Advertisement

Vijayapura ಕೊಳವೆ ಬಾವಿ ಪ್ರಕರಣ: ವಿಜಯಪುರ ಜಿಲ್ಲೆಯಲ್ಲಿ ಮೂರನೇ ಪ್ರಕರಣ

09:59 PM Apr 03, 2024 | Team Udayavani |

ವಿಜಯಪುರ : ಎರಡು ವರ್ಷದ ಸಾತ್ವಿಕ ಮುಜಗೊಂಡ ವಿಫಲ ಕೊಳವೆ ಬಾವಿಯಲ್ಲಿ ಬಿದ್ದ ಪ್ರಕರಣದೊಂದಿಗೆ ಜಿಲ್ಲೆಯಲ್ಲಿ ಕಳೆದ 16 ವರ್ಷಗಳಲ್ಲಿ ಕೊಳವೆ ಬಾವಿಗೆ ಮಗು ಬಿದ್ದ ಮೂರನೇ ಪ್ರಕರಣ ಜರುಗಿದೆ.

Advertisement

2008 ರಲ್ಲಿ ಇಂಡಿ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದದ್ದ ಕೊಳವೆ ಬಾವಿಯಲ್ಲಿ ಕಾಂಚನಾ ಎಂಬ ಬಾಲಕಿ ಬಿದ್ದಿದ್ದಳು. ಇದು ರಾಜ್ಯದ ಎರಡನೇ ಕೊಳವೇ ಬಾವಿ ಪ್ರಕರಣ ಎನಿಸಿಕೊಂಡಿತ್ತು. ಸದ್ಯ ಚಡಚಣ ತಾಲೂಕಿನಲ್ಲಿರುವ ದೇವರನಿಂಬರಗಿ ಗ್ರಾಮದಲ್ಲಿನ ಕೊಳವೆ ಬಾವಿಗೆ ಬಿದ್ದಿದ್ದ ಕಾಂಚನಾ ಉರ್ಫ ಏಗವ್ವ ಎಂಬ ಬಾಲೆಯನ್ನು ಕೊಳವೆ ಬಾವಿಯಿಂದ ಮೇಲೆತ್ತುವಲ್ಲಿ ಹಿಟಾಚಿ, ಜೆಸಿಬಿ ಬಳಸಿ ನಡೆಸಿದ ನಿರಂತರ ಕಾರ್ಯಾರಣೆ ಬಳಿಕವೂ ಬದುಕಿ ಬಂದಿರಲಿಲ್ಲ.

ಇದಾದ ಬಳಿಕ 2014 ರಲ್ಲಿ ಯಾದಗಿರಿ ಜಿಲ್ಲೆಯಿಂದ ಕೂಲಿಗಾಗಿ ಬಂದಿದ್ದ ಹನುಮಂತ ಪಾಟೀಲ ಎಂಬಬರ ಮಗಳು ಮೂರು ವರ್ಷದ ಅಕ್ಷತಾ ಎಂಬ ಬಾಲೆ ಕೂಡ ವಿಜಯಪುರ ತಾಲೂಕಿನಲ್ಲಿ ಇಂಥದ್ದೇ ದುರಂತದಲ್ಲಿ ಸಿಲುಕಿ ಸಾವಿಗೀಡಾಗಿದ್ದಳು.

ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದ ಜಮೀನಿನಲ್ಲಿ ಅಕ್ಷತಾ ಪ್ರಕರಣ ನಡೆದಿತ್ತು. ಹೆತ್ತವರು ಕೂಲಿಗಾಗಿ ತೋಟದ ವಸ್ತಿಯಲ್ಲಿ ಇದ್ದಾಗ ಪಕ್ಕದ ಜಮೀನನಲ್ಲಿ ಆಟವಾಡಲು ಹೋಗಿದ್ದ ಅಕ್ಷತಾ ವಿಫಲವಾಗಿದ್ದ ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿದ್ದಳು.

ಬಾಲಕಿಯ ರಕ್ಷಣೆಗಾಗಿ, ಹೈದ್ರಾಬಾದ್‍ನಿಂದ ಎನ್‍ಡಿಆರ್‍ಎಫ್, ಬೆಳಗಾವಿಯಿಂದ ಎಸ್‍ಡಿಆರ್‍ಎಫ್ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಆಗಮಿಸಿದ್ದ ರಕ್ಷಣಾ ತಂಡಗಳು ವಾರ ಪೂರ್ತಿ ನಡೆಸಿದ ಕಾರ್ಯಾಚರಣೆ ಬಳಿಕವೂ ಸಫಲವಾಗಿ ಅಕ್ಷತಾ ಬದುಕಿ ಬಂದಿರಲಿಲ್ಲ.

Advertisement

16 ವರ್ಷಗಳಲ್ಲಿ ಕೊಳವೆಯಲ್ಲಿ ಮಗು ಬಿದ್ದ ಎರಡು ಕಹಿ ಘಟನೆಗಳು ಮಾಸುವ ಮುನ್ನವೇ ಇದೀಗ ಇಂಡಿ ತಾಲೂಕಿನಲ್ಲೇ ಸಾತ್ವಿಕ್ ಮುಜುಗೊಂಡ ಪ್ರಕರಣ ನಡೆದಿದ್ದು, ರಕ್ಷಣಾ ಕಾರ್ಯಾಚರಣೆ ಬಿರುಸಾಗಿ ಸಾಗಿದೆ.

ಕೊಳವೆ ಬಾವಿಗೆ ಬಿದ್ದು ಮಗು ಮೃತಪಟ್ಟ ಮೊದಲ ದುರಂತ ಘಟನೆ ರಾಯಚೂರು ಜಿಲ್ಲೆಯಲ್ಲಿ ಸಂಭವಿಸಿತ್ತು. 2005 ರಲ್ಲಿ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನೀರಮಾನವಿ ಯಲ್ಲಮ್ಮದೇವಿ ಗುಡ್ಡದ ಪರಿಸರದಲ್ಲಿ ಸಂದೀಪ ಎಂಬ ಬಾಲಕ ಇದೇ ರೀತಿ ಕೊಳವೆ ಬಾವಿಗೆ ಬಿದ್ದು ದುರಂತ ಸಾವು ಕಂಡಿದ್ದ.

ಸಣ್ಣವೆಂಟಕೇಶ ಎಂಬವರ ಜಮೀನಿನಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂದೀಪ ವಿಫಲ ಕೊಳವೆ ಬಾವಿಗೆ ಬಿದ್ದು, ಐದಾರು ದಿನಗಳ ಕಾರ್ಯಾಚರಣೆ ಬಳಿಕವೂ ಬದುಕಿ ಬಂದಿರಲಿಲ್ಲ. ರಾಯಚೂರು ಜಿ.ಪಂ. ಸಿಇಒ ಆಗಿದ್ದ ಎನ್.ಮಂಜುನಾಥ ಪ್ರಸಾದ ಆಗ ಜಿಲ್ಲಾಧಿಕಾರಿ ಪ್ರಭಾರ ಹುದ್ದೆಯಲ್ಲಿದ್ದರು. ಸ್ಥಳಕ್ಕೆ ಆಗಮಿಸಿ ಇಡೀ ಕಾರ್ಯಾಚರಣೆ ಮುಗಿಯುವ ವರೆಗೂ ಸ್ಥಳದಲ್ಲೇ ಠಿಕಾಣಿ ಹೂಡಿದ್ದರು.

– ಜಿ.ಎಸ್.ಕಮತರ

Advertisement

Udayavani is now on Telegram. Click here to join our channel and stay updated with the latest news.

Next