕಾರ ಆದೇಶ. ಬಡವರಿಂದ ಹಣ ವಸೂಲಿಗೆ ಬಲ ಪ್ರಯೋಗಿಸಿದ ಆರೋಪ

ಅಂದಿನಿಂದ ಹಸೀನಾ ಮತ್ತು ಯೂನುಸ್‌ ನಡುವೆ  ಜಟಾಪಟಿ

2011ರಲ್ಲಿ ಯೂನಸ್‌ ಎಂಡಿ ಆಗಿದ್ದ ಬ್ಯಾಂಕ್‌ ಬಗ್ಗೆ ತನಿಖೆ, ಸರಕಾರದ ಒಪ್ಪಿಗೆ ಇಲ್ಲದೇ ಹಣ ಸ್ವೀಕಾರ ಆರೋಪದ ಮೇರೆಗೆ 2013ರಲ್ಲಿ ತನಿಖೆ

2 ದಶಲಕ್ಷ ಡಾಲರ್‌ ಹಣ ವಂಚನೆ ಆರೋಪ, ಯೂನುಸ್‌ ಬಂಧನ. ಈಗ ಇದೇ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿಂದ ಹೊರಗಿದ್ದಾರೆ

ಹಸೀನಾರ ವೈರಿ ಎಂಬುದಕ್ಕೇ ಈ ಆರೋಪ ಬಂದಿವೆ ಎಂಬ ವಾದವೂ ಇದೆ

Advertisement

Udayavani is now on Telegram. Click here to join our channel and stay updated with the latest news.

Next