ವರದಿ: ಸಿದ್ಧಲಿಂಗಯ್ಯ ಗೌಡರ
ಹಿರೇಕೆರೂರ: ಹಿರೇಕೆರೂರ ಹಾಗೂ ರಟ್ಟಿàಹಳ್ಳಿ ತಾಲೂಕಿನಲ್ಲಿ ಬಿಸಿಲಿನ ತಾಪ ದಿನೇ ದಿನೆ ಹೆಚ್ಚುತ್ತಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದು ಉಲ್ಬಣಗೊಂಡಿಲ್ಲ. ಉಭಯ ತಾಲೂಕುಗಳಲ್ಲಿ ಕಳೆದ ವರ್ಷ ಉತ್ತಮ ಮಳೆ ಸುರಿದ ಕಾರಣ ಕೆರೆ-ಕಟ್ಟೆಗಳಲ್ಲಿ ನೀರು ತುಂಬಿದೆ. ಹಾಗಾಗಿ, ಅಂತರ್ಜಲ ಮಟ್ಟವೂ ಹೆಚ್ಚಾಗಿದೆ.
ಪ್ರಸ್ತುತದಲ್ಲಿ ಬಿಸಿಲಿನ ತಾಪದಿಂದ ಕೆರೆ-ಕಟ್ಟೆಗಳಲ್ಲಿ ನೀರು ಕಡಿಮೆಯಾಗಿದ್ದರೂ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಕಾಣುತ್ತಿಲ್ಲ. ಆದರೆ, ಇದೇ ಬಿಸಿಲಿನ ತಾಪ ಮುಂದುವರೆದು ಮಳೆಯೂ ಆಗದ ಸಂದರ್ಭದಲ್ಲಿ ಅಲ್ಪ ಮಟ್ಟಿನ ನೀರಿನ ತೊಂದರೆಯಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಅವಳಿ ತಾಲೂಕಿನಲ್ಲಿ 126 ಗ್ರಾಮಗಳಿದ್ದು, ಅವುಗಳಲ್ಲಿ ರಟ್ಟಿàಹಳ್ಳಿ ತಾಲೂಕಿನ ಒಟ್ಟು 36 ಗ್ರಾಮಗಳಿಗೆ ಬೈರನಪಾದ ಮತ್ತು ರಟ್ಟಿàಹಳ್ಳಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನುಳಿದ ಗ್ರಾಮಗಳಿಗೆ ಆಯಾ ಗ್ರಾಮಗಳ ಕೊಳವೆ ಬಾವಿಗಳ ಮೂಲಕ ನೀರು ಪೊರೈಕೆ ಮಾಡಲಾಗುತ್ತಿದೆ. ಆದಾಗ್ಯೂ, ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆಗಳು ಉಲ್ಬಣಿಸಬಹುದು ಎಂದು ಅಂದಾಜಿಸಿ, ಗ್ರಾಮೀಣ ನೀರು ಮತ್ತು ಸರಬರಾಜು ಇಲಾಖೆಯವರು ಅವಳಿ ತಾಲೂಕಿನಲ್ಲಿ ಸಮೀಕ್ಷೆ ಕೈಗೊಂಡು ಚಿಕ್ಕೇರೂರು, ಚಿನ್ನಮುಳಗುಂದ ತಾಂಡಾ, ಹಿರೇಮತ್ತೂರು, ಲಿಂಗದೇವರಕೊಪ್ಪ, ಯತ್ತಿಹಳ್ಳಿ ಎಂ.ಎಂ. ತಾಂಡಾ, ಚಿಕ್ಕಮತ್ತೂರು, ಕೋಡ, ಶಂಕರನಹಳ್ಳಿ, ಚಿಕ್ಕೊಣತಿ, ಗಂಗಾಪುರ, ಉಜನಿಪುರ, ಚೊಗಚಿಕೊಪ್ಪ ತಾಂಡಾ, ಹೊಸವೀರಾಪುರ, ಸುತ್ತಕೋಟಿ, ಹೊಸಳ್ಳಿ, ದೊಡ್ಡಗುಬ್ಬಿ, ಯತ್ತಿನಹಳ್ಳಿ ಎಂ.ಕೆ., ಪುರಕೊಂಡಿಕೊಪ್ಪ, ಮಡ್ಲೂರು, ನಿಟ್ಟೂರು, ಭೋಗಾವಿ, ದುಪದಹಳ್ಳಿ, ಮುದ್ದಿನಕೊಪ್ಪ, ಹಿರೇಯಡಚಿ, ಬತ್ತಿಕೊಪ್ಪ, ಕುಂಚೂರು, ಚಿನ್ನಮುಳಗುಂದ, ಬೆಟಕೇರೂರ, ಸಾತೇನಹಳ್ಳಿ, ಆರೀಕಟ್ಟಿ, ಹಿರೇಬೂದಿಹಾಳ ಹಾಗೂ ಚಿಕ್ಕಬೂದಿಹಾಳ ಗ್ರಾಮಗಳನ್ನು ಗುರುತಿಸಿದ್ದಾರೆ. ನೀರಿನ ತೊಂದರೆ ಕಂಡು ಬಂದರೆ ಅಗತ್ಯ ಕ್ರಮ ಕೈಗೊಳ್ಳಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ.
ಹಿರೇಕೆರೂರ ದುರ್ಗಾದೇವಿ ಕೆರೆ ತುಂಬಿಸುವ ಯೋಜನೆ ಹಾಗೂ ರಟ್ಟಿàಹಳ್ಳಿ ತಾಲೂಕಿನ ಗುಡ್ಡದ ಮಾದಾಪುರ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಈಗಾಗಲೇ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಸರ್ವಜ್ಞ ಏತ ನೀರಾವರಿ ಯೋಜನೆ, ಮಡ್ಲೂರು ಏತ ನೀರಾವರಿ ಯೋಜನೆ ಹಾಗೂ ಅಸುಂಡಿ ಏತ ನೀರಾವರಿ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿ ಪೂರ್ಣಗೊಂಡು ನೀರು ಹರಿಯಲಾರಂಭಿಸಿದಾಗ ತಾಲೂಕಿನ ಬಹುತೇಕ ಎಲ್ಲ ಕೆರೆಗಳು ಭರ್ತಿಯಾಗುತ್ತವೆ. ಆಗ ಜನ, ಜಾನುವಾರುಗಳಿಗೆ ಎಲ್ಲೆಡೆ ಸಮೃದ್ಧವಾಗಿ ನೀರು ಲಭ್ಯವಾಗಲಿದೆ.