Advertisement

ಪಾಠವಿಲ್ಲ, ಪರೀಕ್ಷೆಯಿಲ್ಲ, ಶಿಕ್ಷಕರಿಲ್ಲ.. ದಂಪತಿ ಆರಂಭಿಸಿದ ಈ ಶಿಕ್ಷಣ ವ್ಯವಸ್ಥೆಯೇ ವಿಭಿನ್ನ ಮತ್ತು ವಿಶೇಷ.!

03:23 PM Dec 10, 2022 | Team Udayavani |

ಪ್ರತಿಯೊಬ್ಬರಿಗೂ ಶಿಕ್ಷಣ ಬೇಕು. ಶಿಕ್ಷಣವಿದ್ದರೆ ಸಮಾಜದಲ್ಲಿ ನಾಲ್ಕು ಜನರ ಮುಂದೆ ಗೌರವ ಸಿಗುತ್ತದೆ. ಒಂದೊಳ್ಳೆ ಕೆಲಸವೂ ಸಿಗುತ್ತದೆ. ಈ ಮಾತನ್ನು ಈಗಿನ ಕಾಲದವರು ನಂಬುತ್ತಲೇ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ,ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ‌. ಮಕ್ಕಳು ಕಲಿಯುತ್ತಾರೆ. ಪರೀಕ್ಷೆ ಬರೆಯುತ್ತಾರೆ. ಓದುತ್ತಾರೆ. ಬೆಳೆಯುತ್ತಾರೆ. ಪಾಠಗಳನ್ನೇ ಬಾಯಿಪಾಠ ಮಾಡಿ, ಕೆಲಸ ಹುಡುಕಲು ಆರಂಭಿಸುತ್ತಾರೆ. ಆದರೆ ಕಲಿತ ವಿಷಯಕ್ಕೆ ಕೆಲಸ ಸಿಗುವುದು ಕೆಲವೇ ಕೆಲವು ಮಂದಿಗೆ ಮಾತ್ರ. ಉಳಿದವರು ಯಾವುದೋ ಒಂದು ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾರೆ.

Advertisement

ಎಷ್ಟೋ ಸಲ ನಮಗೆ ಶಾಲೆಗೆ ಹೋಗಲು ಉದಾಸೀನ ಆಗುವುದುಂಟು. ಪರೀಕ್ಷೆಗಳೇ ಇರಬಾರದು, ಪುಸ್ತಕಗಳು ಇರಬಾರದೆಂದು ಶಾಲಾ ದಿನಗಳಲ್ಲಿ ಒಂದು ದಿನವಾದರೂ ಈ ರೀತಿ ಅನ್ನಿಸಿರುತ್ತದೆ.

ಪರೀಕ್ಷೆಯೇ ಇಲ್ಲದ,ಶಿಕ್ಷಕರೇ ಇಲ್ಲದ ಶಾಲೆಯೊಂದು ಇದೆ.! ಮಹಾರಾಷ್ಟ್ರದ ಅರಣ್ಯ ಪ್ರದೇಶದಲ್ಲಿರುವ ಧಂಪುರದಲ್ಲಿ ಇಂಥದ್ದೊಂದು ಶಾಲೆಯಿದೆ. ಇಲ್ಲಿ ಶಾಲೆಗಳಲ್ಲಿರುವ ಹಾಗೆ ಗೋಡೆ ಮಧ್ಯ ಕೂತು ಪಾಠ ಕೇಳುವ, ತಿಂಗಳಿಗೊಮ್ಮೆ ಪರೀಕ್ಷೆ, ನಿತ್ಯದ ಹೋಮ್ ವರ್ಕ್ ಗಳಿರುವುದಿಲ್ಲ. ತಪ್ಪು ಮಾಡಿದರೆ ಗದರುವ ಶಿಕ್ಷಕರು ಕೂಡ ಇಲ್ಲ. ಆದರೂ ಇದು ಶಾಲೆ.

