Advertisement

600 ಅಡಿ ಕೊರೆದರೂ ನೀರಿಲ್ಲ! ಬಂಡೀಪುರ ಕಾಡಿನಲ್ಲಿ ನೀರಿಗೆ ಹಾಹಾಕಾರ

03:45 AM Mar 07, 2017 | Harsha Rao |

ಬಂಡೀಪುರ: ಬಿರು ಬೇಸಿಗೆ. ಎಲ್ಲಿ ನೋಡಿದರೂ ಬೆತ್ತಲಾದ ಮರಗಳು. ಇಡೀ ಬಂಡೀಪುರದ ಕಾಡು ಧೂಳ್ಳೋ ಧೂಳು! 
ಇದು ಬಂಡೀಪುರದ ಬರದ ಸದ್ಯದ ಸ್ಥಿತಿ. ಸ್ವಾಗತ ಕೋರುವ ಮೇಲುಕಮ್ಮನಹಳ್ಳಿ ಅರಣ್ಯದಿಂದಲೇ ಬರದ ಛಾಯೆ ಕಾಣಿಸುತ್ತಿದೆ. ಟ್ಯಾಂಕರ್‌ ನೀರು ಬರಲೇ ಇಲ್ಲ ಎಂದು ಹಳ್ಳಿಗರು ಒದ್ದಾಡುತ್ತಿರುವಾಗಲೇ, ನೀರೇ ಕಾಣದ ಬಂಡೀಪುರದ ಪ್ರಾಣಿಗಳ ಹಾಹಾಕಾರ ಯಾರಿಗೆ ಹೇಳುವು ದು ಅನ್ನೋ ಸ್ಥಿತಿ ಎದುರಾಗಿದೆ. 600 ಅಡಿಯಷ್ಟು ಭೂಮಿ ಕೊರೆದರೂ ನೀರು ಸಿಗುತ್ತಿಲ್ಲ.

Advertisement

ಎನ್‌.ಬೇಗೂರು, ಗುಂಡ್ರೆ, ಗೋಪಾಲಸ್ವಾಮಿಬೆಟ್ಟ, ಮೂಳೆಹೊಳೆಗಳಲ್ಲಿ ಹೊತ್ತಿಕೊಂಡಿದ್ದ ಬೆಂಕಿ ಆರಿಸಿ ಬಂದ ಅಧಿಕಾರಿಗಳು ಕಾಡಿನ ಉತ್ತರ ಭಾಗದಲ್ಲಿ ರಣ ಬಿಸಿಲಿಗೆ ಕಂಗಾಲಾಗಿದ್ದಾರೆ. ಮಂಗಳ ಮಾರ್ಗವಾಗಿ ಓಡಾಡುವ ಪ್ರಯಾಣಿಕರಿಗೆ ಬಂಡೀಪುರ ಡಿಎಫ್ಓ ಆಫೀಸು, ಗಡಿಪ್ರದೇಶದ ಕೆಕ್ಕನಹಳ್ಳ ಗೇಟ್‌ ಚೆಕ್‌ಪೋಸ್ಟ್‌ ಸುತ್ತಮುತ್ತ ಕಾಣುತ್ತಿದ್ದ ಕಾಡಾನೆಗಳು ಪತ್ತೆಯಾಗಿವೆ. “ಪರಿಸ್ಥಿತಿ ಚಿಂತಾಜನಕವಾಗಿದೆ.

