Advertisement

ಕೊಳವೆ ಬಾವಿಗೆ ಬಿದ್ದು 16 ಅಡಿ ಆಳದಲ್ಲಿ ಸಿಲುಕಿರುವ ಮಗು: ರಕ್ಷಣಾ ಕಾರ್ಯಾಚರಣೆ ಚುರುಕು

09:58 PM Apr 03, 2024 | Team Udayavani |

ಇಂಡಿ(ವಿಜಯಪುರ) : ಜಿಲ್ಲೆಯಲ್ಲಿ ಎರಡು ವರ್ಷದ ಮಗುವೊಂದು ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಬುಧವಾರ ಸಂಜೆ ವರದಿಯಾಗಿದೆ. ಕೊಳವೆ ಬಾವಿಗೆ ಬಿದ್ದಿರುವ ಮಗುವಿನ ರಕ್ಷಣೆಗಾಗಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಬದುಕಿರುವ ಮಗುವಿನ ಉಸಿರಾಟಕ್ಕಾಗಿ ಆಕ್ಸಿಜನ್ ಪೂರೈಕೆ ಕೆಲಸ ನಡೆದಿದೆ.

Advertisement

ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಜಮೀನಿನಲ್ಲಿ ತೆರೆದ ಕೊಳವೆ ಭಾವಿಗೆ ಬಿದ್ದಿರುವ ಮಗುವನ್ನು ಸಾತ್ವಿಕ್ ಮುಜಗೊಂಡ (2) ಎಂದು ಗುರುತಿಸಲಾಗಿದೆ. ಮಗುವಿನ ರಕ್ಷಣೆಗಾಗಿ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಮತ್ತೊಂದೆಡೆ ಮಗುವಿನ ವಯೋಮಾನಕ್ಕೆ ತಕ್ಕಂತೆ ಉಸಿರಾಟಕ್ಕೆ ಅಗತ್ಯವಾದ ಆಕ್ಸಿಜನ್ ಪೂರೈಕೆಗಾಗಿ ತಾಲೂಕ ಆರೋಗ್ಯಾಧಿಕಾರಿ ಡಾ.ಅರ್ಚನಾ ನೇತೃತ್ವದಲ್ಲಿ ವೈದ್ಯರ ತಂಡ ಕರ್ತವ್ಯದಲ್ಲಿ ತೊಡಗಿದೆ. ಸ್ಥಳದಲ್ಲಿ ಆಂಬ್ಯುಲೆನ್ಸ್ ಸಿದ್ದತೆಯಲ್ಲಿ ಇರಿಸಿಕೊಳ್ಳಲಾಗಿದೆ.

ಕೊಳವೆ ಬಾವಿಗೆ ಸಿಸಿ ಕೆಮೆರಾ ಬಿಟ್ಟಿರುವ ಅಧಿಕಾರಿಗಳು ಮಗುವಿನ ಪರಿಸ್ಥಿತಿ ಅವಲೋಕನಕ್ಕೆ ಮುಂದಾಗಿದ್ದಾರೆ. ಸಿಸಿ ಕೆಮೆರಾದ ಆಧಾರದಲ್ಲಿ ಮಗು ಕೊಳವೆ ಬಾವಿಯಲ್ಲಿ 16 ಅಡಿ ಆಳದಲ್ಲಿ ಸಿಲುಕಿಕೊಂಡಿದೆ. ಮಗು ಸಿಕ್ಕಿಕೊಂಡಿರುವ ಆಧಾರದಲ್ಲಿ ಮಗು ಇರುವ ಸ್ಥಳಕ್ಕೆ ರಕ್ಷಣೆಗಾಗಿ ತೆರಳಲು ಸುಮಾರು 20 ಅಡಿ ದೂರದಿಂದ ಸುರಂಗ ಕೊರೆಯಲು ಆರಂಭಿಸಿದ್ದಾರೆ.

ಜಮೀನಿನಲ್ಲಿ ಆಟವಾಡಲು ಹೋಗಿದ್ದ ವೇಳೆ ಸಾತ್ವಿಕ್ ಆಯತಪ್ಪಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಸುದ್ದಿ ತಿಳಿಯುತ್ತಲೇ ಇಂಡಿ ಉಪವಿಭಾಧಿಕಾರಿ ಆಬೀದ್ ಗದ್ಯಾಳ, ಡಿಎಸ್‍ಪಿ ಜಗದೀಶ ನೇತೃತ್ವದಲ್ಲಿ ಇಂಡಿ ಗ್ರಾಮೀಣ, ನಗರ ಠಾಣೆ ಪೆÇಲೀಸರು, ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

Advertisement

ಮಗುವಿನ ರಕ್ಷಣೆಗಾಗಿ ತುರ್ತಾಗಿ 2 ಜೆಸಿಬಿ ತರಿಸಿದ್ದು, 2 ಹಿಟಾಚಿಗಳನ್ನೂ ಬಳಸಲು ಯೋಜಿಸಲಾಗಿದೆ. ಹಿಟಾಚಿ ಮೂಲಕ ಸುರಂಗ ಮಾರ್ಗಕ್ಕಾಗಿ ತೆಗೆಯುವ ಮಣ್ಣನ್ನು ಸಾಗಿಸಲು 8 ಟ್ಯಾಕ್ಟರ್ ಬಳಸಾಗುತ್ತಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಬಾಲಕ ಸಾತ್ವಿಕನ ಕುಟುಂಬದವರು ಲಚ್ಯಾಣ ಗ್ರಾಮದ ಹೊರ ವಲಯದಲ್ಲಿರುವ ತಮ್ಮ ಜಮೀನಿನಲ್ಲಿ ಮಂಗಳವಾರ ಎರಡು ಕೊಳವೆ ಬಾವಿ ಕೊರೆಸಿದ್ದರು. 280 ಅಡಿ ಹಾಗೂ 350 ಅಡಿ ಆಳದಲ್ಲಿ ಕೊರೆಸಿದ ಎರಡು ಕೊಳವೆಬಾವಿಯಲ್ಲಿ ಒಂದರಲ್ಲಿ ನೀರು ಕಾಣಿಸಿಕೊಂಡಿತ್ತು. ವಿಫಲ ಕೊಳವೆ ಬಾವಿಗೆ ಕೇಸಿಂಗ್ ಹಾಕಿರಲಿಲ್ಲ, ಬಾವಿಯ ಬಾಯಿಯನ್ನೂ ಮುಚ್ಚಿರಲಿಲ್ಲ.

