ವರದಿ : ರವಿ ಲಕ್ಷ್ಮೇಶ್ವರ
ಹಾನಗಲ್ಲ: ಪಟ್ಟಣದ ಕುಡಿಯುವ ಜಲಮೂಲವಾದ ಆನಿಕೆರೆ ಧರ್ಮಾ ಜಲಾಶಯ ಮೈದುಂಬಿಕೊಂಡಿದ್ದು ಪಟ್ಟಣದ ಜನತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಯಾವುದೇ ತೊಂದರೆ ಎದುರಾಗಿಲ್ಲ.
ಹಾನಗಲ್ಲ ತಾಲೂಕು 167 ಗ್ರಾಮಗಳನ್ನು ಹೊಂದಿದ ದೊಡ್ಡ ತಾಲೂಕಾಗಿದ್ದು, ಇಲ್ಲಿ 134 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. 4 ಘಟಕಗಳು ದುರಸ್ತಿ ಹಂತದಲ್ಲಿದ್ದು, ಅವುಗಳನ್ನು ಕೂಡಲೇ ಸರಿಪಡಿಸಲಾಗುತ್ತದೆ ಎಂದು ಅ ಧಿಕಾರಿಗಳು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ತಾಲೂಕಿನ 22 ಗ್ರಾಮಗಳಲ್ಲಿ ನೀರಿನ ಅಭಾವ ಕಂಡು ಬಂದಿದ್ದು, ಈಗಾಗಲೇ 6 ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಯಿಸಲಾಗಿದೆ.
ಇನ್ನುಳಿದ ಗ್ರಾಮಗಳಿಗೂ 14ನೇ ಹಣಕಾಸು ಯೋಜನೆಯಡಿ ಕೊಳವೆಬಾವಿ ಕೊರೆಯಿಸಲು ಅವಕಾಶವಿದೆ. ಹಾಗಾಗಿ ಅಲ್ಲಿಯೂ ಕೂಡ ಕೊಳವೆಬಾವಿ ಕೊರೆಯಿಸಲು ಸೂಚಿಸಲಾಗಿದೆ. ಇದರೊಂದಿಗೆ ಖಾಸಗಿಯವರ ಕೊಳವೆಬಾವಿಯಿಂದಲೂ ನೀರು ಪಡೆದು ಸಾರ್ವಜನಿಕರಿಗೆ ವಿತರಿಸುವ ಸಾಧ್ಯತೆಗಳಿವೆ. ತಾಲೂಕಿನಲ್ಲಿ 4 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು, ಇದರಡಿ ಸುಮಾರು 30 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ.
ಜೆಜೆಎಂ ಯೋಜನೆಯಡಿ ತಾಲೂಕಿನಲ್ಲಿ 28 ಮೇಲ್ಮಟ್ಟದ ಜಲಾಗಾರ ಕಾಮಗಾರಿ ನಡೆದಿದ್ದು, ಶೀಘ್ರವೇ ಆರಂಭಗೊಳ್ಳುವ ಆಶಯವಿದೆ. ಆದಾಗ್ಯೂ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಆಯಾ ಗ್ರಾಪಂ ಅಭಿವೃದ್ಧಿ ಅಧಿ ಕಾರಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಸೂಚಿಸಲಾಗಿದೆ.