Advertisement

ಜ. 5ರವರೆಗೆ ನೀರು ಹರಿಸದಿರಿ

07:29 PM Nov 08, 2017 | Team Udayavani |

ದಾವಣಗೆರೆ: ಯಾವುದೇ ಕಾರಣಕ್ಕೂ 2018ರ ಜ.5 ವರೆಗೆ ಭದ್ರಾ ನಾಲೆಯಲ್ಲಿ ಹರಿಸಬಾರದು. ಒಂದೊಮ್ಮೆ ನೀರು
ಹರಿಸಿದರೆ ಹೋರಾಟ ನಡೆಸಲಾಗುವುದು ಎಂದು ಭಾರತೀಯ ರೈತ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಎಚ್ಚರಿಸಿದ್ದಾರೆ.

Advertisement

ಈಚೆಗೆ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಹಸಿ ಇದೆ. ಮೇಲಾಗಿ ಈಗ ನೀರು ಹರಿಸುವ ಅಗತ್ಯ, ಅವಶ್ಯಕತೆ ಇಲ್ಲ. ಹಾಗಾಗಿ 2018ರ ಜ. 5ರ ನಂತರವೇ ನಾಲೆಯಲ್ಲಿ ನೀರು ಹರಿಸುವ ಮೂಲಕ 5ನೇ ಬಾರಿಗಾದರೂ ಭತ್ತ ಬೆಳೆಯುವುದಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಈ ತಿಂಗಳು, ಮುಂದಿನ ಡಿಸೆಂಬರ್‌ ನಲ್ಲಿ ನೀರು ಹರಿಸಿ, ಮುಂದಿನ ಬೇಸಿಗೆ ಭತ್ತಕ್ಕೆ ನೀರು ಕೊಡದೇ ಇರುವಂತಹ ಕೆಲಸ ಮಾಡಲೇಬಾರದು. ಆದಾಗ್ಯೂ ನ. 10 ರಿಂದ ನಾಲೆಯಲ್ಲಿ ನೀರು ಹರಿಸುವ ಬಗ್ಗೆ ಕಾಡಾ ಸಮಿತಿ ನಿರ್ಧರಿಸಿದೆ. ಒಂದೊಮ್ಮೆ ನೀರು ಹರಿಸಿದಲ್ಲಿ ಹೋರಾಟ ಮಾಡುವುದರಲ್ಲಿ ಎರಡು ಮಾತಿಲ್ಲ. ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. 