ನೀರು ಕಾಣಿಸಿಕೊಂಡಿದ್ದ ಕೊಳವೆ ಭಾವಿಗೆ ಬುಧವಾರ ಸಂಜೆ ಮೋಟರ್ ಇಳಿಸಲು ಸಾತ್ವಿಕನ ಪಾಲಕರು ಜಮೀನಿಗೆ ಹೋಗಿದ್ದರು.

ಪಾಲಕರೊಂದಿಗೆ ಜಮೀನಿಗೆ ಹೋಗಿದ್ದ ವೇಳೆ ವಿಫಲ ಕೊಳವೆ ಬಾವಿಯ ಬಾಯಿಯನ್ನು ಮುಚ್ಚದೇ ತೆರೆದು ಬಿಡಲಾಗಿತ್ತು. ಪರಿಣಾಮ ಮುಚ್ಚದ ವಿಫಲ ಕೊಳವೆ ಬಾವಿಯತ್ತ ಆಡಲು ಹೋಗಿದ್ದ ಸಾತ್ವಿಕ್ ಸಂಜೆ 5-25 ರ ಸುಮಾರಿಗೆ ಕೊಳವೆ ಬಾವಿಗೆ ಬಿದ್ದಿದೆ.

ಕೂಡಲೇ ಸ್ಥಳೀಯರ ನೆರವೊಂದಿಗೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಸುಮಾರು ಅರ್ಧ-ಮುಕ್ಕಾಲು ಗಂಟೆಯಲ್ಲೇ ಪೊಲೀಸರು, ಅಗ್ನಿಶಾಮಕ ಸೇವೆಯ ಸಿಬ್ಬಂದಿ ತುರ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸದ್ಯ ಮಗು ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ರಕ್ಷಣಾ ಕಾರ್ಯಾರಣೆ ಸ್ಥಳದಲ್ಲಿ ಕತ್ತಲು ಆವರಿಸಿದ್ದು, ಭಾರಿ ಬೆಳಕಿಗಾಗಿ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಸುದ್ದಿ ತಿಳಿದು ಜಿಲ್ಲಾಡಳಿತದ ಸೂಚನೆ ಮೇರೆಗೆ ಮಗುವಿನ ರಕ್ಷಣಾ ಕಾರ್ಯಾರಣೆಗೆ ಅಗತ್ಯ ಇರುವ ಹೆಚ್ಚುವರಿ ಸೌಲಭ್ಯ ಹಾಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳಲು ಜಿಲ್ಲಾಧಿಕಾರಿ ಭೂಬಾಲನ್, ಎಸ್ಪಿ ಋಷಿಕೇಶ ಭಗವಾನ್ ಸ್ಥಳಕ್ಕೆ ಧಾವಿಸಿದ್ದಾರೆ.

ಇದನ್ನೂ ಓದಿ: ನರೇಗಾ ಯೋಜನೆಯಲ್ಲಿ ಕೊರಟಗೆರೆಗೆ ಕೊನೆ ಸ್ಥಾನ… ಪಿಡಿಓಗೆ ಎಚ್ಚರಿಕೆ ನೀಡಿದ ಜಿ.ಪಂ ಸಿಇಓ

ಸಾತ್ವಿಕ ಸುರಕ್ಷಿತ ರಕ್ಷಣೆಗೆ ಸಚಿವ ಪಾಟೀಲ ಸೂಚನೆ
ವಿಜಯಪುರ : ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಮಗುವೊಂದು ಪಾಳು ಕೊಳವೆ ಬಾವಿಗೆ ಬಿದ್ದಿರುವುದಕ್ಕೆ ಕೈಗಾರಿಕೆ ಖಾತೆ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಗುವನ್ನು ಸುರಕ್ಷಿತವಾಗಿ ರಕ್ಷಿಸಲು ಕ್ಷಿಪ್ರ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಕಟ್ಟುನಿಟಿಟನ ಸೂಚನೆ ನೀಡಿದ್ದು, ಸ್ಥಳದಲ್ಲಿನ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.

ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ಭೂಬಾಲನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಸೂಕ್ತ ನಿರ್ದೇಶನ ನೀಡಿರುವ ಸಚಿವ ಎಂ.ಬಿ.ಪಾಟೀಲ, ಮಗುವನ್ನು ಸುರಕ್ಷಿತ ರಕ್ಷಿಸಲು ಆದ್ಯತೆ ನೀಡುವಂತೆ ಸೂಚನೆ ನೀಡಿದ್ದಾರೆ.

ಇದಲ್ಲದೇ ಮಗುವನ್ನು ಸುರಕ್ಷಿತವಾಗಿ ರಕ್ಷಿಸಲು ನಿಗಾ ವಹಿಸಿ ಕೆಲಸ ಮಾಡಲು ಅವರು ಸೂಚಿಸಿದ್ದು, ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next