ಮಳೆ ಬಿಟ್ಟರೆ ನಮ್ಮನ್ನು ಬಚಾವ್‌ ಮಾಡಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಕೈಲಾದದ್ದನ್ನು ನಾವು ಮಾಡುತ್ತಿದ್ದೇವೆ ‘ ಎನ್ನುತ್ತಾರೆ ಹುಲಿ ಯೋಜನೆ ನಿರ್ದೇಶಕ ಹೀರಾಲಾಲ್‌. ಹೆಚ್ಚಾ ಕಡಿಮೆ ಬಂಡೀಪುರದ 370 ಕೆರೆಯಲ್ಲಿ ಶೇ. 10ರಷ್ಟು ಕೆರೆಗಳಲ್ಲಿ ಮಾತ್ರ ನೀರಿದೆ. ಅದರಲ್ಲೂ ಟ್ಯಾಂಕರ್‌ ಮೂಲಕ ಹರಿಸಿದ ನೀರು. ಇಡೀ ಬಂಡೀಪುರ ರೇಂಜ್‌ನಲ್ಲಿ ಮೂರ್ಕೆರೆಯಲ್ಲಿ ಮಾತ್ರ ಅಲ್ಪಸ್ವಲ್ಪ ನೀರು. ಮಿಕ್ಕ ಕೆರೆಗಳಲ್ಲಿ ನೀರೇ ಇಲ್ಲದಾಗಿದೆ. ಒಂದು ಮೂಲದ ಪ್ರಕಾರ ಈಗಾಗಲೇ ಬಂಡೀಪುರದ 13 ರೇಂಜ್‌ಗಳಲ್ಲಿ 40ಕ್ಕೂ ಅಧಿಕ ಕೊಳವೆ ಬಾವಿ ತೋಡಿಸಲಾಗಿದೆ. ಇದರಲ್ಲಿ 10 ಕೊಳವೆಬಾವಿಗಳಲ್ಲಿ ಮಾತ್ರ ನೀರಿದೆ. ಅದರಲ್ಲೂ ಒಂದು ಇಂಚು, ಎರಡು ಇಂಚು ನೀರು ಮಾತ್ರ ನೀರು. ಅರಳೀಕಟ್ಟೆಯ ಕೆರೆ ಪಕ್ಕದಲ್ಲಿ ಬೋರ್‌ ಕೊರೆಸಲಾಗಿದೆ.

ಸೋಲಾರ್‌ ಶಕ್ತಿಯನ್ನು ಬಳಸಿ ನೀರು ತುಂಬಿಸುವ ಯೋಜನೆ ಜಾರಿಮಾಡಲು ಕಾಮಗಾರಿಗಳು ಭರದಿಂದಸಾಗಿವೆ. ” ಕಾಮಗಾರಿ ಮುಗಿದರೆ ಎರಡೂ ಕೆರೆಗೆ ನೀರು ತುಂಬಬಹುದು. ಇದರಿಂದ ಜಿಂಕೆ, ಕಡವೆ, ಚಿರತೆಗಳಿಗೆ ನೀರಾಗುತ್ತದೆ’ ಎನ್ನುತ್ತಾರೆ ಆರ್‌ಫ್ಓ ಗೋವಿಂದರಾಜ್‌.

500 ಅಡಿಗೂ ನೀರಿಲ್ಲ: ಇಡೀ ಬಂಡೀಪುರ ವ್ಯಾಪ್ತಿಯಲ್ಲಿ ಅಂತರ್ಜಲ ಪಾತಾಳಕ್ಕೆ ಹೋಗಿದೆ. ಇದಕ್ಕೆ ಕಾರಣ ಏನು ಅಂದರೆ ಮಳೆ ಕಡಿಮೆ ಅನ್ನೋ ಉತ್ತರ ಬರುತ್ತದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಶೇ. 50ರಷ್ಟು ಮಳೆ ಕಡಿಮೆಯಾಗಿದೆ. ಇಲ್ಲಿ 600-700ಮಿಲಿಮೀ. ಅಂದಾಜಿನಲ್ಲಿ ಮಳೆಯಾಗಬೇಕಿತ್ತು. ಆದರೆ ಅದು 250-300ಮಿ.ಮೀಟರ್‌ ಮಳೆಯಾಗುವ ಮೂಲಕ ಶೇ. 50ರಷ್ಟು ಮಳೆ ಕುಸಿದು ಹೋಗಿದೆ.