ಮಳೆಯ ಕೊರತೆ, ಅತಿಯಾದ ಮಳೆಯ ತೊಂದರೆ ನಡುವೆಯೂ ಮೆಕ್ಕೆಜೋಳ ಬೆಳೆಯಲಾಗಿದೆ. ಈಗಾಗಲೇ ಮಾರುಕಟ್ಟೆಗೆ ಬರುತ್ತಿದೆ. ಪ್ರತಿ ಕ್ವಿಂಟಾಲ್‌ ಗೆ 1 ಸಾವಿರಕ್ಕಿಂತಲೂ ಕಡಿಮೆ ಬೆಲೆ ಇದೆ. ರೈತರಿಗೆ ಸಾಕಷ್ಟು ನಷ್ಟವಾಗುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡದೆ, ಕೂಡಲೇ ಎಲ್ಲಾ ಕಡೆ ಖರೀದಿ ಕೇಂದ್ರ ಪ್ರಾರಂಭಿಸಿ, ಮೆಕ್ಕೆಜೋಳ ಇತರೆ ಬೆಳೆ ಖರೀದಿಸಿ, ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಅಧಿಕಾರವಧಿಯಲ್ಲಿ 1 ಸಾವಿರ ಕೋಟಿ ಅನುದಾನದ ಆವರ್ತ ನಿಧಿ ಪ್ರಾರಂಭಿಸಿ, ಮೆಕ್ಕೆಜೋಳ ಇತರೆ ಬೆಳೆ ಖರೀದಿ ಮಾಡಲಾಗಿತ್ತು. ಸರ್ಕಾರ ಖರೀದಿ ಮಾಡಿದ್ದ ಬೆಳೆಯನ್ನು ಮಾರಾಟ ಮಾಡಿದ್ದರಿಂದ ಲಾಭವೂ ಸಿಕ್ಕಿತ್ತು. ಸರ್ಕಾರ ಕೂಡಲೇ ಖರೀದಿ ಕೇಂದ್ರ ಪ್ರಾರಂಭಿಸಿ, ಮೆಕ್ಕೆಜೋಳ, ಇತರೆ ಬೆಳೆ ಖರೀದಿಸಬೇಕು ಎಂದು ಒತ್ತಾಯಿಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರೊ| ಸಿ. ನರಸಿಂಹಪ್ಪ ಮಾತನಾಡಿ, ಭದ್ರಾ ಜಲಾಶಯದಲ್ಲಿ 140 ಅಡಿ ನೀರಿದ್ದಾಗಲೆ ಭತ್ತದ ಬೆಳೆಗೆ ಕೊಡಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಲಾಗಿತ್ತು. ಆದರೆ, ಅವರು ಸ್ಪಂದಿಸಲೇ ಇಲ್ಲ. ಕೆರೆ ತುಂಬಿಸಲಿಕ್ಕೆ, ಅಡಕೆ ತೋಟಕ್ಕೆಂದು ಈಗಾಗಲೇ ನೀರು ಹರಿಸಲಾಗಿದೆ. ಯಾವುದೇ ಸಭೆ ನಡೆಸದೆ ನ. 10 ರಿಂದ ನೀರು ಹರಿಸುವುದಕ್ಕೆ ಕಾಡಾ ಸಮಿತಿ ನಿರ್ಧರಿಸಿದೆ. ಇಂತಹ ಖಂಡನೀಯ, ಹೇಯ, ರೈತ ವಿರೋಧಿ ತೀರ್ಮಾನದ ಮೂಲಕ ಕಾಡಾ ಸಮಿತಿ ದಾವಣಗೆರೆ ಭಾಗದ ಅಚ್ಚುಕಟ್ಟುದಾರರನ್ನು ಅಕ್ಷರಶಃ ಕಾಡುತ್ತಿದೆ ಎಂದು ದೂರಿದರು.

ನವೆಂಬರ್‌, ಡಿಸೆಂಬರ್‌ನಲ್ಲಿ ನಾಲೆಯಲ್ಲಿ ನೀರು ಹರಿಸುವ ಮೂಲಕ ಈ ಬಾರಿಯೂ ಬೇಸಿಗೆ ಭತ್ತಕ್ಕೆ ನೀರು ಕೊಡದೇ ಇರುವ ಯತ್ನ ನಡೆಯುತ್ತಿದೆ. 5ನೇ ಬಾರಿಯೂ ಬೇಸಿಗೆ ಭತ್ತಕ್ಕೆ ನೀರು ಕೊಡದೇ ಇದ್ದರೆ ದಾವಣಗೆರೆ ಆರ್ಥಿಕ ಪರಿಸ್ಥಿತಿಯೇ ಅಲ್ಲೋಲ ಕಲ್ಲೋಲವಾಗಲಿದೆ. ಬೇಸಿಗೆ ಭತ್ತಕ್ಕೆ ನೀರು ಕೊಡುವ ಉದ್ದೇಶ ಮುಂದಿಟ್ಟುಕೊಂಡು ಯಾವುದೇ ಕಾರಣಕ್ಕೂ 2018 ರ ಜ. 5ರ ವರೆಗೆ ನೀರು ಹರಿಸಬಾರದು. ನೀರು ಹರಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

Advertisement

ಒಕ್ಕೂಟದ ಎಚ್‌.ಆರ್‌. ಲಿಂಗರಾಜ್‌ ಶಾಮನೂರು, ಬಿ.ಎಂ. ಸತೀಶ್‌, ಧನಂಜಯ ಕಡ್ಲೆಬಾಳು, ಕುಂದುವಾಡ ಮಹೇಶ್‌, ಶಿವರಾಜ್‌ ಪಾಟೀಲ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next