Advertisement

ವಿ.ವಿ. ಪ್ಯಾಟ್‌ ಇಲ್ಲ: ಮತದಾನ ಅವಧಿ ಇಳಿಕೆ

09:51 PM May 11, 2019 | mahesh |

ಸುಳ್ಯ: ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮತ ಪತ್ರದಲ್ಲಿ ಈ ಬಾರಿ ಸ್ಪರ್ಧಾ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳ ಮುಂದೆ ಅವರ ಭಾವಚಿತ್ರ ಕಾಣಿಸಲಿದೆ. ಮತದಾನ ವೇಳೆ ಅಭ್ಯರ್ಥಿ ಗುರುತಿಸುವ ಸಂದರ್ಭ ಮತದಾರರಿಗೆ ಗೊಂದಲ ಉಂಟಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹೀಗಾಗಿ ಚಿಹ್ನೆಯ ಗುರುತು ಇಲ್ಲದಿ ದ್ದರೂ ಅಭ್ಯರ್ಥಿ ಭಾವಚಿತ್ರ ಗಮನಿಸಿ ಮತ ಚಲಾಯಿಸಲು ಮತದಾರರಿಗೆ ಅನುಕೂಲವಾಗಲಿದೆ.

Advertisement

ಭಾವಚಿತ್ರವಿರುವ ಮತಪತ್ರ
ಒಂದೇ ವಾರ್ಡ್‌ ನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಂದರ್ಭ ಗಳಿರುವುದರಿಂದ ಅಭ್ಯರ್ಥಿ ಗುರುತಿಸಲು ಮತಪತ್ರದಲ್ಲಿ ಅವರ ಹೆಸರಿನ ಮುಂದೆ ಅವರ ವೃತ್ತಿ ಅಥವಾ ವಿಳಾಸ ಇತ್ಯಾದಿ ಗಳನ್ನು ತೋರಿಸಲಾಗುತಿತ್ತು. ಲೋಕಸಭೆ, ವಿಧಾನಸಭಾ ಚುನಾವಣೆ ಸಂದರ್ಭ ಭಾವಚಿತ್ರ ಮುದ್ರಣದ ಮತಪತ್ರ ಬಳಸಲಾಗಿತ್ತು. ಈ ಬಾರಿ ಸ್ಥಳೀಯ ಚುನಾವಣೆ ಸಂದರ್ಭ ಮತದಾರನಿಗೆ ಗೊಂದಲ ಉಂಟಾಗುವುದನ್ನು ತಪ್ಪಿಸಲು ಮತಪತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರಿನ ಮುಂದೆ ಭಾವಚಿತ್ರ ಮುದ್ರಿಸಲಾಗಿದೆ.

ವಿ.ವಿ. ಪ್ಯಾಟ್‌ ಇಲ್ಲ
ನಿರ್ದಿಷ್ಟ ಅಭ್ಯರ್ಥಿಗೆ ಮತ ಚಲಾ ಯಿಸಿದ್ದನ್ನು ಖಚಿತಪಡಿಸಿ ಕೊಳ್ಳಲು ಇರುವ ಯಂತ್ರ ವಿ.ವಿ. ಪ್ಯಾಟ್‌. ಮತ ಚಲಾ ಯಿಸಿದ ತತ್‌ಕ್ಷಣ ವಿ.ವಿ. ಪ್ಯಾಟ್‌ ಯಂತ್ರ ಮತವನ್ನು ಮುದ್ರಿಸುತ್ತದೆ. ಈ ಮುದ್ರಿತ ಮತ ಮತದಾರರಿಗೆ 7 ಸೆಕೆಂಡ್‌ ಕಾಲ ಗೋಚರಿಸುತ್ತದೆ. ಮತ ಯಂತ್ರ ದೋಷವುಂಟಾದರೆ ಮುದ್ರಿತ ಮತಗಳನ್ನು ಚುನಾವಣ ಆಯೋಗದ ಅನುಮತಿಯೊಂದಿಗೆ ಎಣಿಕೆಗೆ ಬಳಕೆ ಮಾಡಿಕೊಳ್ಳಬಹುದು. ಆದರೆ, ಈ ಬಾರಿ ವಿ.ವಿ. ಪ್ಯಾಟ್‌ ವ್ಯವಸ್ಥೆ ಕೈ ಬಿಡಲಾಗಿದೆ.