Advertisement

ಇದರ ಜೊತೆಗೆ ಪ್ರತಿ ಕೆರೆಯ ಸುತ್ತ ಲಂಟಾನ ಬೆಳೆದು ಕೊಂಡಿದೆ. ನೀರು ಹಿಡಿದಿಡುವ ಮರಗಳು ಸಂಖ್ಯೆ ಕಡಿಮೆಯಾಗಿವೆ. ಲಂಟಾನ ಮಳೆ ಬಂದರೂ ನೀರು ಹಿಡಿದಿಟ್ಟಿಕೊಳ್ಳದ ಕಾರಣ ಅಂತರ್ಜಲ ಏರಿಕೆ ಆಗದಿರಲು ಇದೂ ಒಂದು ಕಾರಣ. ಈಗಾಗಲೇ ಬಂಡೀಪುರ ರೇಂಜ್‌ನಲ್ಲಿ 100ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿನ ಲಂಟಾನ ನಿರ್ಮೂಲನ ಗೊಳಿಸಿದೆ ಎನ್ನುತ್ತದೆ ಅರಣ್ಯ ಇಲಾಖೆ ಮೂಲಗಳು.

ಬಂಡೀಪುರ ರೇಂಜ್‌ನಲ್ಲಿ ಅತಿ ಕಡಿಮೆ ಆಳದಲ್ಲಿ ನೀರು ದೊರೆತ ಹೆಗ್ಗಳಿಕೆ ಅರಳೀಕಟ್ಟೆ ವ್ಯಾಪ್ತಿಯ ಕೊಳವೆ ಬಾವಿಗೆ ಸಲ್ಲುತ್ತದೆ. ಇಲ್ಲಿ 120 ಅಡಿಗೆ ನೀರು ಸಿಕ್ಕಿದೆ. ಇದಕ್ಕೆ ಕಾರಣ ಏನೆಂದರೆ ಇಲ್ಲಿ ಮೊದಲು ಅರಣ್ಯ ಇಲಾಖೆಯ ನರ್ಸರಿ ಇತ್ತಂತೆ. ಮಿಕ್ಕೆಡೆ 500-600 ಅಡಿ ಕೊರೆದರೆ ಮಾತ್ರ ನೀರದರ್ಶನವಾಗುವುದು. ಬಂಡೀಪುರದ ಉತ್ತರ ಭಾಗಕ್ಕೆ ಬೆಂಕಿ ಬಿದ್ದಿದೆ. ದಕ್ಷಿಣಭಾಗದಲ್ಲಿ ನೀರು ಇಲ್ಲದೇ ಪ್ರಾಣಿಗಳು ವಲಸೆ ಹೋಗಿವೆ. ಈಗ ಪ್ರಾಣಿ ಎಂದರೆ ಇರುವುದು ಜಿಂಕೆಗಳು ಮಾತ್ರ. ಮಂಗಳ ಗ್ರಾಮದ ಸುತ್ತಮುತ್ತ ಕಾಣಸಿಗುತ್ತಿದ್ದ ಆನೆಗಳು ನೀರಿಗಾಗಿ ಮೊಯಾರ್‌ ನದಿಯ ಕಡೆ ವಲಸೆ ಹೊರಟಿವೆ ಎನ್ನುತ್ತಾರೆ ಅಧಿಕಾರಿಗಳು. ಎನ್‌ಬೇಗೂರು, ಗುಂಡ್ರೆ ವಲಯದಲ್ಲಿನ ಪ್ರಾಣಿಗಳು ಕಬಿನಿ ಹಿನ್ನೀರಿನ ಕಡೆ ಹೊರಟಿವೆಯಂತೆ.

ಕೈಗಾವಲಿಗೆ ಇದ್ದ ಮಂಗಳ ಅಣೆಕಟ್ಟಲ್ಲೂ ನೀರಿಲ್ಲ. ಕೆಕ್ಕನಹಳ್ಳಿಯಿಂದ ಕುಳ್ಳನಬೆಟ್ಟದ ತನಕದ ಮೋಯಾರ್‌ ನದಿ ಕೂಡ ಬತ್ತಿಹೋಗಿದೆ. 

*ಕಟ್ಟೆ ಗುರುರಾಜ್

Advertisement

Udayavani is now on Telegram. Click here to join our channel and stay updated with the latest news.

Next