ಯುವ ಜನರಿಗೆ ಗ್ರಾಮದಲ್ಲೇ ಉದ್ಯೋಗವನ್ನು ಸೃಷ್ಟಿಸುವ ಉದ್ದೇಶದಿಂದ 2007 ರಲ್ಲಿ ಮಹಾರಾಷ್ಟ್ರದ ಧಂಪುರ ಪ್ರದೇಶದಲ್ಲಿ ಸಚಿನ್‌ ದೇಸಾಯಿ ದಂಪತಿ ʼಸ್ಯಮಂತಕ್ʼ ( ಯೂನಿವರ್ಸಿಟಿ ಆಫ್ ಲೈಫ್) ನ್ನು ಸ್ಥಾಪಿಸುತ್ತಾರೆ. ಇದೊಂದು ಶಾಲೆ. ಆದರೆ ಪಾಠಗಳನ್ನು ಶಿಕ್ಷಕರಿಲ್ಲ. ಗ್ರಾಮದಲ್ಲೇ ಸ್ವದ್ಯೋಗವನ್ನು ನೀಡುವುದೇ ಈ ಶಾಲೆಯ ಉದ್ದೇಶ.

ಉಳಿದ ಶಾಲೆಯಂತೆ ಇಲ್ಲಿ ಸಮವಸ್ತ್ರವಿದೆ. ಬ್ಯಾಗ್‌ ಗಳಿವೆ ಅದರಲ್ಲಿ ಪಠ್ಯಪುಸ್ತಕಗಳಿಲ್ಲ. ಶಾಲೆ ಆರಂಭಿಸಿದ ಮೊದಲಿಗೆ ವಿದ್ಯಾರ್ಥಿಯಾಗಿ ಸಚಿನ್‌ ಅವರ ಮಗಳು ʼಮೃಣಾಲಿನಿʼ ಅವರನ್ನೇ ಈ ಶಿಕ್ಷಣದ ಹೊಸ ವ್ಯವಸ್ಥೆಗೆ ವಿದ್ಯಾರ್ಥಿನಿಯಾಗಿ ಆಯ್ದುಕೊಳ್ಳುತ್ತಾರೆ.ಇಂದು ಮೃಣಾಲಿನಿ ಕೃಷಿಯ ಕೌಶಲ್ಯ, ಪರಿಸರದ ಅಧ್ಯಾಯನ, ಪರಂಪರೆಯ ಮಾಹಿತಿ, ಅಡುಗೆ ಮನೆಯ ಕೆಲಸ,ನೈಸರ್ಗಿಕವಾಗಿ ಬಣ್ಣ ತಯಾರಿಸುವುದು, ಹಾಗು ವಾಸ್ತು ಶಿಲ್ಪದ ಬಗ್ಗೆ ಕಲಿತುಕೊಂಡು ಪರಿಣತಿ ಹೊಂದಿದ್ದಾರೆ.

Advertisement

ಸಚಿನ್‌ ದೇಸಾಯಿ ದಂಪತಿ ತಮ್ಮ ಯೂನಿವರ್ಸಿಟಿ ಆಫ್ ಲೈಫ್ ಶಾಲೆಯಲ್ಲಿ ವಿಶಾಲವಾದ ತೋಟ,ಗೋಶಾಲೆ ,ಲ್ಯಾಬ್‌ ಮುಂತಾದ ಸೌಲಭ್ಯವನ್ನು ಹೊಂದಿದ್ದಾರೆ. ಅಂಚಿನ ಬಂಗಲೆಯಂತಿರುವ ಈ ಶಾಲೆಯ ಸುತ್ತ ಮುತ್ತ ಸುಂದರವಾದ ಪ್ರಕೃತಿ ನೋಟವಿದೆ ಅದೇ ಶಾಲಾ ಮಕ್ಕಳಿಹೆ ಪಠ್ಯ ವಿಷಯ ಎನ್ನುವುದೇ ವಿಶೇಷ.

ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲಿ ಆಹಾರ ಪ್ರಯೋಗಾಲಯದಲ್ಲಿ ಸಂಶೋಧನೆ ನಡೆಸಿದರೆ, ಇತರರು ಗೋಶಾಲೆಯಲ್ಲಿ ಹಸುವಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಪ್ರಯೋಗಿಸುತ್ತಾರೆ.

ಶಾಲೆಯಲ್ಲಿ ಸ್ವಯಂ ಎಂಬ ಉದ್ಯಮಶೀಲ ಉದ್ಯಮದ ಕೋಣೆಯೂ ಇದೆ. ಅಲ್ಲಿ ವಿದ್ಯಾರ್ಥಿಗಳು ನೈಸರ್ಗಿಕ ಉತ್ಪನ್ನಗಳನ್ನು ತಯಾರಿಸುತ್ತಾರೆ, ಸೇಬಿನಿಂದ ಸಿರಪ್, ಹಸಿ ಹಲಸಿನ ಉಪ್ಪಿನಕಾಯಿ, ಅರಿಶಿನ ಪುಡಿ ಮತ್ತು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಸಾಬೂನುಗಳನ್ನು ತಯಾರಿಸುತ್ತಾರೆ.

ಇಲ್ಲಿ ಶಾಲೆಯಲ್ಲಿರುವಂತೆ ಅಡ್ಡ ಗೋಡೆಗಳಿಲ್ಲ. ಪಾಠ, ಪರೀಕ್ಷೆಗಳಿಲ್ಲ. ವಿದ್ಯಾರ್ಥಿಗಳು ಮುಕ್ತವಾಗಿ ಸ್ವಯಂಯಾಗಿ ಉದ್ಯೋಗವನ್ನು ಆಯ್ದುಕೊಳ್ಳಲು ವಿದ್ಯಾರ್ಥಿಗಳಿಗೆ ಕೌಶಲ್ಯಯುತ ಕಲಿಕೆಯನ್ನು ನೀಡುತ್ತಿರುವ ಶಾಲೆಯಲ್ಲಿ ಅನೇಕ ವಿದ್ಯಾರ್ಥಿಗಳಿದ್ದಾರೆ.

ಶಿಕ್ಷಣವೆಂದರೆ ಪರೀಕ್ಷೆ ಮಾತ್ರವಲ್ಲ. ಪಠ್ಯೇತರ ಚಟುವಟಿಕೆ ಅಂದರೆ ಕೌಶಲ್ಯವನ್ನು ಕಲಿಸುವುದು ಕೂಡ ಒಂದು ಶಿಕ್ಷಣ ಎನ್ನುವುದನ್ನು ಸಚಿನ್‌ ದೇಸಾಯಿ ದಂಪತಿ ತೋರಿಸಿ ಕೊಟ್ಟಿದ್ದಾರೆ. ಇಲ್ಲಿ ಸಚಿನ್‌ ಹಾಗೂ ಅವರ ಪತ್ನಿಯೇ ಶಿಕ್ಷಕಿಯರು.ಇಬ್ಬರೂ ಪಾಠ ಕಲಿಸುವ ಶಿಕ್ಷಕರಲ್ಲ ಜೀವನವನ್ನು ಕಲಿಸುವವರು.

ದಂಪತಿಯ ಈ ಹೊಸ ಬಗೆಯ ಶಿಕ್ಷಣ ವ್ಯವಸ್ಥೆಗೆ ಅನೇಕರು ಶ್ಲಾಘಿಸಿದ್ದಾರೆ. ಮುಂದೊಂದು ಇದೇ ಮಾದರಿಯ ಶಿಕ್ಷಣ ಇತರ ಕಡೆಯೂ ಬಂದರೆ ಅಚ್ಚರಿ ಪಡಬೇಕಿಲ್ಲ.

–  ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next