ಎರಡು ಹೊಸ ವಾರ್ಡ್‌
ಈ ಬಾರಿ ಸುಳ್ಯ ನ.ಪಂ.ನಲ್ಲಿ ಎರಡು ವಾರ್ಡ್‌ಗಳು ಹೆಚ್ಚಳಗೊಂಡಿದೆ. 18ರಿಂದ 20 ವಾರ್ಡ್‌ಗೇರಿದೆ. ಮಿಲಿಟರಿ ಗ್ರೌಂಡ್‌, ಜಯನಗರ (19ನೇ ವಾರ್ಡ್‌) ಹಾಗೂ ಕಾನತ್ತಿಲ, ಜಟ್ಟಿಪಳ್ಳ, ಬ್ರಹ್ಮರಗಯ ರಸ್ತೆ ಎಡಬದಿ, ನಡುಬೈಲು, ಮೊಗರ್ಪಣೆ (20ನೇ ವಾರ್ಡ್‌) ಹೊಸ ಎರಡು ವಾರ್ಡ್‌ ರಚನೆಯಾಗಿವೆ. ಈ ಎರಡು ವಾರ್ಡ್‌ನ ಪ್ರದೇಶಗಳು ಹಿಂದೆ ವಾರ್ಡ್‌ ಸಂಖ್ಯೆ – 3, 18ರೊಳಗೆ ಸೇರಿದ್ದವು. ಈಗ ಪ್ರತ್ಯೇಕಗೊಂಡು ಹೊಸ ವಾರ್ಡ್‌ ಆಗಿವೆ. ವಾರ್ಡ್‌ ನಂಬರ್‌ 19ರಲ್ಲಿ 947 ಮತದಾರರಿದ್ದು, 463 ಪುರುಷರು, 388 ಮಹಿಳೆಯರು ಹಾಗೂ ವಾರ್ಡ್‌-20 ರಲ್ಲಿ 769 ಮತದಾರರಿದ್ದು, 381 ಪುರುಷರು ಮತ್ತು 388 ಮಹಿಳಾ ಮತದಾರರು ಹಕ್ಕು ಚಲಾವಣೆಗೆ ಅರ್ಹತೆ ಹೊಂದಿದ್ದಾರೆ.

1 ಗಂಟೆ ಇಳಿಕೆ
ವಿಧಾನಸಭೆ, ಲೋಕಸಭೆ ಚುನಾವಣೆ ಸಂದರ್ಭ ಬೆಳಗ್ಗೆ 7 ರಿಂದ 6 ಗಂಟೆ ತನಕ ಮತದಾನಕ್ಕೆ ಸಮಯ ನಿಗದಿಯಾಗಿತ್ತು¤. ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 1 ಗಂಟೆ ಸಮಯ ಇಳಿಕೆ ಮಾಡಲಾಗಿದೆ. ಬೆಳಗ್ಗೆ 7ರಿಂದ ಸಂಜೆ 5ರ ತನಕ ಮತದಾನಕ್ಕೆ ಸಮಯ ನಿಗದಿಪಡಿಸಲಾಗಿದೆ. ವಿ.ವಿ. ಪ್ಯಾಟ್‌ ಬಳಕೆ ಸಂದರ್ಭ ಪ್ರತಿ ಮತ ಚಲಾವಣೆ ಸಂದರ್ಭ 7 ಸೆಂಕೆಂಡ್‌ ಹೆಚ್ಚು ವ್ಯಯವಾಗುತಿತ್ತು. ಆದರೆ ಈ ಚುನಾವಣೆ ಸಂದರ್ಭ ವಿ.ವಿ. ಪ್ಯಾಟ್‌ ಇಲ್ಲದ ಕಾರಣ ಆ ಸಮಯ ಉಳಿತಾಯವಾಗುತ್ತದೆ. ಹೀಗಾಗಿ ವಿ.ವಿ. ಪ್ಯಾಟ್‌ ಕಾರಣದಿಂದ ಹೆಚ್ಚುವರಿಯಾಗಿ ನಿಗದಿಪಡಿಸಿದ್ದ 1 ಗಂಟೆ ಸಮಯ ಕಡಿಮೆ ಮಾಡಲಾಗಿದೆ. ಹೀಗಾಗಿ ಮತದಾರರು ಹಕ್ಕು ಚಲಾವಣೆಯಲ್ಲಿನ ಸಮಯ ಬದಲಾವಣೆ ಗಮನಿಸಿಕೊಳ್ಳಬೇಕಿದೆ. ಸಂಜೆ ಕಾಲಾವಕಾಶ ಇದೆ ಎಂದು ವಿಳಂಬ ಮಾಡುವಂತಿಲ್ಲ.

Advertisement

12 ವಾರ್ಡ್‌ಗಳಲ್ಲಿ ಮಹಿಳಾ ಮೇಲುಗೈ
17, 18, 19 ಮತ್ತು 20ನೇ ವಾರ್ಡ್‌ ನಲ್ಲಿ ಮಹಿಳಾ ಮತದಾರರೇ ನಿರ್ಣಾಯಕರು. ಜತೆಗೆ 9 ವಾರ್ಡ್‌ ಗಳು ಮಹಿಳಾ ಮೀಸಲು ಕ್ಷೇತ್ರವಾಗಿದೆ.

 ಮತದಾನ ಅವಧಿ ಬದಲು
ಕೆಲ ದಿನಗಳ ಹಿಂದೆ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾನಕ್ಕೆ ನಿಗದಿಯಾಗಿದ್ದ ಅವಧಿಗೂ, ಸ್ಥಳೀಯಾಡಳಿತ ಚುನಾವಣೆಗೆ ನಿಗದಿ ಆಗಿರುವ ಸಮಯ ಬದಲಾವಣೆ ಇದೆ. ಬೆಳಗ್ಗೆ 7ರಿಂದ ಸಂಜೆ 5ರೊಳಗೆ ಹಕ್ಕು ಚಲಾಯಿಸಬಹುದು. ಈ ಬಾರಿ ವಿ.ವಿ.ಪ್ಯಾಟ್‌ ಬಳಕೆಯಿಲ್ಲ. ಮತ ಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರ ಇರಬಹುದು.
– ಮಂಜುನಾಥ ಎನ್‌.ಚುನಾವಣಾಧಿಕಾರಿ
(ವಾರ್ಡ್‌ 11 -20)

- ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next